ಯಾದಗಿರಿ: ಸ್ವಚ್ಛತೆ ಮಾಡೋದು ಕೇವಲ ಪೌರಕಾರ್ಮಿಕರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೀಮಿತವಲ್ಲ. ಸ್ವಚ್ಛತೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಪ್ರತಿಯೊಬ್ಬರಿಗೂ ಸ್ವಚ್ಛತೆಯ ಅರಿವು ಬಂದಾಗಲೇ ಸ್ವಚ್ಛ ಭಾರತ ಅಭಿಯಾನ ಸಫಲವಾಗುವುದು. ಸ್ವಚ್ಛತೆ ನಡೆಗೆ ಒಂದು ದೃಢ ಹೆಜ್ಜೆ ಇಡೋಣ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಅಭಿಪ್ರಾಯಪಟ್ಟರು.
ಇಲ್ಲಿನ ಸ್ಟೇಷನ್ ಏರಿಯಾದ ಲಾಡಿಸ್ ಗಲ್ಲಿಯಲ್ಲಿ ನಗರಸಭೆ ವತಿಯಿಂದ ನಡೆದ ಸ್ವತ್ಛ ಭಾರತ ಮಿಷನ್ “ಸ್ವಚ್ಛತೆ ನಡೆಗೆ ಒಂದು ದೃಢ ಹೆಜ್ಜೆ’ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಹಸಿಕಸ ಮತ್ತು ಒಣಕಸದ ಬಗ್ಗೆ ಜನರಿಗೆ ತಿಳಿವಳಿಕೆಯಿದೆ. ಆದರೆ ಇದನ್ನು ಬೇರ್ಪಡಿಸಿ ಹಾಕುವುದಕ್ಕೆ ಮನೆ-ಮನೆಗೆ ತೆರಳಿ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು.
ಪ್ರತಿಯೊಂದು ವಾರ್ಡ್‌ಗಳ ಸದಸ್ಯರು ತಮ್ಮ ವಾರ್ಡ್‌ಗಳನ್ನು ದತ್ತು ತೆಗೆದುಕೊಳ್ಳುವ ಮುಖಾಂತರ ಸ್ವಚ್ಛತೆ ಮತ್ತು ಕಸ ವಿಂಗಡಣೆ ಬಗ್ಗೆ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಕೋರಿದರು. ಜನರು ಅಧಿಕಾರಿಗಳಿಗಿಂತ ಜನಪ್ರತಿನಿಧಿಗಳ ಮಾತನ್ನು ಹೆಚ್ಚಾಗಿ ಪಾಲಿಸುತ್ತಾರೆ. ಏಕೆಂದರೆ ನೀವು ಅವರ ಪ್ರತಿನಿಧಿಗಳು ಎಂದ ಅವರು ಜನರಿಗೆ ಅರಿವು ಮೂಡಿಸಿ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದರು.
ನಾವು ಮನೆಯನ್ನು ಹೇಗೆ ಸ್ವತ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಡಲು ಮನಸ್ಸು ಮಾಡಬೇಕಾಗಿದೆ. ನಮ್ಮ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ಕೊರತೆಯಿದ್ದು, ಸರ್ಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಹೊಸ ಕಾರ್ಮಿಕರ ನಿಯೋಜನೆ ಆಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಮಾತನಾಡಿ, ಸ್ವಚ್ಛ ಭಾರತ ಸುಂದರ ಭಾರತವಾಗುವುದರಲ್ಲಿ ವಿದ್ಯಾರ್ಥಿಗಳು, ಯುವಕರ ಮತ್ತು ಜನರ ಪಾತ್ರ ಮುಖ್ಯವಾದುದು. ನಮ್ಮ ಮನೆಗಳಲ್ಲಿ ಉತ್ಪತ್ತಿಯಾಗುವ ಕಸಗಳನ್ನು ವಿಂಗಡಣೆ ಮಾಡಿ ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ ನಗರ ಸ್ವಚ್ಛತೆಗೆ ಶ್ರಮಿಸೋಣ ಎಂದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಶಾ ಆಲಂ ಹುಸೇನ್, ನಗರಸಭೆ ಆಯುಕ್ತ ಬಕ್ಕಪ್ಪ, ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ಹಾಗೂ ನಗರಸಭೆ ಸದಸ್ಯರು ಮತ್ತು ಸಿಬ್ಬಂದಿ ಇದ್ದರು.