Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಹಾಗೂ ರಾಜಕಾಲುವೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಪೀಠ, ಬಿಬಿಎಂಪಿ ಎಂಜಿನಿಯರ್‌ಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
Related Articles
Advertisement
ನಗರದಲ್ಲಿ ರಸ್ತೆಗುಂಡಿ ಮುಚ್ಚುವ ಕಾಮಗಾರಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ ಬಿಬಿಎಂಪಿ ಪರ ವಕೀಲರು, ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಲ್ಲಿ ಬೆಂಗಳೂರು ಜಲಮಂಡಳಿ ರಸ್ತೆ ಅಗೆದಿದ್ದು, ಅವುಗಳನ್ನು ಇನ್ನೂ ಮುಚ್ಚಬೇಕಿದೆ ಎಂದು ತಿಳಿಸಿದರು. ಇದಕ್ಕೆ ನ್ಯಾಯಪೀಠ, ಹಾಗಿದ್ದರೆ ಈ ಗುಂಡಿಗಳನ್ನು ಮುಚ್ಚುವ ಜವಾಬ್ದಾರಿ ಯಾರದು ಎಂದು ಪ್ರಶ್ನಿಸಿ, ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ವಿವರಗಳನ್ನು ಜಲಮಂಡಳಿಗೆ ಸಲ್ಲಿಸುವಂತೆ ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿತು.
ಕಸಮುಕ್ತ ನಗರ ಮಾಡಿ: ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ನ್ಯಾಯಪೀಠ, ಬಿಬಿಎಂಪಿ ಅದ್ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇರುತ್ತವೆ. ಸಾರ್ವಜನಿಕರಿಗೆ ಪಾಲಿಕೆ ಮೇಲೆ ವಿಶ್ವಾಸವೇ ಇಲ್ಲದಂತಾಗಿದ್ದು, ನಿಮ್ಮ ಇಂಜಿನಿಯರ್‌ಗಳು ಅವರ ಕರ್ತವ್ಯ ಮಾಡುತ್ತಿಲ್ಲ. ಇದರಿಂದಲೇ ಬಿಬಿಎಂಪಿ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ.
ನೀವೇನು ಕೆಲಸ ಮಾಡುತ್ತೀರಿ ಎಂಬುದರ ಮೇಲೆ ಜನರ ನಂಬಿಕೆ ನಿಂತಿದೆ. ನಿಷ್ಠೆಯಿಂದ ಕೆಲಸ ಮಾಡಿ ಜನರ ನಂಬಿಕೆ ಉಳಿಸಿಕೊಳ್ಳಿ ಎಂದು ಆಯುಕ್ತರಿಗೆ ಸಲಹೆ ನೀಡಿದ ಪೀಠ, ನೀವೇನು ಮಾಡುತ್ತೀರೋ ಗೊತ್ತಿಲ್ಲ. ಅ.31ರೊಳಗೆ ಬೆಂಗಳೂರನ್ನು ಸಂಪೂರ್ಣ ಕಸಮುಕ್ತ ನಗರವನ್ನಾಗಿ ಮಾಡಬೇಕು. ಇಲ್ಲವಾದರೆ ಅದಕ್ಕೆ ನೀವೇ ಹೊಣೆಯಾಗುತ್ತೀರಿ ಎಂದು ಎಚ್ಚರಿಸಿತು.
ಗುಣಮಟ್ಟದ ರಸ್ತೆ ನಿರ್ಮಿಸಿ: ರಸ್ತೆಗುಂಡಿಗಳನ್ನು ಮುಚ್ಚುವುದಷ್ಟೇ ಅಲ್ಲ, ಗುಂಡಿಗಳೇ ಬೀಳದಂತೆ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಬಿಬಿಎಂಪಿಗೆ ಕಿವಿಮಾತು ಹೇಳಿದ ಪೀಠ, ವಾಹನ ಸಂಚಾರಯೋಗ್ಯ ರಸ್ತೆಗಳನ್ನು ನಿರ್ಮಿಸಿದರೆ, ನಗರದ ಟ್ರಾಫಿಕ್ ಸಮಸ್ಯೆಯೂ ಕೊಂಚ ನಿವಾರಣೆಯಾಗುತ್ತದೆ. ನೀವೇನು ಮಾಡುತ್ತೀರೋ ಗೊತ್ತಿಲ್ಲ. ಆದಷ್ಟು ಶೀಘ್ರ ರಸ್ತೆಗುಂಡಿಗಳ ಸಂಖ್ಯೆ ಶೂನ್ಯಕ್ಕೆ ಇಳಿಸಬೇಕು ಎಂದು ಬಿಬಿಎಂಪಿಗೆ ತಾಕೀತು ಮಾಡಿತು.
ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಕೀಲರು, ಈ ನಿಟ್ಟಿನಲ್ಲಿ ಪಾಲಿಕೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದು, ಬಿಡಬ್ಲೂéಎಸ್‌ಎಸ್‌ಬಿ, ಬೆಸ್ಕಾಂ ಸೇರಿ ಇತರೆ ಎಲ್ಲ ಪ್ರಾಧಿಕಾರಗಳ ಸಹಕಾರವೂ ಅಗತ್ಯವಿದೆ ಎಂದರು. ಆಗ ನ್ಯಾಯಪೀಠ, ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲೆಂದೇ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯ ಸಭೆಯಲ್ಲಿ ಈ ಕುರಿತು ಚರ್ಚಿಸಿ ಸೂಕ್ತ ರೂಪುರೇಷೆ ಸಿದ್ಧಪಡಿಸಿ ಎಂದು ಸಲಹೆ ನೀಡಿತು.
ಬಿಲ್ಡರ್‌ಗಳ ಜತೆ ಅಧಿಕಾರಿಗಳೂ ಶಾಮೀಲು: ಹಿರಿಯ ವಕೀಲ ಆದಿತ್ಯ ಸೋಂಧಿ ಸಮನ್ವಯ ಸಮಿತಿ ಸಭೆಯಲ್ಲಿ ಹೈಕೋರ್ಟ್ ಪರವಾಗಿ ಪಾಲ್ಗೊಂಡಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ, ನಗರದ ಹಲವು ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ರಾಜಕಾಲುವೆಗಳ ಅಕ್ರಮ ಒತ್ತುವರಿಯೂ ಒಂದು ಪ್ರಮುಖ ಸಮಸ್ಯೆಯಾಗಿದೆ. ಖಾಸಗಿ ಬಿಲ್ಡರ್‌ಗಳ ಜತೆ ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆಯಿದ್ದು, ಈ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು. ಇದಲ್ಲದೆ, ರಾಜಕಾಲುವೆಗಳ ನಿರ್ವಹಣೆಗೆ ಬಿಬಿಎಂಪಿ ಯಾವುದೇ ಗುತ್ತಿಗೆ ನೀಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ವರ್ಷವಿಡೀ ನಿರ್ವಹಣೆ: ಬಿಬಿಎಂಪಿ ಆಯುಕ್ತ: ನಗರದ ರಾಜಕಾಲುವೆಗಳ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಇಲ್ಲಿಯವರೆಗೆ ಮಳೆಗಾಲ ಆರಂಭಕ್ಕೂ ಮುನ್ನ ರಾಜಕಾಲುವೆಗಳನ್ನು ಸ್ವತ್ಛಗೊಳಿಸಲಾಗುತ್ತಿತ್ತು. ಇನ್ನುಮುಂದೆ ವರ್ಷದುದ್ದಕ್ಕೂ ಸ್ವತ್ಛಗೊಳಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಗುತ್ತಿಗೆ ನೀಡಲಾಗುತ್ತದೆ.
ರೊಬೋಟಿಕ್ ತಂತ್ರಜ್ಞಾನ ಬಳಸಿ ರಾಜಕಾಲುವೆಗಳನ್ನು ಸ್ವತ್ಛಗೊಳಿಸಲಾಗುತ್ತದೆ. ಅದಕ್ಕೆ ಸರ್ಕಾರ ಸಹ ಅನುಮೋದನೆ ನೀಡಿದೆ ಎಂದು ವಿವರಿಸಿದರು. ಇದಕ್ಕೆ ನ್ಯಾಯಪೀಠ, ಇತರೆ ರಾಜ್ಯಗಳು ಬಹಳ ವರ್ಷಗಳಿಂದಲೇ ರೊಬೋಟಿಕ್ ತಂತ್ರಜ್ಞಾನ ಬಳಕೆ ಮಾಡುತ್ತಿದೆ. ನೀವು ಈಗಿನ್ನೂ ಪರಿಚಯಿಸುತ್ತಿದ್ದೀರಾ ಎಂದು ಪ್ರಶ್ನಿಸಿ, ರಾಜಕಾಲುವೆ ನಿರ್ವಹಣೆ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿ ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.