ಕೋವಿಡ್ ಹಾವಳಿ ನಿಲ್ಲುವ ಸೂಚನೆಯಂತೂ ಸಿಗುತ್ತಿಲ್ಲ. ಭಾರತದಲ್ಲಂತೂ ನಿತ್ಯ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿರುವುದು, ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಸಿದೆ. ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಮೂರನೇ ಸ್ಥಾನದಲ್ಲಿರುವ ಭಾರ ತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3.35 ಲಕ್ಷದಷ್ಟಿದೆ. ಇನ್ನೊಂದೆಡೆ ಅಮೆರಿಕ ದಲ್ಲಂತೂ ತಿಂಗಳುಗಳು ಕಳೆದರೂ ಸೋಂಕಿನ ವೇಗ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಈಗಾಗಲೇ ಆ ದೇಶದಲ್ಲಿ 1 ಲಕ್ಷ 40 ಸಾವಿರಕ್ಕೂ ಅಧಿಕ ಜನ ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಎರಡನೇ ಹಾಟ್‌ಸ್ಪಾಟ್ ಬ್ರೆಜಿಲ್‌ನಲ್ಲೂ ಪರಿಸ್ಥಿತಿ ವಿಷಮಿಸು ತ್ತಲೇ ಇದೆ. ಇನ್ನು ಈ ಹಿಂದೆ ಕೋವಿಡ್ ಮುಕ್ತವೆಂದು ಕರೆದುಕೊಂಡಿದ್ದ ರಾಷ್ಟ್ರಗಳಲ್ಲೂ ವೈರಸ್ ಮತ್ತೆ ಹರಡಲು ಆರಂಭಿಸಿದೆ.
ಈ ಕಾರಣಕ್ಕಾಗಿಯೇ, ಈ ರೋಗವನ್ನು ಬೇರುಮಟ್ಟದಲ್ಲಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಅನೇಕ ರಾಷ್ಟ್ರಗಳು ಮುನ್ನಡೆಯುತ್ತಿವೆ. ಕೋವಿಡ್ ವಿರುದ್ಧದ ಲಸಿಕೆ ಅಭಿವೃದ್ಧಿಗಾಗಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಹಗಲುರಾತ್ರಿ ಪ್ರಯೋಗಗಳು ನಡೆದಿವೆ. ಗಮನಾರ್ಹ ಸಂಗತಿ ಎಂದರೆ, ಭಾರತದಲ್ಲೂ ದೇಶೀಯ ವಾಗಿ ಅಭಿವೃದ್ಧಿಪಡಿಸಲಾದ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗ ನಡೆದಿದೆ ಎನ್ನುವುದು. ಇದು ಯಶಸ್ವಿಯಾಗಲಿ ಎಂಬ ನಿರೀಕ್ಷೆ ದೇಶವಾಸಿಗಳದ್ದಾಗಿದೆ.
ಇಲ್ಲಿ ಹೇಳಲೇಬೇಕಾದ ಸಂಗತಿಯೆಂದರೆ ಭಾರತ ಕೋವಿಡ್ ವಿರುದ್ಧದ ಲಸಿಕೆಯ ಸಂಶೋಧನೆಯಲ್ಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲೂ ಮಹತ್ತರ ಪಾತ್ರ ವಹಿಸುವ ಸಾಮರ್ಥ್ಯ ಹೊಂದಿ ರುವುದು. ಇಂದು ಜಗತ್ತಿನ 70 ಪ್ರತಿಶತ ಲಸಿಕೆಗಳು (ವಿವಿಧ ರೋಗಗಳಿಗಾಗಿ) ಭಾರತದಿಂದಲೇ ರಫ್ತಾಗಿರುವುವು. ಈ ಕಾರಣಕ್ಕಾಗಿಯೇ ಭಾರತವೆಂದಷ್ಟೇ ಅಲ್ಲ, ಕೊರೊನಾ ವಿರುದ್ಧ ಲಸಿಕೆ ಕಂಡುಹಿಡಿಯುವಲ್ಲಿ ಅನ್ಯ ದೇಶಗಳು ಸಫಲವಾ ದರೂ ತ್ವರಿತ ಹಾಗೂ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಜಗತ್ತು ಭಾರತವನ್ನು ಅವಲಂಬಿಸಬಹುದು. ಈಗಾಗಲೇ ಕೋವಿಡ್ ವಿರುದ್ಧ ಲಸಿಕೆ ಸಂಶೋಧಿಸುತ್ತಿರುವ ವಿದೇಶಗಳ ಸಂಶೋಧನ ಸಂಸ್ಥೆಗಳು ಸಹ ಉತ್ಪಾದನೆಯ ವಿಚಾರದಲ್ಲಿ ಭಾರತದ ಕಂಪೆನಿಗಳೊಂದಿಗೆ ಒಪ್ಪಂದಗಳನ್ನೂ ಮಾಡಿಕೊಂಡಿವೆ.
ಈ ವಿಚಾರವಾಗಿ ಕೆಲವು ತಿಂಗಳುಗಳ ಹಿಂದೆ ಇಂಟರ್ ನ್ಯಾಶನಲ್ ವ್ಯಾಕ್ಸಿನ್ ಇನ್‌ಸ್ಟಿ ಟ್ಯೂಟ್‌ನ ನಿರ್ದೇಶಕ, ಪ್ರಖ್ಯಾತ ವಿಜ್ಞಾನಿ ಡಾ| ಜಿರೋಮ್ ಕಿಮ್ ಭಾರತವು ಕೋವಿಡ್ ವಿರುದ್ಧದ ವ್ಯಾಕ್ಸಿನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ಹೇಳಿದ್ದರು. ಈಗ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಸಹ ಇದೇ ಧಾಟಿಯಲ್ಲೇ ಮಾತನಾಡಿದ್ದಾರೆ.
ಭಾರತದ ಫಾರ್ಮಾ ಕಂಪೆನಿಗಳು ಈಗಾಗಲೇ ಇಡೀ ಜಗತ್ತಿಗೆ ಔಷಧಗಳನ್ನು ಪೂರೈಸುತ್ತಿವೆ. ಮುಂದಿನ ದಿನಗಳಲ್ಲಿ ಭಾರತದ ಫಾರ್ಮಾ ಉದ್ಯಮಗಳು ಜಗತ್ತಿಗೆ ಲಸಿಕೆಗಳನ್ನು ಪೂರೈಸುವ (ಕೋವಿಡ್ ವಿರುದ್ಧದ) ಆಶಾಭಾವನೆ ಇದೆ ಎಂದಿದ್ದಾರೆ ಗೇಟ್ಸ್. ಒಟ್ಟಿನಲ್ಲಿ ದೇಶ ಮತ್ತು ಜಗತ್ತು ಈ ಕೊರೊನಾ ವೈರಸ್‌ನಿಂದ ಆದಷ್ಟು ಬೇಗ ಮುಕ್ತವಾಗಲಿ, ಸಂಶೋಧನ ಕ್ಷೇತ್ರದ ಪ್ರಯತ್ನಗಳು ಸಫಲವಾಗಲಿ ಎಂದು ಆಶಿಸೋಣ.