Advertisement

ಪವಿತ್ರ ಸರ್ಕಾರ ಏನೇನು ಮಾಡುತ್ತೆ ನೋಡೋಣ

09:23 PM Aug 03, 2019 | Team Udayavani |

ಹಾಸನ: ರಾಜ್ಯದಲ್ಲಿ ಪಾಪದ ಸರ್ಕಾರ ಹೋಗಿ ಪವಿತ್ರ ಸರ್ಕಾರ ಬಂದಿದೆಯಂತೆ. ಪವಿತ್ರ ಸರ್ಕಾರ ಎಷ್ಟು ದಿನ ಇರುತ್ತೆ, ಏನೇನು ಕಾರ್ಯಗಳನ್ನು ಮಾಡುತ್ತೆ, ಯಾರ್ಯಾರು ಪವಿತ್ರರಾಗ್ತಾರೋ ಕಾದು ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದರು.

Advertisement

ಚಿಕ್ಕಮಗಳೂರಿನಿಂದ ಕೆ.ಆರ್‌.ಪೇಟೆಗೆ ಹೋಗುವ ಮಾರ್ಗ ಮಧ್ಯೆ ಹಾಸನದ ಪ್ರವಾಸಿ ಮಂದಿರಲ್ಲಿ ಕೆಲಕಾಲ ತಂಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ರಚನೆ ಯಾಕೆ ಮಾಡಬೇಕು ? ಒಂದು ವಾರದಿಂದ ಮುಖ್ಯಮಂತ್ರಿಯೊಬ್ಬರೇ ಬಿರುಸಿನ ಆಡಳಿತ ನಡೆಸುತ್ತಿದ್ದಾರೆ. ಅವರೊಬ್ಬರೇ ಸಾಕು. ಇನ್ನೂ 6 ತಿಂಗಳು ಮುಖ್ಯಮಂತ್ರಿಯವರೊಬ್ಬರೇ ಆಡಳಿತ ನಡೆಸಬಹುದು. ನಡೆಸಲಿ ಎಂದು ವ್ಯಂಗ್ಯವಾಡಿದರು.

ಟಾರ್ಗೆಟ್‌ ಮಾಡ್ತಿರೋದು ಗೊತ್ತಾಗಲ್ಲವೇ?: ಕಳೆದ ಒಂದು ವಾರದಿಂದ ನಿರಂತರವಾಗಿ ಹಿರಿಯ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಅಧಿಕಾರಿಗಳ ವರ್ಗಾವಣೆ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟದ್ದು. ಆದರೆ ನಿನ್ನೆ ವರ್ಗಾವಣೆ ಮಾಡಿ ಇಂದು ರದ್ದುಪಡಿಸುವುದು. ಮತ್ತೆ ಅದೇ ಅಧಿಕಾರಿಗಳನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡುವುದು. ಈ ನಡವಳಿಕೆಗಳೆಲ್ಲಾ ಟಾರ್ಗೆಟ್‌ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ ಎಂಬುದು ಗೊತ್ತಾಗುವುದಿಲ್ಲವೇ ಎಂದು ಪ್ರತಿಕ್ರಿಯಿಸಿದರು.

ರಾಜಕೀಯ ಸಾಕಾಗಿ ಹೋಗಿದೆ?: ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಕೆರೆಳಿದ ಎಚ್‌.ಡಿ.ಕುಮಾರಸ್ವಾಮಿ ಅವರು, ನಿಖಿಲ್‌ಕುಮಾರಸ್ವಾಮಿ ಕೆ.ಆರ್‌.ಪೇಟೆಯಿಂದ, ಪ್ರಜ್ವಲ್‌ ರೇವಣ್ಣ ಹುಣಸೂರಿನಿಂದ ಉಪ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳನ್ನು ಗಮನಿಸಿದ್ದೇನೆ. ಇದನ್ನು ಹೇಳಿದವರ್ಯಾರು ? ನಮ್ಮ ಪಕ್ಷದ ಯಾವುದಾದರೂ ಮುಖಂಡರು ಹೇಳಿದ್ದಾರೆಯೇ? ಕೆ.ಆರ್‌.ಪೇಟೆಯಲ್ಲಿ ನಿಖಿಲ್‌ ವರ್ಸಸ್‌ ಯಾರು ಎಂದು ಯಾರ್ಯಾರೋ ಹೆಸರು ಹೇಳಿಕೊಂಡು ಆಧಾರ ರಹಿತ ವರದಿ ಮಾಡುವುದನ್ನು ಮಾಧ್ಯಮಗಳು ಬಿಡಬೇಕು ಎಂದರು.

