ಹಳೆಯಂಗಡಿ: ಜಿಲ್ಲೆಯಲ್ಲಿ ಶಿಕ್ಷಣದ ಕ್ರಾಂತಿ ನಡೆಸಿದ ಕೀರ್ತಿ ಕ್ರೈಸ್ತ ಮಿಶನರಿಗಳಿಗೆ ಸಲ್ಲುತ್ತದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾಕ್ಷರತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿಕೊಂಡ ಕಿಟೆಲ್, ಮೊಂಗ್ಲಿ ಮೊದಲಾದ ಮಿಶನರಿಗಳ ಆದರ್ಶವನ್ನು ಪಾಲಿಸಿರಿ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು. ಹಳೆಯಂಗಡಿಯ ಯು.ಬಿ.ಎಂ.ಸಿ. ಮತ್ತು ಸಿ.ಎಸ್.ಐ. ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
175 ವರ್ಷ ಇತಿಹಾಸವಿರುವ ಹಳೆಯಂಗಡಿಯ ಯು.ಬಿ.ಎಂ.ಸಿ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯವರು ಮುತುವರ್ಜಿ ವಹಿಸಿ, ಕಾರ್ಯಕ್ರಮ ರೂಪಿಸಿಕೊಂಡರೆ ಸರಕಾರವು ಸಕರಾತ್ಮಕವಾಗಿ ಸ್ಪಂದಿಸುತ್ತದೆ ಎಂದರು. ಡಯಸಿಸ್‌ನ ಬಿಷಪ್ ರೈ|ರೆ| ಮೋಹನ್ ಮನೋರಾಜ್ ಅಧ್ಯಕ್ಷತೆ ವಹಿಸಿದ್ದರು.
ಸಿ.ಎಸ್.ಐ ಚರ್ಚ್‌ನ ಸಭಾಪಾಲಕ ರೆ| ಸೆಬೆಸ್ಟಿನ್ ಜತ್ತನ್ನ, ಮಂಗಳೂರು ನಗರಾಭಿವೃದ್ಧಿ ಪ್ರಾ ಧಿಕಾರದ ಸದಸ್ಯ ಎಚ್. ವಸಂತ್ ಬೆರ್ನಾಡ್, ಹಳೆಯಂಗಡಿ ಕೆನರಾ ಬ್ಯಾಂಕಿನ ಪ್ರಬಂಧಕ ಎಚ್. ಆರ್ ಪವಾರ್ ಶುಭಹಾರೈಸಿದರು. ಶಾಲಾ ಸಂಚಾಲಕ ಮೊಸೆಸ್ ಜಯಶೇಖರ್, ರಾಜೇಶ್ವರಿ ಸೂರ್ಯ ಕುಮಾರ್, ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಲಜಾ, ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್, ವಿಲ್‌ಹೆಮ್ ಮಾಬೆನ್, ವೀಣಾ ಕಾಮತ್ ಮತ್ತಿತರರು ವೇದಿಕೆಯಲ್ಲಿದ್ದರು.
ರಾಜೇಶ್ವರಿ ಸೂರ್ಯಕುಮಾರ್ ಧ್ವಜಾರೋಹಣ ನೆರವೇರಿಸಿದರು. ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ.ಪಂ.ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಐರಿನ್ ಕ್ರಿಸ್ಟಬೆನ್ ಸ್ವಾಗತಿಸಿದರು. ಆಂಗ್ಲ ಮಾಧ್ಯಮದ ಮುಖ್ಯೋ ಪಾಧ್ಯಾಯಿನಿ ಐರಿನ್ ಕರ್ಕಡ ವಂದಿಸಿದರು. ಸಹಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕನ್ನಡ ಶಾಲೆ ಶ್ರೇಷ್ಠ
ಕನ್ನಡ ಮಾಧ್ಯಮ ಶಾಲೆ ಎಂದು ತಾತ್ಸಾರ ಮನೋಭಾವನೆ ಬೇಡ. ಇಂತಹ ಶಿಕ್ಷಣ ಸಂಸ್ಥೆಯಲ್ಲಿಯೇ ಕಲಿತ ಸಿದ್ದರಾಮಯ್ಯ, ವೀರಪ್ಪ ಮೊಯಿಲಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕನ್ನಡ ಶಾಲೆ ಶ್ರೇಷ್ಠವಾಗಿದೆ. ಈ ಶಾಲೆಗೆ ಅಗತ್ಯವಿರುವ ಕಟ್ಟಡ ನಿರ್ಮಾಣಕ್ಕೆ ಅನುದಾನ, ಬಿಸಿಯೂಟ, ಹಾಲಿನ ವ್ಯವಸ್ಥೆ, ಶಾಲೆಗೆ ಪೂರಕವಾಗಿ ಅಂಗನವಾಡಿ ಕೇಂದ್ರವನ್ನು ಸರಕಾರದ ವತಿಯಿಂದ ಮಾಡಲಾಗಿದೆ.
– ಕೆ.ಅಭಯಚಂದ್ರ ಜೈನ್, ಶಾಸಕ