ಬೀದರ: ಔರಾದ ತಾಲೂಕಿನ ಕಪಲಾಪುರ (ಜೆ) ಗ್ರಾಮದ ಭಗಿನಿ ಶಾಲಿನಿ ಶಿಶು ಮಂದಿರದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಾರೆಗಮಪ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಚಾರ ಸಂಕೀರ್ಣ ನಡೆಯಿತು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘ-ಸಂಸ್ಥೆಗಳ ಕನ್ನಡಪರ ಚಟುವಟಿಕೆಗಳಿಂದಾಗಿ ಇಂದು ಗಡಿ ಭಾಗದಲ್ಲಿ ಇಂದಿಗೂ ಕನ್ನಡ ಜೀವಂತವಾಗಿದೆ ಎಂದು ಹೇಳಿದರು.
ಸಾಹಿತಿ ರೂಪಾ ಪಾಟೀಲ ಮಾತನಾಡಿ, ಗಡಿ ಪ್ರದೇಶಗಳಲ್ಲಿ ಕನ್ನಡ ಶಾಲೆಗಳನ್ನು ತೆಗೆದಿದ್ದು ಅತ್ಯಂತ ಶ್ಲಾಘನೀಯ ಕಾರ್ಯ. ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲ ಕನ್ನಡಪರ ಸಂಘಟನೆಗಳು ಕೂಡಿ ಮಾಡಬೇಕಿದೆ. ಆಗ ಮಾತ್ರ ಗಡಿ ಪ್ರದೇಶದಲ್ಲಿ ಕನ್ನಡ ಮತ್ತಷ್ಟು ಗಟ್ಟಿಯಾಗಲು ಸಾಧ್ಯವಿದೆ ಎಂದರು.
ಟ್ರಸ್ಟ್‌ನ ಅಧ್ಯಕ್ಷ ಮಹೇಶಕುಮಾರ ಕುಂಬಾರ ಮಾತನಾಡಿ, ಗಡಿನಾಡಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
ಹಿರಿಯ ಸಾಹಿತಿ ರಮೇಶ ಬಿರಾದಾರ ಮಾತನಾಡಿದರು. ಮಾಳೆಗಾಂವ್ ಗ್ರಾಪಂ ಅಧ್ಯಕ್ಷ ಅನಿಲಕುಮಾರ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ಮಲ್ಲಿಕಾರ್ಜುನ ಸ್ವಾಮಿ, ಮಹೇಶಕುಮಾರ ಕುಂಬಾರ, ವೀಣಾಕುಮಾರಿ, ಧೋಂಡಿರಾಮ ಧೂರ್ವೆ, ಜಸ್ಸಿ ಸೋನವಾನಿ ಅವರ ಗಾಯನ ಮತ್ತು ಮಲ್ಲಿಕಾರ್ಜುನ ನಾಗಮಾರಪಳ್ಳಿ, ಪುಂಡಲಿಕರಾವ ಪಾಟೀಲ ಗುಮ್ಮಾ ಅವರ ತಬಲಾ ವಾದನ ಜನಮನ ಸೆಳೆಯಿತು. ಗ್ರಾಪಂ ಸದಸ್ಯರಾದ ಪಂಚಶೀಲಾ, ಸೂರ್ಯಕಾಂತ, ದಿಲೀಪಕುಮಾರ, ಸಂಪತಕುಮಾರ ಇನ್ನಿತರರಿದ್ದರು. ಗಣಪತಿ ಮಲ್ಲಿಕಾರ್ಜುನ ಹಡಪದ ನಿರೂಪಿಸಿದರು. ಗೋರಕನಾಥ ಕುಂಬಾರ ಸ್ವಾಗತಿಸಿದರು. ಚಂದ್ರಕಲಾ ಹಡಪದ ವಂದಿಸಿದರು.