Advertisement

ಕೇಂದ್ರದಿಂದ ತಂದ ಅನುದಾನದ ವರದಿ ನೀಡಲಿ

01:06 PM Mar 29, 2019 | Team Udayavani |

ರಾಮನಗರ: ಕಳೆದ 5 ವರ್ಷಗಳಲ್ಲಿ ಶ್ರಮವಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹೇರಿ ಕ್ಷೇತ್ರಕ್ಕೆ ತಂದ ಅನುದಾನ ಎಷ್ಟು ಎಂಬ ವರದಿಯನ್ನು ನೀಡುವಂತೆ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಆಗ್ರಹಿಸಿದರು.

Advertisement

ತಾಲೂಕಿನ ಬಿಡದಿ ಹೋಬಳಿಯ ಮೇಡನಹಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಹಿಂದೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಶ್ರಮವಿದೆ. ಹೀಗೆ ಶ್ರಮವಹಿಸಿ ತಂದ ಹಣ ಎಷ್ಟು ಎಂದು ಅವರು ಪ್ರಶ್ನಿಸಿದರು. ರಾಜ್ಯದ ಬಿಜೆಪಿ ಸಂಸದರ ರಿಪೋರ್ಟ್‌ ಕಾರ್ಡನ್ನು ತಮ್ಮ ಪಕ್ಷ ನಾಗರಿಕರಿಗಾಗಿ ಬಿಡುಗಡೆ ಮಾಡಿದೆ ಎಂದರು.

ಹಣದ ಮೂಲಕ ರಾಜಕೀಯ: ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ಯಾವ ಗೊಂದಲಗಳು, ಭಿನ್ನಾಭಿಪ್ರಾಯಗಳು ಇಲ್ಲ. ಕ್ಷೇತ್ರದಲ್ಲಿ 14 ಸಾವಿರ ಕಾರ್ಯಕರ್ತರನ್ನು ಗುರುತಿಸಲಾಗಿದೆ. ತಲಾ ಕಾರ್ಯಕರ್ತರಿಗೆ 20 ಮನೆಗಳನ್ನು ವಿಂಗಡಿಸಿದ್ದು, ಮತದಾರರ ಮನವೊಲಸಲಿದ್ದಾರೆ ಎಂದರು.

ಪರೋಕ್ಷವಾಗಿ ಮೈತ್ರಿ ಅಭ್ಯರ್ಥಿಯ ವಿರುದ್ಧ ಹರಿಹಾಯ್ದ ಅವರು, ಅವರಂತೆ ಹಣದ ಮೂಲಕ ರಾಜಕೀಯ ಮಾಡುವ ಶಕ್ತಿ ತಮ್ಮ ಪಕ್ಷಕ್ಕಿಲ್ಲ. ತಮ್ಮದೇನಿದ್ದರು ಬೇರು ಮಟ್ಟದ ಕಾರ್ಯಕರ್ತರ ಮೂಲಕ ಗೆಲುವು ಸಾಧಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಗುರುವಾರ ನಡೆದ ಐಟಿ ದಾಳಿಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಐಟಿ ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದರು.

ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ: ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌ ಮಾತನಾಡಿ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತಮ್ಮ ಪಕ್ಷದಲ್ಲಿ ಯಾವ ಗೊಂದಲಗಳು ಇಲ್ಲ. ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಆರ್‌.ಅಶೋಕ್‌ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು.

Advertisement

ಈ ವೇಳೆ ಬಿಜೆಪಿ ಪ್ರಮುಖರಾದ ಮುನಿರಾಜು ಗೌಡ, ಮಾಳವಿಕ, ಎಸ್‌.ಆರ್‌.ನಾಗರಾಜ್‌, ಪ್ರವೀಣ್‌ ಗೌಡ, ಜಿ.ವಿ.ಪದ್ಮಭಾಭ, ಮುರಳೀಧರ, ಆನಂದ ಸ್ವಾಮಿ, ಡಾ.ನವೀನ್‌, ಮಲವೇಗೌಡ ಮುಂತಾದವರು ಹಾಜರಿದ್ದರು.

ಡಿ.ಕೆ ಸಹೋದರರ ಅನುಮತಿ ಇಲ್ಲದೇ ಕ್ರಷರ್‌ ಸದ್ದು ಮಾಡೋಲ್ಲ
ರಾಮನಗರ: ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಸಿದ ವೇಳೆ ತಮ್ಮ ಒಟ್ಟು ಆಸ್ತಿ 338 ಕೋಟಿ ರೂ ಇದೆ ಎಂದು ಘೋಷಿಸಿಕೊಂಡಿದ್ದಾರೆ. 20 ವರ್ಷಗಳ ಅವರ ಬದುಕು ಹೇಗಿತ್ತು? ಇಂದು ಹೇಗಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ಇವರ ಅನುಮತಿ ಇಲ್ಲದೇ ಜಿಲ್ಲೆಯಲ್ಲಿ ಯಾವ ಕ್ರಷರ್‌ ಕೂಡ ಸದ್ದು ಮಾಡೋಲ್ಲ – ಹೀಗೆ ಡಿ.ಕೆ. ಸುರೇಶ್‌ರನ್ನು ತರಾಟೆಗೆ ತೆಗೆದುಕೊಂಡಿದ್ದು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌.

