ಮಾಗಡಿ: ರಾಜ್ಯದಲ್ಲಿ ಜನಪರವಾದ ಯೋಜನೆಗಳನ್ನು ಜಾರಿಗೆ ತರಬೇಕಾದರೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಮಾಗಡಿ ಕ್ಷೇತ್ರದಲ್ಲಿ ಶಾಶ್ವತದ ಹೇಮಾವತಿ ನೀರಾವರಿ ಯೋಜನೆ ಪೂರ್ಣಗೊಳ್ಳಲು ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಅವರನ್ನು ಅತ್ಯಾಧಿಕ ಮತಗಳಿಂದ ಗೆಲ್ಲಿಸಿಕೊಳ್ಳುವ ಮೂಲಕ ವಿರೋಧಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಬಾಲಕೃಷ್ಣ ಅವರ ಆಡಳಿತಕ್ಕೆ ತಿಲಾಂಜಲಿಯಾಡಬೇಕು ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪೂಜಾರಿಪಾಳ್ಯದ ಕೆ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ಜೆಡಿಎಸ್ ನಿಂದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಶಾಸಕರಾಗಿದ್ದ ಎಚ್.ಸಿ.ಬಾಲಕೃಷ್ಣ ಅವರು ಕ್ಷೇತ್ರ ಶಾಶ್ವತವಾದ ನೀರಾವರಿ ಯೋಜನೆಯನ್ನು ಅನಷ್ಠಾನಗೊಳಿಸಲಿಲ್ಲ.
ಹುರುಳಿಕಾಳು ಬೆಳೆಯುತ್ತಿದ್ದಾರೆ: ಈಗ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಮತದಾರರಿಗೆ ಆಸೆ ಹುಟ್ಟಿಸಿ ಮತ ಕಸಿಯುವ ಯತ್ನ ಮಾಡುತ್ತಿರುವ ಇವರು, 20 ವರ್ಷಗಳ ಶಾಸಕರಾಗಿದ್ದುಕೊಂಡು ನೀರಾವರಿ ಯೋಜನೆ ತರದೆ ಹುಲಿಕಟ್ಟೆಯಲ್ಲಿ ಹುರುಳಿಕಾಳು ಬೆಳೆಯುತ್ತಿದ್ದಾರೆ.
20 ವರ್ಷಗಳಿಂದ ಕ್ಷೇತ್ರದಲ್ಲಿ ದುಡಿದ್ದಿದ್ದರೆ ಮತದಾರರ ಕೈ ಕಾಲು ಹಿಡಿದು ಮತ ಕೇಳುವ ಅಗತ್ಯವಿರಲಿಲ್ಲ. ಹಗರಣಗಳ ಸರ್ದಾರ ಎಚ್.ಸಿ.ಬಾಲಕೃಷ್ಣ ಹಣಕ್ಕಾಗಿ ಕ್ಷೇತ್ರದ 2 ಲಕ್ಷ ಮತದಾರರ ಸ್ವಾಭಿಮಾನವನ್ನೇ ಹರಾಜು ಹಾಕಿರುವ ಇವರಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದು ಎಚ್.ಸಿ.ಬಾಲಕೃಷ್ಣ ವಿರುದ್ಧ ಲೇವಡಿ ಮಾಡಿದರು.
ಮತ ಮನವಿ: ಜೆಡಿಎಸ್ ರೈತ ಪರವಾದ ಸರ್ಕಾರವಾಗಿದ್ದು, ಜನಪರವಾದ ಯೋಜನೆ ಜಾರಿಗೆ ಬರಬೇಕಾದರೆ ಎಚ್‌ಡಿಕೆ ಸಿಎಂ ಆಗಬೇಕು. ಆದ್ದರಿಂದ ಜೆಡಿಎಸ್‌ಗೆ ಮತನೀಡಬೇಕು. ಮಾಗಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ ಜೆಡಿಎಸ್ ಅಭ್ಯರ್ಥಿ ಎ.ಮಂಜು ಅವರಿಗೆ ಕ್ಷೇತ್ರದ ಜನತೆ ಮತ ಹಾಕುವ ಮೂಲಕ ಗೆಲ್ಲಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್.ಮಂಜುನಾಥ್, ಪುರಸಭಾ ಸದಸ್ಯರಾದ ಕೆ.ವಿ.ಬಾಲು, ಮಹೇಶ್, ಶಿವಕುಮಾರ್, ಎಸ್.ಮಹದೇವ್ ಜೆಡಿಎಸ್ ಮುಖಂಡ, ಕಲ್ಕೆರೆ ಶಿವಣ್ಣ, ಗಿರಿಯಪ್ಪ, ಮಾರೇಗೌಡ, ಪೊಲೀಸ್ ರಾಮಣ್ಣ, ಚಂದ್ರಮ್ಮ, ನಂಜಯ್ಯ, ದೊಡ್ಡಯ್ಯ, ಡಿ.ಜಿ.ಕುಮಾರ್, ಜೈಕುಮಾರ್ ನರಸೇಗೌಡ, ಜುಟ್ಟನಹಳ್ಳಿ ಜಯರಾಂ ಇತರರು ಇದ್ದರು.
ಮೊಬೈಲ್ ಮೂಲಕವೇ ಮನವಿ: ಮಾಗಡಿಯಲ್ಲಿ ಎಚ್‌ಡಿಕೆ ನೇತೃತ್ವದ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಎಚ್‌ಡಿಕೆ ಭಾಷಣ ಕೇಳಲು ಜನಸಾಗರ ಹರಿದು ಬಂದಿತ್ತು. ಆದರೆ ಅನಾರೋಗ್ಯ ನಿಮಿತ್ತ ಸಭೆಗೆ ಆಗಮಿಸದೆ ಮೊಬೈಲ್ ಮೂಲಕವೇ ಜೆಡಿಎಸ್ ಪಕ್ಷದ ಜನಪರವಾದ ಯೋಜನೆ ಜಾರಿ,
ವಿರೋಧಿ ಎಚ್.ಸಿ.ಬಾಲಕೃಷ್ಣ ಅವರ ದೂರಾಡಳಿತದ ವಿರುದ್ಧ ಹರಿಹಾಯ್ದ ಎಚ್.ಡಿ.ಕುಮಾರಸ್ವಾಮಿ ಅವರು ಮತದಾರರಲ್ಲಿ ಮನವಿ ಮಾಡಿ ತನಗೆ ಆರೋಗ್ಯ ಕೈಕೊಟ್ಟಿದೆ. ಮಾಗಡಿಗೆ ಬರಲು ಆಗುತ್ತಿಲ್ಲ, ಇಲ್ಲಿಂದಲೇ ತಮ್ಮಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ. ಯಾರ ಮಾತನ್ನು ಕೇಳಬೇಡಿ, ಜೆಡಿಎಸ್ ಬೆಂಬಲಿಸಲು ಮನವಿ ಮಾಡಿದರು.