ಮಹಾನಗರ:ಕ್ರೀಡೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಪ್ರತಿಯೊಂದು ಕ್ರೀಡೆಗೂ ಅಕಾಡೆಮಿಗಳು ಸ್ಥಾಪನೆಯಾಗಬೇಕು ಎಂದು ಕ್ರೀಡಾ ಭಾರತಿ ಅಖಿಲ ಭಾರತ ಗೌರವಾಧ್ಯಕ್ಷ, ಉತ್ತರಪ್ರದೇಶದ ಕ್ರೀಡಾ ಸಚಿವ ಚೇತನ್ ಚೌಹಾಣ್ ತಿಳಿಸಿದರು.
ನಗರದ ಸಂಘನಿಕೇತನದಲ್ಲಿ ಕ್ರೀಡಾ ಭಾರತಿ ಆಯೋಜಿಸಿದ ಭಾರತಿಯ ನಿಯಾಮಕ ಮಂಡಳಿ ಹಾಗೂ ಕಾರ್ಯಕಾರಿಣಿ ಬೈಠೆಕ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಿಂದಲೇ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಎಲ್ಲ ಗ್ರಾಮಗಳಲ್ಲೂ ಕ್ರೀಡಾ ಭಾರತಿಯ ಸದಸ್ಯರಿರಬೇಕು ಎಂದರು.
ಉತ್ತರಪ್ರದೇಶದಲ್ಲಿ 5 ವರ್ಷಗಳ ಹಿಂದಿನಿಂದಲೂ ಕ್ರೀಡಾ ಕೋಟ ರದ್ದಾಗಿತ್ತು. ನಾನು ಕ್ರೀಡಾ ಸಚಿವನಾದ ಮೇಲೆ ಪುನಃ ಪ್ರಾರಂಭಿಸಿದೆ. ಒಲಿಂಪಿಂಕ್ ವಿಜೇತರಿಗೆ ಸರಕಾರಗಳು ಪುರಸ್ಕಾರ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಸಂಸ್ಕೃತಿ ಉಳಿಸಿ
ಕ್ರೀಡಾ ಭಾರತಿ ಅಖಿ ಲ ಭಾರತೀಯ ಸಂಘಟನ ಕಾರ್ಯದರ್ಶಿ ರಾಜ್ ಚೌಧರಿ ಮಾತನಾಡಿ, ವರ್ಷದಲ್ಲಿ ಒಂದು ದಿನ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಯನ್ನು ಬೆಳೆಸುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಿದೆ. ಸಮಾಜವನ್ನು ಸಮಾನತೆಯಿಂದ ಕಾಣುವ ಸಾರ ಕ್ರೀಡೆಯಲ್ಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕ್ರೀಡಾ ಭಾರತಿಯ ವತಿಯಿಂದ ಅಂಗವಿಕಲರಿಗೆ ಕ್ರೀಡೆಯ ತರಬೇತಿ ನೀಡುವ ಉದ್ದೇಶವಿದ್ದು, ಇದಕ್ಕೆಂದೇ ವಿಶೇಷ ಘಟಕ ರಚಿಸಿ, ಕಾರ್ಯಕರ್ತರನ್ನು ನೇಮಕ ಮಾಡುತ್ತೇವೆ ಎಂದರು. ಸಂಸ್ಥೆಯ ಕಾರ್ಯಾಧ್ಯಕ್ಷ ಚೈತನ್ಯ ಕಶ್ಯಪ್, ಉಪಾಧ್ಯಕ್ಷ ಕರ್ನಲ್ ನಾರಾಯಣ ಸಿಂಗ್ ರಾಣ, ಗೋಪಾಲ್ ಸೈನಿ, ಚಂದ್ರಶೇಖರ ಜಹಗೀರ್‌ದಾರ್ ಉಪಸ್ಥಿತರಿದ್ದರು.