ತಾಲೂಕಿನ ಮೇಡನಹಳ್ಳಿಯಲ್ಲಿ ಮಾತನಾಡಿದ ಅವರು, ಈ ಭಾಗದ ಎಲ್ಲಾ ರಾಜ್ಯ, ರಾಷ್ಟ್ರೀಯ ಹೆದ್ದಾರಿ, ರಸ್ತೆಗಳ ಗುತ್ತಿಗೆಯನ್ನು ಡಿ.ಕೆ.ಸುರೇಶ್‌ ಅವರೇ ಬೇನಾಮಿ ಗುತ್ತಿಗೆ ಪಡೆದುಕೊಂಡಿದ್ದಾರೆ. ರಾಜಕಾರಣ ಮಾಡಿಕೊಂಡು ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಂಡು ಅವರು ಶ್ರೀಮಂತರಾಗುತ್ತಿದ್ದಾರೆ ಹೊರತು, ಜಿಲ್ಲೆಯ ರೈತರ, ಜನರ ಸಮಸ್ಯೆಗಳು ಮಾತ್ರ ಬಗೆಹರಿಯುತ್ತಿಲ್ಲ ಎಂದು ಆರೋಪಿಸಿದರು.

ಸಚಿವ ಡಿಕೆಶಿ ಅವರದ್ದು ಮಂದ ಚರ್ಮ: ತನಿಖಾ ಸಂಸ್ಥೆಗಳು ಡಿ.ಕೆ.ಸಹೋದರರಿಗೆ ಸೇರಿದ ಕೆಲವು ಬೇನಾಮಿ ಆಸ್ತಿಯನ್ನು ಮುಟ್ಟುಗೊಳು ಹಾಕಿಕೊಂಡಿದ್ದಾರೆ. ಹುಡುಕಿದರೆ ಅಂತಹ ನೂರಾರು ಬೇನಾಮಿ ಆಸ್ತಿಗಳು ಸಿಗುತ್ತವೆ. ಸಚಿವ ಡಿ.ಕೆ.ಶಿವಕುಮಾರ್‌ ಅವರದ್ದ ಮಂದ ಚರ್ಮ ಇಲ್ಲದಿದ್ದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಜನ ತಮ್ಮನ್ನು ಕಳ್ಳ ಎನ್ನುತ್ತಿದ್ದರು, ತಾವು ಮಾಡಿದ 300 ಕೋಟಿ ಹೋದರು ಪರವಾಗಿಲ್ಲ, 600 ಕೋಟಿ ಮಾಡ್ತೇವೆ ಎನ್ನುವಂತ್ತಿದೆ ಅವರ ಧೋರಣೆ ಎಂದರು.

ಜನ ಸೇವೆ ಅವರ ಉದ್ದೇಶವಲ್ಲ: ಎಚ್‌.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಸಹೋದರರ ಕುಟುಂಬಗಳಿಗೆ ಜನ ಸೇವೆ ಮಾಡುವ ಯಾವ ಉದ್ದೇಶವೂ ಇಲ್ಲ. ಅವರ ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ತರುವುದೇ ಅವರಿಗೆ ಮುಖ್ಯ. ಈ ಎರಡೂ ಕುಟುಂಬಗಳಿಗೆ ಪಾಠ ಕಲಿಸುವ ಸಮಯ ಬಂದಿದೆ. ಮತದಾರರು ಬಿಜೆಪಿಯ ವೈಚಾರಿಕತೆಯುಳ್ಳ ಅಭ್ಯರ್ಥಿ ಅಶ್ವತ್ಥನಾರಾಯಣ ಅವರನ್ನು ಗೆಲ್ಲಿಸಬೇಕು ಎಂದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಎಚ್‌.ಡಿ.ಕುಮಾರಸ್ವಾಮಿ ಒಮ್ಮೆಯಾದರೂ ಕ್ಷೇತ್ರದ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಕಷ್ಟಸುಖ ವಿಚಾರಿಸಲಿಲ್ಲ. ಈಗ ಪ್ರಜಾಪ್ರಭುತ್ವದ ದೌರ್ಬಲ್ಯಗಳನ್ನು ಬಳಸಿಕೊಂಡು ಮಂಡ್ಯದಲ್ಲಿ ತಮ್ಮ ಪುತ್ರ ನಿಖೀಲ್‌ನನ್ನು ಕಣಕ್ಕಿಳಿಸಿದ್ದಾರೆ ಎಂದು ಲೇವಡಿಯಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ 54 ಹೊಸ ರೈಲುಗಳು ಮಂಜೂರಾಗಿವೆ. ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ಹೊಸ ರೈಲುಗಳು ಸಿಕ್ಕಿದ್ದು ಇದೇ ಪ್ರಥಮ.
-ಅಶ್ವತ್ಥನಾರಾಯಣ, ಬೆಂ.ಗ್ರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next