Advertisement

Failures: ಬದುಕಿನಲ್ಲಿ ವೈಫಲ್ಯಗಳಿಗೆ ಮುಖಾಮುಖಿಯಾಗಲು ಮತ್ತು ಸಂಭ್ರಮಿಸಲು ಮಕ್ಕಳಿಗೆ ಕಲಿಸೋಣ

09:21 AM Sep 10, 2023 | Team Udayavani |

ಪ್ರತಿಯೊಂದು ಆತ್ಮಹತ್ಯೆಯೂ ಸಂಕೀರ್ಣವಾದ ದುರಂತವೊಂದರ ಪರಿಣಾಮವೇ ಆಗಿರುತ್ತದೆ. ಅದು ಬಲಿಪಶುವಿನ ಬದುಕನ್ನು ಬಹಳ ಬೇಗನೆ ಸೆಳೆದುಕೊಳ್ಳುತ್ತದೆ. ಹಾಗೆಯೇ, ಬಲಿಪಶುವಿನ ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳ ಜೀವನದ ಮೇಲೆ ನಿರಂತರ ಏರಿಳಿತದ ಪರಿಣಾಮಗಳಿಗೆ ಕಾರಣವಾಗುತ್ತದೆ.

Advertisement

2021ನೇ ವರ್ಷದಲ್ಲಿ ಭಾರತದಲ್ಲಿ ದಿನವೊಂದಕ್ಕೆ ಸರಾಸರಿ 35 ರಂತೆ 13,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಯ ಕಾರಣದಿಂದಾಗಿ ಸಾವನ್ನಪ್ಪಿದ್ದರು. 2020ರಲ್ಲಿ ಈ ಸಂಖ್ಯೆ 12,526 ಆಗಿತ್ತು. ಅಂದರೆ, 2021ರ ವೇಳೆಗೆ ಇಂತಹ ಸಾವಿನ ಪ್ರಮಾಣ 4.5% ರಷ್ಟು ಹೆಚ್ಚಳವಾಗಿರುವುದನ್ನು ಗಮನಿಸಬಹುದು.

ಈ ಪೈಕಿ 864 ಪ್ರಕರಣಗಳಲ್ಲಿ ಪರೀಕ್ಷೆಯನ್ನು ಎದುರಿಸುವಲ್ಲಿ ಉಂಟಾದ ವೈಫಲ್ಯವೇ ಕಾರಣವಾಗಿರುವುದು ದೃಢಪಟ್ಟಿದೆ. ಭಾರತೀಯ ಅಪರಾಧ ದಾಖಲಾತಿ ಸಂಸ್ಥೆ 2021 ರಲ್ಲಿ ಈ ಆತಂಕಕಾರಿ ಅಂಕಿ-ಅಂಶಗಳನ್ನು ಬಹಿರಂಗಗೊಳಿಸಿದೆ. ವೈಫಲ್ಯದ ಪರಿಕಲ್ಪನೆಯನ್ನು ಸರಿಯಾಗಿ ಮತ್ತು ಪ್ರಾಯೋಗಿಕವಾಗಿ ಅರ್ಥಮಾಡಿಕೊಂಡು ಬದಲಾವಣೆಗಳಿಗೆ ತೆರೆದುಕೊಳ್ಳಬೇಕಾದ ಮತ್ತು ಈ ಕುರಿತಂತೆ ನಮ್ಮ ಮಕ್ಕಳಲ್ಲಿ ಅರಿವು ಮೂಡಿಸಬೇಕಾದ ಸಮಯ ಮತ್ತು ತುರ್ತು ನಮ್ಮ ಮುಂದಿದೆ.

ವೈಫಲ್ಯವು ನಮ್ಮ ಜೀವನದ ಒಂದು ಭಾಗವೇ ಆಗಿದೆ ಎಂಬುದಾಗಿ ಅನೇಕರು ಭಾವಿಸಿಕೊಳ್ಳುತ್ತಾರೆ. ಇನ್ನೊಂದೆಡೆ ನಾವು ಅದನ್ನು ಸದಾ ದ್ವೇಷಿಸುತ್ತಲೇ ಇರುತ್ತೇವೆ. ಈ ವೈಫಲ್ಯದ ಬಗ್ಗೆ ಭಯ ಮೂಡಲು ಪ್ರಮುಖ ಕಾರಣ ಎಂದರೆ ಅದು ನಮ್ಮ ಆತ್ಮಾಭಿಮಾನಕ್ಕೆ ನೇರವಾಗಿ ಸಂಬಂಧಿಸಿದ್ದು ಮತ್ತು ಹೊಂದಿಕೊಂಡದ್ದು ಎಂಬುದಾಗಿದೆ.

