Advertisement

ಕರ್ನಾಟಕದ ಕೋಟೆಗಳು ಉಳಿಸುವ ಕೆಲಸವಾಗಲಿ

01:01 PM Apr 16, 2018 | |

ಮೈಸೂರು: ಛಾಯಾಗ್ರಾಹಕ ವಿಶ್ವನಾಥ್‌ ಸುವರ್ಣ ಕರುನಾಡ ಕೋಟೆಗಳ ಸುವರ್ಣ ನೋಟ ಕೃತಿಯ ಮೂಲಕ ಕರ್ನಾಟಕದ ಇತಿಹಾಸವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.

Advertisement

ನಗರದ ಜೆಎಸ್‌ಎಸ್‌ ಆಸ್ಪತ್ರೆ ಆವರಣದ ಶ್ರೀ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್‌ ಸುವರ್ಣ ಹೊರತಂದಿರುವ ಕರುನಾಡ ಕೋಟೆಗಳ ಸುವರ್ಣ ನೋಟ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಬದ್ಧತೆ, ನಿಷ್ಠೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ವಿಶ್ವನಾಥ್‌ ಸುವರ್ಣ ತೋರಿಸಿದ್ದಾರೆ.

ರಾಜ್ಯದ ಪುರಾತತ್ವ ಇಲಾಖೆ ಮಾಡಬೇಕಾದ ಕೆಲಸವನ್ನು ವಿಶ್ವನಾಥ್‌ ಸುವರ್ಣ ಮಾಡಿದ್ದು, ಪುರಾತತ್ವ ಇಲಾಖೆ ಈಗಲಾದರೂ ಎಚ್ಚೆತ್ತು, ಕರ್ನಾಟಕದ ಮಹತ್ವದ ಕೋಟೆಗಳನ್ನು ಉಳಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸುವರ್ಣ ಹೊರತಂದಿರುವ ಪುಸ್ತಕಗಳನ್ನು ರಾಜ್ಯದ ಎಲ್ಲಾ ಗ್ರಂಥಾಲಯಗಳಲ್ಲಿ ಲಭಿಸುವಂತೆ ಮಾಡಬೇಕಿದೆ ಎಂದರು.

ಕರ್ನಾಟಕದಲ್ಲಿ ಜಲದುರ್ಗ, ಗಿರಿದುರ್ಗ, ವನದುರ್ಗ ಹಾಗೂ ಸ್ಥಳದುರ್ಗ ಎಂಬ ನಾಲ್ಕು ಬಗೆಯ ವೈವಿಧ್ಯಮಯ ಕೋಟೆಗಳಿವೆ. ಅವುಗಳ ಪೈಕಿ ರಾಜ್ಯದಲ್ಲಿ ವನದುರ್ಗಗಳು ಹೆಚ್ಚಾಗಿವೆ. ಈ ಎಲ್ಲಾ ಕೋಟೆಗಳ ಛಾಯಾಚಿತ್ರಗಳು, ಮಾಹಿತಿಗಳನ್ನು ಪುಸ್ತಕದಲ್ಲಿ ಕಟ್ಟಿಕೊಟ್ಟಿರುವ ಈ ಪುಸ್ತಕಕ್ಕೆ ವರ್ಷಗಳು ಕಳೆದಂತೆ ಹೆಚ್ಚಿನ ಮಹತ್ವ ದೊರೆಯಲಿದೆ. ಈ ನಿಟ್ಟಿನಲ್ಲಿ ಕೋಟೆಗಳ ಛಾಯಾಚಿತ್ರಗಳನ್ನು ಸೆರೆ ಹಿಡಿದಿರುವ ವಿಶ್ವನಾಥ್‌ ಸುವರ್ಣ, ಪರಿಸರ ಪ್ರಜ್ಞೆಯೊಂದಿಗೆ ಕೆಲವು ಫೋಟೋಗಳನ್ನು ತೆಗೆದಿದ್ದಾರೆ. ಛಾಯಾಗ್ರಾಹಕರಿಗೆ ಸಮಯಪ್ರಜ್ಞೆ ಹಾಗೂ ಕರ್ತವ್ಯಪ್ರಜ್ಞೆ ಅಗತ್ಯವಿದೆ ಎಂದು ಹೇಳಿದರು.

ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ್‌ ಸುವರ್ಣ ಮಾತನಾಡಿ, ಈ ಹಿಂದೆ ಬೀದರ್‌, ಕಲಬುರ್ಗಿ ಕೋಟೆಗಳ ಛಾಯಾಚಿತ್ರವನ್ನು ತೆಗೆದಾಗ, ಕರ್ನಾಟಕದಲ್ಲಿರುವ ಕೋಟೆಗಳ ಛಾಯಾಚಿತ್ರಗಳನ್ನು ಸೆರೆಹಿಡಿಯುವಂತೆ ಕೆಲವರು ಸಲಹೆ ನೀಡಿದರು. ಹೀಗಾಗಿ ಎರಡು ವರ್ಷಗಳ ಹಿಂದೆ ಈ ಪ್ರಯತ್ನಕ್ಕೆ ಕೈಹಾಕಿದೆ. ಆದರೆ ಕೋಟೆಗಳ ಚಿತ್ರಗಳನ್ನು ತೆಗೆಯುವುದು ಸುಲಭದ ಕೆಲಸವಲ್ಲ ಎಂದರು.

Advertisement

ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರುನಾಡ ಕೋಟೆಗಳ ಸುವರ್ಣ ನೋಟ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಎಸ್‌.ಶಿವರಾಜಪ್ಪ, ಎಪ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸುಧಾಕರ್‌ ಎಸ್‌.ಶೆಟ್ಟಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next