Advertisement

ಕಷ್ಟ ಅನುಭವಿಸುವುದನ್ನು ನಿಲ್ಲಿಸೋಣ!

01:03 AM Jun 07, 2021 | Team Udayavani |

ನಮ್ಮಲ್ಲಿ ಎರಡು ತರಹದ ನೆನಪು ಗಳಿರುತ್ತವೆ – ಒಂದು ದೈಹಿಕವಾದದ್ದು, ಇನ್ನೊಂದು ಮನಸ್ಸಿನಲ್ಲಿರುವಂಥದ್ದು. ಇವೆರಡೂ ಕಾಲಾಂತರದಲ್ಲಿ ನಾವೇ ಸೃಷ್ಟಿಸಿಕೊಂಡಂಥವು.

Advertisement

ಹಾಗೆಯೇ ಕಷ್ಟದಲ್ಲಿ ಕೂಡ ಎರಡು ಬಗೆ – ಒಂದು ದೈಹಿಕವಾದದ್ದು, ಇನ್ನೊಂದು ಮನಸ್ಸಿಗೆ ಸಂಬಂಧಿಸಿದ್ದು. ನಾವು ದೇಹ ಮತ್ತು ಮನಸ್ಸಿನಿಂದ ಕೊಂಚ ದೂರ ನಿಂತು ಗಮನಿಸುವುದಕ್ಕೆ ಸಾಧ್ಯವಾದರೆ ಆಗ ಎರಡೂ ಬಗೆಯ ಕಷ್ಟಗಳು ಕೊನೆಗೊಳ್ಳುತ್ತವೆ. ಮನಸ್ಸಿಗೆ ಅತ್ಯದ್ಭುತವಾದ ಶಕ್ತಿ ಮತ್ತು ಸಾಧ್ಯತೆಗಳಿವೆ. ಆದರೆ ನಾವು ಬಹುತೇಕ ಮಂದಿ ಅದನ್ನು ಕಷ್ಟ, ನರಳುವಿಕೆ, ದುಃಖ ದುಮ್ಮಾನಗಳನ್ನು ಉತ್ಪಾ ದಿಸುವ ಕಾರ್ಖಾನೆ ಯನ್ನಾಗಿ ಪರಿವರ್ತಿಸಿ ಬಿಟ್ಟಿದ್ದೇವೆ. ಕಷ್ಟವನ್ನು ವಿಜೃಂಭಿಸುವುದು, ಸಂಕಟಪಡುವುದನ್ನು ಆಚರಿಸುವುದು ನಮಗೆ ರೂಢಿಯಾಗಿ ಬಿಟ್ಟಿದೆ. ಕಷ್ಟಪಡುವುದು, ಅದನ್ನು ಹೇಳಿಕೊಳ್ಳುವುದು, ವೈಭವೀಕರಿ ಸುವುದರಲ್ಲಿ ಬಹಳ ಸಂತೋಷ ನಮಗೆ.

ಮನೆಯಲ್ಲಿ ಮಕ್ಕಳು ಗೌಜಿಗದ್ದಲ ಮಾಡುತ್ತ ಆಟವಾಡುತ್ತಿದ್ದರೆ ಗದರಿಸುತ್ತೇವೆ. ನಾವು ಸಣ್ಣವರಿದ್ದಾಗ ಹೆತ್ತವರು ಕೂಡ ಹೀಗೆಯೇ ಮಾಡಿದ್ದರು. ಮಕ್ಕಳು ತೆಪ್ಪಗೆ ಮೂಲೆಯಲ್ಲಿ ಕುಳಿತಿದ್ದರೆ “ಏನಾಯ್ತು ಚಿನ್ನಾ’ ಎಂದು ಮುದ್ದಾಡಿ ಪ್ರೀತಿ ತೋರಿಸುತ್ತೇವೆ. ಕಷ್ಟ ಅನುಭವಿಸಿದರೆ, ದುಃಖದಿಂದ ಇದ್ದರೆ ಲಾಭ ಉಂಟು ಎನ್ನುವುದನ್ನು ಮಕ್ಕಳು ತತ್‌ಕ್ಷಣ ಕಲಿತುಕೊಂಡು ಬಿಡುತ್ತವೆ! ದೊಡ್ಡವರಾದ ನಮ್ಮ ನಡವಳಿಕೆಯೂ ಹೀಗೆಯೇ. ಯಾರಾದರೂ ಕಷ್ಟ ಹೇಳಿಕೊಂಡರೆ ಸಹಾನುಭೂತಿ ತೋರುತ್ತೇವೆ, ಸಹಾಯಕ್ಕೆ ಮುಂದಾಗುತ್ತೇವೆ, ಕನಿಕರಿಸುತ್ತೇವೆ. ಯಾರಾದರೂ ಸುಖ, ಸಂತೋಷವನ್ನು ಹೇಳಿಕೊಂಡರೆ ಮೂಗು ಮುರಿಯುತ್ತೇವೆ.