ಸಾಧನೆ ಮತ್ತು ಯಶಸ್ಸು ನಮ್ಮ ಆತ್ಮಾಭಿಮಾನದ ಗುರುತು ಎಂಬುದಾಗಿ ನಂಬುವ ನಾವು ಯಾವುದೇ ಸಾಧನೆಯನ್ನು ನಿರ್ವಹಿಸಲು ವಿಫಲರಾದಾಗ ಅಥವಾ ಯಶಸ್ಸನ್ನು ಹೊಂದಲು ಸಾಧ್ಯವಾಗದೇ ಹೋದಾಗ ನಾವು ಅದಕ್ಕೆ ಸಮರ್ಥರಲ್ಲ ಅಥವಾ ಯೋಗ್ಯರಲ್ಲ ಎಂದು ಭಾವಿಸಿಕೊಳ್ಳುತ್ತೇವೆ.

Advertisement

ಆದ್ದರಿಂದ ವೈಫಲ್ಯದ ಕುರಿತಾದ ನಮ್ಮ ಗ್ರಹಿಕೆ ಮತ್ತು ಆಲೋಚನೆಗಳನ್ನು ಬದಲಾಯಿಸಿಕೊಳ್ಳುವುದು ಅವಶ್ಯವಿದೆ. ನಾವು ಇಲ್ಲಿ ಗಮನಿಸಿಕೊಳ್ಳಲೇಬೇಕಾದ ಸಂಗತಿ ಎಂದರೆ, ವೈಫಲ್ಯ ಎಂಬುದು ಯಶಸ್ಸಿನ ವಿರುದ್ಧ ದಿಕ್ಕಿನಲ್ಲಿ ಚಲಿಸುವಂಥದ್ದಲ್ಲ. ಬದಲಾಗಿ ಅದು ಯಶಸ್ಸಿನ ಗುರಿಯನ್ನು ತಲುಪಲು ಇರಬಹುದಾದ ಒಂದು ಮಹತ್ವದ ದಾರಿ ಅಥವಾ ಅವಕಾಶ ಎಂದು ಭಾವಿಸಿಕೊಳ್ಳಬೇಕಾಗಿದೆ.

ವೈಫಲ್ಯಗಳು ಕಲಿಕೆಯ ಪ್ರಕ್ರಿಯೆಗೆ ಅತ್ಯಗತ ಮತ್ತು ನಿರ್ಣಾಯಕವಾಗಿವೆ. ಏಕೆಂದರೆ ವೈಫಲ್ಯಗಳು ಎದುರಾದಾಗಲೆಲ್ಲ ಅದನ್ನು ಎದುರಿಸುವ ಹಂತದಲ್ಲಿ  ನಮ್ಮ ಮಿದುಳು ಚುರುಕುಗೊಳ್ಳುತ್ತವೆ ಮತ್ತು ಬಹುಮುಖಿಯಾಗಿ ಯೋಚಿಸಲು ಅವಕಾಶ ನಿರ್ಮಾಣವಾಗುತ್ತದೆ.

ವೈಪಲ್ಯಗಳನ್ನು ಎದುರಿಸುವ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮತ್ತು ಆತ್ಮಸ್ಥೆರ್ಯ  ಮೂಡಿಸುವ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮತ್ತು ಜವಾಬ್ಧಾರಿ ಮಹತ್ವದ್ದಾಗಿದೆ. ನಾವು ಅನುಸರಿಸಬಹುದಾದ ಕೆಲವು ವಿಧಾನಗಳು ಇವು:

ನಿಮ್ಮ ಮಕ್ಕಳು ವೈಫಲ್ಯವನ್ನು ಅನುಭವಿಸಲು ಅವಕಾಶ ಮಾಡಿಕೊಡಿ:

