ಚಿಂಚೋಳಿ: ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಪ್ರಗತಿಗಾಗಿ ಎಲ್ಲ ನಿರ್ದೇಶಕರ ಮತ್ತು ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ ಹೇಳಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ 2020-21ನೇ ಸಾಲಿನ 55ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕಿನಲ್ಲಿ ಒಟ್ಟು 11,025 ಅ ವರ್ಗದ ಸದಸ್ಯರು ಇದ್ದಾರೆ. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ 1984 ಸದಸ್ಯರು ಇದ್ದಾರೆ. ಒಟ್ಟು 74.12ಲಕ್ಷ ರೂ. ಶೇರು ಬಂಡವಾಳವಿದೆ. ಬ್ಯಾಂಕು ಮಾರ್ಚ್ 2021 ಅಂತ್ಯಕ್ಕೆ ಕಾಸ್ಕಾರ್ಡ್ ಬ್ಯಾಂಕಿನಿಂದ ಪಡೆದುಕೊಂಡ ವಿವಿಧ ಯೋಜನೆ ಅಡಿಯಲ್ಲಿ 928.24ಲಕ್ಷ ರೂ. ಸಾಲದ ಹೊರ ಬಾಕಿ ಇದೆ. ಬ್ಯಾಂಕಿಗೆ ಸಾಲಗಾರ ಸದಸ್ಯರಿಂದ ಬರಬೇಕಾದ ಒಟ್ಟು ಸಾಲದ ಅಸಲು 359.01ಲಕ್ಷ ರೂ. ಇದೆ. ತಗಾದೆಯ ಸಾಲ ಅಸಲು 225.44 ಲಕ್ಷ ರೂ. ಮತ್ತು ಬಡ್ಡಿ 130.03 ಲಕ್ಷ ರೂ., ಒಟ್ಟು ತಗಾದೆ 355.47 ಲಕ್ಷ ರೂ. ಇದೆ. ಇದರಲ್ಲಿ 123.71ಲಕ್ಷ ರೂ. ಅಸಲು ಮತ್ತು 196.45 ಲಕ್ಷ ರೂ. ಬಡ್ಡಿ ವಸೂಲಿಯಾಗಿದೆ. ಇನ್ನು 159 ಲಕ್ಷ ರೂ. ಸಾಲದ ಬಾಕಿ ಇದೆ. ಸದಸ್ಯರಿಗೆ ಸಾಲ ಹಂಚಿಕೆ ಅರ್ಹತೆ ಪಡೆಯುವ ಸಲುವಾಗಿ ಉಳಿದ ಸಾಲಗಾರರು ಮರು ಪಾವತಿ ಮಾಡಬೇಕೆಂದು ತಿಳಿಸಿದರು.
ಹಿರಿಯ ಸಹಕಾರಿ ಧುರೀಣ ರಮೇಶ ಯಾಕಾಪುರ, ಲಿಂಗಶೆಟ್ಟಿ ತಟ್ಟೆಪಳ್ಳಿ ರುದನೂರ, ಭೀಮಶೆಟ್ಟಿ ಮುರುಡಾ, ಜರಣಪ್ಪ ಚಿಂಚೋಳಿ, ಮಹಾದೇವ ಭೀಮಳ್ಳಿ, ಲಕ್ಷ್ಮಣ ಆವಂಟಿ ಬ್ಯಾಂಕಿನ ಅಭಿವೃದ್ದಿಗೆ ಸಲಹೆ ನೀಡಿದರು.
ಪಿಕಾರ್ಡ್ ಬ್ಯಾಂಕ್ ವ್ಯವಸ್ಥಾಪಕ ನಾಗಣ್ಣ ಎಸ್.ಯಲ್ದೆ ಲೆಕ್ಕಪತ್ರಗಳ ವಾರ್ಷಿಕ ವರದಿ ಓದಿದರು. ಕಿರಿಯ ಕ್ಷೇತ್ರಾಭಿವೃದ್ಧಿ ಅಧಿಕಾರಿ ವಿನಯಕುಮಾರ ಚಿಪಾತಿ 20201-21ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಮತ್ತು ಖರ್ಚು ಹಾಗೂ ಬಾಕಿ ಕುರಿತು ವಿವರಿಸಿದರು. ನೂತನ ಬ್ಯಾಂಕ್ ಕಟ್ಟಡ ನಿರ್ಮಿಸಲು ಶ್ರಮಿಸಿದ ಅಧ್ಯಕ್ಷ ಜಗದೀಶಸಿಂಗ ಠಾಕೂರ ಅವರನ್ನು ಸದಸ್ಯರು, ನಿರ್ದೇಶಕರು ಸನ್ಮಾನಿಸಿದರು.
ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಸುಲೇಪೇಟ, ಜಗನ್ನಾಥ ಸಜ್ಜನ, ಗೋಪಾಲರೆಡ್ಡಿ, ಬಾಬುರಾವ್ ಬೊಯಿ, ಲಕ್ಷ್ಮಣ ಪವಾರ, ಚಂದ್ರಮ್ಮ ಅಣಕಲ, ಕೋಮಲಾಬಾಯಿ ಕೊರಡಂಪಳ್ಳಿ ಹಾಗೂ ಬ್ಯಾಂಕ್ ಸಿಬ್ಬಂದಿ ಇದ್ದರು. ವ್ಯವಸ್ಥಾಪಕ ನಾಗಣ್ಣ ಯಲ್ದೆ ಸ್ವಾಗತಿಸಿದರು, ಉಪಾಧ್ಯಕ್ಷ ಬಸವರಾಜ ಸುಲೇಪೇಟ ವಂದಿಸಿದರು.