ಕಾರ್ಯಕರ್ತರೊಂದಿಗೆ ಚರ್ಚೆ: ಉಪ ಚುನಾವಣೆ ನಡೆಯಲಿರುವ 17 ವಿಧಾನಸಭಾ ಕ್ಷೇತ್ರಗಳಲ್ಲೂ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಅವರೊಂದಿಗೆ ಚರ್ಚಿಸಿ ಅರ್ಹ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸುತ್ತೇವೆ. ಅದಕ್ಕೂ ಮೊದಲು ಮಾಧ್ಯಮಗಳು ಕಪೋಲ ಕಲ್ಪಿತ ವರದಿಗಳನ್ನು ಮಾಡಿ ನನ್ನ ಕುಟುಂಬವನ್ನು ಎಳೆದಾಡುವುದನ್ನು ಬಿಡಬೇಕು. ನನಗೆ ಸಾಕಾಗಿ ಹೋಗಿದೆ. ರಾಜಕೀಯದ ಸ್ಥಾನ,ಮಾನ ಬೇಡ. ರಾಜ್ಯದ ಜನರ ಹೃದಯದಲ್ಲಿ ಸ್ಥಾನ ಸಿಕ್ಕರೆ ಸಾಕು ಎಂದೆನಿಸಿದೆ ಎಂದರು.

Advertisement

ಎಚ್‌.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋತ ನಂತರವೂ ಪಕ್ಷದ ಸಭೆಗಳನ್ನು ಮಾಡಿ ಹೋರಾಟ ಮಾಡುತ್ತಿದ್ದಾರೆ. ಅವರು ರಾಜಕೀಯ ಪ್ರವೇಶ ಮಾಡಿದ ಸಂದರ್ಭದಲ್ಲಿದ್ದ ಪರಿಸ್ಥಿತಿ ಈಗಲೂ ಇದೆ ಎಂದು ಅವರು ಭಾವಿಸಿದ್ದಾರೆ. ಆದರೆ ಇಂದಿನ ರಾಜಕಾರಣ ಒಳ್ಳೆಯದಿಲ್ಲ. ಜಾತಿಯ ಬಳಕೆ, ದ್ವೇಷದ ರಾಜಕಾರಣ ನಡೆಯುತ್ತಿದೆ. ಯುವಕರು ದಾರಿತಪ್ಪಿ ಹೋಗಿದ್ದಾರೆಂಬುದೂ ನನಗೆ ಗೊತ್ತಿದೆ. ಈ ಕುತಂತ್ರದ ರಾಜಕಾರಣದಿಂದ ಬೇಸತ್ತು ಹೋಗಿದ್ದೇನೆ ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.

ಒತ್ತಡಕ್ಕೆ ಮಣಿದು ನಿಖಿಲ್‌ ಸ್ಪರ್ಧೆ: ನಿಖಿಲ್‌ಗೆ ಇನ್ನೂ 5 ವರ್ಷ ರಾಜಕೀಯ ಬೇಡ. ಚಿತ್ರರಂಗದಲ್ಲಿ ಮುಂದುವರಿ ಎಂದು ಹೇಳಿದ್ದೆ. ಆದರೆ ಒತ್ತಡಕ್ಕೆ ಮಣಿದು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಸಿದ ನಂತರ ನಿಖಿಲ್‌ ರಾಜಕೀಯ ಜೀವನ ಮುಗಿಸುವ ಸಂಚು ನಡೆಯಿತು. ನಾನೇ ರಾಜಕೀಯದಿಂದ ದೂರವಿರಬೇಕು ಎಂದುಕೊಂಡಿದ್ದವನು. ಅಕಸ್ಮಿಕವಾಗಿ ರಾಜಕೀಯಕ್ಕೆ ಬಂದು 2 ಬಾರಿ ಮುಖ್ಯಮಂತ್ರಿಯಾದೆ. ಆದು ದೇವರು ಕಲ್ಪಿಸಿಕೊಟ್ಟ ಅವಕಾಶ. 34 ತಿಂಗಳು ಪ್ರಾಮಾಣಿಕವಾಗಿ ಉತ್ತಮ ಆಡಳಿತ ನಡೆಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ತೃಪ್ತಿಯಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next