ಪಾಲಕರಾದ ನಾವು ನಮ್ಮ ಮಕ್ಕಳಿಗೆ ವೈಫಲ್ಯವನ್ನು ಅನುಭವಿಸಲು ಅವಕಾಶ ಮಾಡಿಕೊಡಬೇಕು. ನಾವು ಮಕ್ಕಳ ವಿಷಯದಲ್ಲಿ ಕೆಲವೊಮ್ಮೆ ತುಂಬಾ ರಕ್ಷಣಾತ್ಮಕವಾಗಿರುತ್ತೇವೆ ಮತ್ತು ನಮ್ಮ ಮಕ್ಕಳು ಕಷ್ಟಪಡುವುದನ್ನು ನೋಡಲು ಇಷ್ಟಪಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನಾವು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ. ಇದರ ಬದಲಾಗಿ ಅವರಿಗೆ ಸವಾಲುಗಳನ್ನು ಅನುಭವಿಸಲು ಅವಕಾಶ ಮಾಡಿಕೊಡಿ. ಇದು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ.

ವೈಫಲ್ಯದ ಹಿಂದಿನ ಮೆದುಳಿನ ವಿಜ್ಞಾನವನ್ನು ವಿವರಿಸಿ. ವೈಫಲ್ಯವು ಮೆದುಳಿಗೆ ಕಲಿಕೆಯ ಅವಕಾಶವನ್ನು ಕಲ್ಪಿಸಿಕೊಡುತ್ತದೆ ಮತ್ತು ಈ ಹಂತದಲ್ಲಿ ನೆರವಾಗುತ್ತದೆ ಎಂಬುದಾಗಿ ಸಂಸೊಧನೆಯ ಮೂಲಕ ತಿಳಿದುಬಂದಿದೆ. ನಾವು ತಪ್ಪುಗಳನ್ನು ಮಾಡಿದಾಗ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತುಕೊಳ್ಳುತ್ತೇವೆ. ಅದು ತಪ್ಪುಗಳನ್ನು ತಪ್ಪಿಸಲು ಮೆದುಳಿಗೆ ತರಬೇತಿ ನೀಡುತ್ತದೆ. ಪ್ರತಿ ಬಾರಿ ಒಬ್ಬ ವ್ಯಕ್ತಿಯು ತಪ್ಪು ಮಾಡಿದಾಗ ಮೆದುಳಿನಲ್ಲಿರುವ ವಿದ್ಯುತ್ ಸಂಕೇತಗಳು ವ್ಯಕ್ತಿಯನ್ನು ಕಲಿಯುವಂತೆ ಮಾಡುತ್ತವೆ.

ವೈಫಲ್ಯಗಳನ್ನು ಸ್ವೀಕರಿಸುವ ಮನಸ್ಥಿತಿಯನ್ನು ನಾವು ರೂಢಿಸಿಕೊಳ್ಳಬೇಕಾಗಿದೆ: ನಾವು ಶಿಕ್ಷಕರು ಮತ್ತು ಪೋಷಕರಾಗಿ ಯಶಸ್ಸಿನ ಕಡೆಗೆ ಹೆಚ್ಚು ಒತ್ತು ನೀಡುತ್ತೇವೆ. ನಾವು ಯಶಸ್ಸಿನ ಕಥೆಗಳ ಬಗ್ಗೆ ಹೆಚ್ಚಾಗಿ ಮಾತನಾಡುತ್ತೇವೆ. ಈ ಯಶಸ್ಸಿನ ಕಥೆಗಳ ಜೊತೆಗೆ ನಾವು ನಮ್ಮ ಮಕ್ಕಳಿಗೆ ವೈಫಲ್ಯಗಳ ಬಗ್ಗೆಯೂ ಪರಿಚಯಿಸಬೇಕು. ವೈಫಲ್ಯದ ಕಥೆಗಳನ್ನು ತಿಳಿ ಹೇಳುವುದರೊಂದಿಗೆ ನಾವು ಅವರೊಡನೆ ಈ ಬಗ್ಗೆ ಸಂವಾದ ಮಾಡಬೇಕು. ವೈಫಲ್ಯಗಳನ್ನು ಎದುರಿಸಿದ ವ್ಯಕ್ತಿಗಳ ಅನುಭವ, ಅವರು ಅದನ್ನು ಎದುರಿಸಿದ ರೀತಿ, ಪಡೆದ ಕಲಿಕೆ ಇತ್ಯಾದಿ ಸಂಗತಿಗಳು  ವೈಫಲ್ಯಗಳನ್ನು ಎದುರಿಸಲು ಉತ್ತಮ ವಾತಾವರಣ ಕಲ್ಪಿಸಿಕೊಡುತ್ತದೆ.

