ಯಾದಗಿರಿ: ಜನಪದ ಕಲೆ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಶ್ರಮಿಸುತ್ತಿದೆ. ಎಲ್ಲರೂ ಪ್ರಯತ್ನಿಸಿದರೆ ಕಲೆ ಮತ್ತು ಕಲಾವಿದರು ಉಳಿಯಲಿದ್ದಾರೆ ಎಂದು ಕಜಾಪ ರಾಜ್ಯಾಧ್ಯಕ್ಷ ಡಾ| ಎಸ್. ಬಾಲಾಜಿ ಹೇಳಿದರು.
ಇಲ್ಲಿನ ಕಸಾಪ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಪರಿಷತ್ತು ಜಿಲ್ಲಾ ಘಟಕದ ಉದ್ಘಾಟನೆ ಮತ್ತು ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹ ಸಮಾರಂಭ, ಕನ್ನಡ ಜಾನಪದ ಲೋಕದಲ್ಲಿ ಕಟ್ಟಿರೋ ಗೆಜ್ಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸೋಭಾನೆ ಪದಗಳು, ಹಂತಿ ಪದಗಳು, ಮೋಹರಂ ಪದಗಳು, ಸಾಂಪ್ರದಾಯ ಹಾಡುಗಳು ಸೇರಿ ಬುಡಕಟ್ಟು ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಪರಿಷತ್ತು ಹೊಸ ಯೋಜನೆ ಹಾಕಿಕೊಂಡಿದೆ. ನಾಡಿನಾದ್ಯಂತ ಕನ್ನಡ ಜಾನಪದ ಪರಿಷತ್ತು ಘಟಕಗಳನ್ನು ಮಾಡಿ ಯುವ ಬ್ರಿಗೇಡ್ ಸ್ಥಾಪನೆ ಮಾಡಲಾಗುವುದು. ಅದರ ಜೊತೆಗೆ ಸರ್ಕಾರ ಬುಡಕಟ್ಟು ಸಂಸ್ಕೃತಿಯ ಅಕಾಡೆಮಿ ಸ್ಥಾಪಿಸಿ ಕಲೆ ಮತ್ತು ಕಲಾವಿದರನ್ನು ಉಳಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷರಾದ ಶರಣಪ್ಪ ತೋರಣಕರ್ ಮಾತನಾಡಿ, ಮೂಲ ಜಾನಪದ ಕಲೆಗಳನ್ನು ಉಳಿಸಬೇಕು ಮತ್ತು ಬೆಳೆಸಬೇಕು ಈ ಎಲ್ಲ ಕಲೆಗಳನ್ನು ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ, ಕೃಷಿ ಅಧಿಕಾರಿ ಸಾಯಿಬಪ್ಪ ಕಡೆಚೂರು, ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನ ಅಧ್ಯಕ್ಷ ರಾಜು ಹೆಂದೆ, ಶರಣಬಸಪ್ಪ ನಾಸಿ, ಡಾ| ಭೀಮರಾಯ ಲಿಂಗೇರಿ, ಕುಪೇಂದ್ರ ವಠಾರ, ಸಾಯಿಬಣ್ಣ ಸಿದ್ದಿ, ಹಣಮಂತ ನಾಯಕ, ರಿಯಾಜ್ ಪಟೇಲ ಸೇರಿದಂತೆ ಇತರರಿದ್ದರು.