ನರಳಾಟವನ್ನು ವೈಭವೀಕರಿಸಿ ಆನಂದಿಸುವುದನ್ನು ನಿಲ್ಲಿಸೋಣ. ಅನೇಕ ಕಷ್ಟಗಳು ನಾವೇ ಸೃಷ್ಟಿಸಿಕೊಂಡಂಥವು. ಹೊರಗಿನವರು ಪರಿಸ್ಥಿತಿಗಳನ್ನು ನಿರ್ಮಿಸಬಹುದು, ಸನ್ನಿವೇಶಗಳನ್ನು ಸೃಷ್ಟಿಸಬಹುದು. ಆದರೆ ಕಷ್ಟ, ನರಳುವಿಕೆ ನಮ್ಮದೇ ಸೃಷ್ಟಿ.

ನರಳಾಟ ನಮ್ಮದೇ ಆಯ್ಕೆ. “ಬುದ್ಧ’ ಎಂಬ ಪದವನ್ನು ನೀವು ಕೇಳಿರಬಹುದು. “ಬು’ ಅಂದರೆ ಬುದ್ಧಿ. “ದ್ಧ’ ಅಂದರೆ ಅದಕ್ಕಿಂತ ಮೇಲಿರುವವನು. ಬುದ್ಧ ಅಂದರೆ ಬುದ್ಧಿಗಿಂತ ಮೇಲಿರುವವನು. . ಬುದ್ಧಿಯ ಜತೆಗೆ ಇರುವವನು, ಬುದ್ಧಿಯ ಮಟ್ಟದಲ್ಲಿಯೇ ಇರು ವವರು ನಾವು, ಮನುಷ್ಯರು – ಸಂಕಷ್ಟ ಗಳನ್ನು ಅನು ಭವಿಸುತ್ತಿರುವವರು. ಬುದ್ಧಿಗಿಂತ ಕೆಳಗಿನ ಮಟ್ಟದಲ್ಲಿ ಇರುವವರು ಕೂಡ ಹೆಚ್ಚು ಕಷ್ಟವನ್ನು ಅನುಭವಿಸುವುದಿಲ್ಲ.

Advertisement

ಪ್ರಾಣಿ, ಪಕ್ಷಿ, ಜಂತುಗಳನ್ನು ಗಮನಿಸಿ. ಅವು ನಮ್ಮಷ್ಟು ಸಂಕಟಪಡುವುದಿಲ್ಲ. ಅವುಗಳ ದೈಹಿಕ ಅಗತ್ಯಗಳು ಪೂರೈಕೆಯಾದರೆ ಮತ್ತೇನೂ ಚಿಂತೆ ಇಲ್ಲ ಅವುಗಳಿಗೆ. ಹೊಟ್ಟೆ ತುಂಬಿದರೆ, ಬಾಯಾರಿಕೆಗೆ ನೀರು ಸಿಕ್ಕಿದರೆ, ಮಲಗಲು ಭೂಮಿಯೋ ಮರದ ಕೊಂಬೆಯೋ ಸಿಕ್ಕಿದರೆ ಮತ್ತೇನೂ ಚಿಂತೆ ಇಲ್ಲ. ಆದರೆ ನಾವು ಹಾಗಲ್ಲ. ನಾವು ಹಸಿವನ್ನು, ಬಾಯಾರಿಕೆಯನ್ನು, ತಲೆಯ ಮೇಲೊಂದು ಸೂರು ಇಲ್ಲದಿರುವ ಕಷ್ಟವನ್ನು ನೂರು ನಮೂನೆಗಳಲ್ಲಿ ಅನುಭವಿಸಿಕೊಂಡು ಬಿಡುತ್ತೇವೆ.

ದಾರಿಯಲ್ಲಿ ಹೋಗುವಾಗ ಯಾರೋ ಒಬ್ಬ ನಮ್ಮನ್ನು “ಮೂರ್ಖ’ ಎಂದು ಕರೆದ ಎಂದು ಭಾವಿಸಿಕೊಳ್ಳಿ. ಆತ ಹಾಗೆ ಹೇಳಿ ಮುಂದಕ್ಕೆ ಹೋಗಿ ಬಿಡುತ್ತಾನೆ. ಆದರೆ ನಾವು ದಾರಿಯುದ್ದಕ್ಕೂ, ಮನೆಗೆ ಮರಳಿದ ಮೇಲೂ, ರಾತ್ರಿ 12ರ ವೇಳೆಗೆ ಹಾಸಿಗೆಯಲ್ಲಿ ಎದ್ದು ಕುಳಿತು, “ನನ್ನನ್ನು ಮೂರ್ಖ ಎನ್ನಲು ಆತ ಯಾರು? ಅವನೇ ಶತಮೂರ್ಖ’ ಎಂದೆಲ್ಲ ಯೋಚಿಸುತ್ತ ನರಳುತ್ತಿರುತ್ತೇವೆ. ಆತ ಹೇಳಿ ಹೋದ ಮೂರು ದಿನಗಳ ಬಳಿಕವೂ ಅದೇ ನಮ್ಮ ತಲೆಯಲ್ಲಿ ಸುತ್ತುತ್ತಿರುತ್ತದೆ.
ಕಷ್ಟಗಳ ನರಳಾಟವೂ ಹೀಗೆಯೇ.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next