1. ನಿಮ್ಮ ಸಂಸ್ಥೆಯಲ್ಲಿ ಅಥವಾ ಮನೆಯಲ್ಲಿ ವಿಫಲ ಶುಕ್ರವಾರಗಳನ್ನು ಪರಿಚಯಿಸಿ: ವೈಫಲ್ಯದ ಕಥೆಗಳ ಬಗ್ಗೆ ಚರ್ಚಿಸಲು ಈ ದಿನವನ್ನು ನಿಗದಿಪಡಿಸಿ. ನೀವು ಅನುಭವಿಸಿದ ವೈಫಲ್ಯಗಳ ಬಗ್ಗೆ ಮತ್ತು ನೀವು ಅವುಗಳನ್ನು ಹೇಗೆ ಎದುರಿಸಿದ್ದೀರಿ ಎಂದು ಅವರಿಗೆ ತಿಳಿಸಿ.

2. ವೈಫಲ್ಯ ಎಂಬ ಪದಕ್ಕೆ ಈ ಅರ್ಥ ಬರುವ ಸಂಕೇತಗಳನ್ನು ಪರಿಚಯಿಸಿ: F: First, A: Attempt, I: In, L: Learning

3. ಅವರು ತಪ್ಪು ಮಾಡಿದಾಗ ವಿಸ್ತ್ರತ ಚರ್ಚೆ ಮಾಡಿ: ಸೋಲುಗಳ ಬಗ್ಗೆ ಗುಟ್ಟಾಗಿ ಮಾತನಾಡುವ ಬದಲು, ಅವರು ಅದರಿಂದ ಏನನ್ನು ಕಲಿಯಬಹುದು? ಮುಂದಿನ ಬಾರಿ ವೈಫಲ್ಯಗಳು ಎದುರಾದಾಗ ಅವರು ಹೇಗೆ ಎದುರಿಸುತ್ತರೆ ಮತ್ತು ಬದಲಾವಣೆ ಮಾಡಿಕೊಳ್ಳುತ್ತಾರೆ? ಎಂಬುದನ್ನು ಗಮನಿಸಿಕೊಳ್ಳಿ. ಆ ಮೂಲಕ ಕಲಿತ ವಿಷಯಗಳನ್ನು ಅವರಿಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಡುವ ಸಂಭಾಷಣೆಗಳನ್ನು ಪ್ರಾರಂಭಿಸಿ ಹೀಗೆ  ತಪ್ಪುಗಳ ಮೂಲಕವೇ ವೈಫಲ್ಯಗಳನ್ನು ಎದುರಿಸುವ ಅಭ್ಯಾಸವನ್ನು ಬಲಗೊಳಿಸಬೇಕು.

ಮಕ್ಕಳಲ್ಲಿ ಸಾವಧಾನ ಗುಣವನ್ನು ಬೆಳೆಸಿ: ಈ ಎಲ್ಲಾ ಅಂಶಗಳನ್ನು ತಿಳಿದುಕೊಳ್ಳುವ ಮತ್ತು ಅನುಸರಿಸುವ ಮೂಲಕ ವೈಫಲ್ಯಗಳಿಗೆ ಮುಖಾಮುಖಿಯಾಗಲು ಸಾಧ್ಯವಾಗುತ್ತದೆ. ಇಂತಹ ಹಲವು ವಿಧಾನ ಅಥವಾ ಅಭ್ಯಾಸಗಳನ್ನು ಮಾಡುವ ಮೂಲಕ ವೈಫಲ್ಯವನ್ನು ನಿಭಾಯಿಸಲು ಸುಲಭವಾಗದಿರಬಹುದು. ನಾವು ನಿರಂತರವಾಗಿ ನಮ್ಮ ಮಕ್ಕಳನ್ನು ಸಾವಧಾನಿಕ ವಿಧಾನಗಳ ಮೂಲಕ ಅಭಿವೃದ್ಧಿಪಡಿಸಲು ಪ್ರಯತ್ನಿಸಬೇಕು. ಅವರಿಗೆ ಎದುರಾದ ಕಷ್ಟ ಮತ್ತು ಸವಾಲುಗಳನ್ನು ಅವರಾಗಿಯೇ ಎದುರಿಸುವ ಮೂಲಕ ವೈಫಲ್ಯಗಳನ್ನು ಅರಿತು, ಅನುಸರಿಸಲು ಪ್ರಯತ್ನಿಸಬೇಕು.

ಮಕ್ಕಳಿಗೆ ಸಹಾಯ ಮಾಡುವುದನ್ನು ಮತ್ತು ಅವರು ನಮ್ಮ ಸಹಾಯ ಯಾಚಿಸುವುದನ್ನು ಆದಷ್ಟು ಸರಳಗೊಳಿಸೋಣ: ನಮ್ಮ ಮಕ್ಕಳ ಮಾನಸಿಕ ವಿಕಾಸದ ದೃಷ್ಟಿಯಿಂದ ನಾವು ಅವರಿಗೆ ಹಲವು ವಿಧಗಳಲ್ಲಿ ನೆರವಾಗಬೇಕಾದುದು ಅವಶ್ಯ.

ಆದರೆ ನಾವು ಮಾಡುವ ಸಹಾಯ ನೇರವಾಗಿರಬಾರದು ಮತ್ತು ಅದು ಸುಲಭವಾಗಿ ದಕ್ಕುವಂತಿರಬಾರದು. ಅವಶ್ಯ ಸಂದರ್ಭಗಳಲ್ಲಿ ಸಹಾಯವನ್ನು ಯಾರಿಂದ ಹೇಗೆ ಮತ್ತು ಯಾವಾಗ ಪಡೆದುಕೊಳ್ಳಬೇಕು ಎಂಬ ಬಗ್ಗೆ ಅವರಲ್ಲಿ ತಿಳಿವಳಿಕೆ ಮೂಡಿಸಬೇಕು. ಮಕ್ಕಳಿಂದ ಆದ ತಪ್ಪು ಏನು ಎಂಬುದರ ಬಗ್ಗೆ ಗಮನಹರಿಸುವುದಕ್ಕಿಂತ ಮುಖ್ಯವಾಗಿ ಮುಂದಿನ ಬಾರಿ ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬ ಬಗ್ಗೆ ನಾವು ನಮ್ಮ ಮಕ್ಕಳಿಗೆ ತರಬೇತಿ ನೀಡಬೇಕು.

ಪೋಷಕರು ಮತ್ತು ಶಿಕ್ಷಕರಾಗಿ ನಾವು ವೈಫಲ್ಯವನ್ನು ಗ್ರಹಿಸುವ ವಿಧಾನವನ್ನು ಮರುರೂಪಿಸಿಕೊಳ್ಳಬೇಕಾಗಿದೆ: ವೈಫಲ್ಯವನ್ನು ಎದುರುಗೊಳ್ಳುವುದು, ಅನುಭವಕ್ಕೆ ತಂದುಕೊಳ್ಳುವುದು ಮತ್ತು ಅಭ್ಯಾಸ ಮಾಡುವುದು ನಾಚಿಕೆ ಪಟ್ಟುಕೊಳ್ಳುವ ವಿಚಾರವಲ್ಲ ಎಂಬುದನ್ನು ಮೊದಲಾಗಿ ಅರ್ಥಮಾಡಿಕೊಳ್ಳಬೇಕು.

ವೈಫಲ್ಯದ ಮೂಲಕ ಕಲಿಕೆಯನ್ನು ಸಾಕಾರಗೊಳಿಸಿಕೊಂಡರೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ ಈ ವಿಚಾರವನ್ನು ನಾವು ನಮ್ಮ ಮಕ್ಕಳಿಗೆ ಅರ್ಥೈಸಬೇಕಾಗಿದೆ. ಇದು ಕೇವಲ ಓದಿನ ಮೂಲಕ ಒದಗಿ ಬರುವಂಥದ್ದಲ್ಲ.  ನಮ್ಮ ನಡವಳಿಕೆಗಳು, ಆಲೋಚನೆಗಳು ಮತ್ತು ಕ್ರಿಯೆಗಳ ಸಂಯೋಜನೆಯಾಗಿದ್ದು ಅದನ್ನು ಕಲಿಯಬೇಕು ಮತ್ತು ಬೆಳೆಸಿಕೊಳ್ಳಬೇಕು.

-ಡಾ. ದೀಪಾ ಕೋಟಾರಿ,

ಸಹಪ್ರಾಧ್ಯಾಪಕರು,

ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗ,

ಯೆನೆಪೋಯ ವಿಶ್ವವಿದ್ಯಾನಿಲಯ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next