Advertisement
ಹಂಪ್ಸ್‌ಗಳ ಬಣ್ಣ ಮಾಸಿದ ಪರಿಣಾಮ ನಗರದ ಬಹುತೇಕ ಭಾಗಗಳಲ್ಲಿ ಅಪಘಾತ ವಲಯ ಸೃಷ್ಟಿ ಯಾಗಿದೆ. ಹಂಪ್ಸ್ ಬಗ್ಗೆ ತಿಳಿಯದೆ ವೇಗವಾಗಿ ಬಂದರೆ ಆಪತ್ತು ಕಟ್ಟಿಟ್ಟಬುತ್ತಿ. ಅದರಲ್ಲೂ ರಾತ್ರಿ ಸಂಚರಿಸುವವರು ಹೆಚ್ಚು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ನಗರದ ವಿವಿಧ ಕಡೆಗಳಲ್ಲಿ ಅವೈಜ್ಞಾನಿಕ ಹಂಪ್ಸ್ ಕಾರಣದಿಂದಾಗಿ ಈ ಹಿಂದೆ ಅಪಘಾತಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಬಹುತೇಕ ಕಡೆಗಳಲ್ಲಿ ವೈಜ್ಞಾನಿಕ ರೀತಿಯ ಐಆರ್‌ಸಿ ಮಾದರಿಯ ಹಂಪ್ಸ್‌ಗಳನ್ನು ಅಳವಡಿಸಲಾಗಿದೆ. ಈ ಕಾರಣದಿಂದ “ರಬ್ಬರ್ ಹಂಪ್ಸ್’ಗಳನ್ನು ತೆರವು ಮಾಡಲಾಗಿತ್ತು. ಹೊಸ ಹಂಪ್ಸ್‌ಗಳನ್ನು ನಿರ್ಮಿಸಿದ ಕೂಡಲೇ ಬಣ್ಣ ಬಳಿದಿದ್ದು, ಅದು ನಿತ್ಯ ವಾಹನ ಸಂಚಾರದಿಂದ ಮಾಸಿ ಹೋಗಿದೆ. ಮತ್ತೊಮ್ಮೆ ಬಣ್ಣ ಬಳಿಯುವ ಕಾರ್ಯ ನಡೆದೇ ಇಲ್ಲ. ಬಣ್ಣದ ಜತೆಗೆ ಹಂಪ್ಸ್ ಮಾಯ!
ಕೊಟ್ಟಾರಚೌಕಿ ಫ್ಲೈಓವರ್ ಕೆಳಗಡೆ, ಚಿಲಿಂಬಿ, ಬೆಂದೂರ್ ಸೇರಿದಂತೆ ನಗರದ ಕೆಲವು ಹಂಪ್ಸ್‌ಗಳಲ್ಲಿ ಬಣ್ಣ ಮಾಸಿದ್ದು ಮಾತ್ರವಲ್ಲ; ಹಂಪ್ಸ್ ಕೂಡ ಮಾಯವಾಗಿದೆ. ಈ ಪೈಕಿ ಕೆಲವೆಡೆ ಹಂಪ್ಸ್‌ನ ಕೆಲವು ಭಾಗದ ಡಾಮರು ಕಿತ್ತು ಹೋಗಿದೆ. ಇಲ್ಲಿ ವಾಹನ ಸವಾರರು ಸರ್ಕಸ್ ಮಾಡಬೇಕಿದೆ.
Related Articles
ನಗರದ ಅತೀ ಹೆಚ್ಚು ಜನ ಸೇರುವ ಕಡೆಗಳಲ್ಲಿ “ಝೀಬ್ರಾ ಕ್ರಾಸ್’ ಅನ್ನು ಅಳವಡಿಸಲಾಗಿದೆ. ವಿಶೆಷವೆಂದರೆ ಇದರ ಬಣ್ಣ ಕೂಡ ಈಗ ಮಾಸಿದೆ. ಜತೆಗೆ ಲಾಲ್‌ಬಾಗ್, ಪಿವಿಎಸ್ ಸಹಿತ ವಿವಿಧ ಸಿಗ್ನಲ್‌ಗಳಲ್ಲಿ ವಾಹ ನಗಳ ನಿಲುಗಡೆ ಗೊತ್ತುಪಡಿಸುವ ಬಣ್ಣವೂ ಮಾಸಿದೆ. ಹೀಗಾಗಿ ವಾಹನ ನಿಲ್ಲಿಸಲು ಕೂಡ ಇಲ್ಲಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
Advertisement
ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ರಸ್ತೆ; ಕಾಮಗಾರಿ ಆರಂಭಸ್ಮಾರ್ಟ್ಸಿಟಿ ಯೋಜನೆಯಲ್ಲಿ ಕ್ಲಾಕ್‌ಟವರ್ ನಿಂದ ಎ.ಬಿ.ಶೆಟ್ಟಿ ವೃತ್ತದವರೆಗೆ ರಸ್ತೆ ಮೇಲ್ದರ್ಜೆ ಗೇರಿದ್ದು, ಇಲ್ಲಿ ಹಂಪ್ಸ್ ಹಾಗೂ ಅದಕ್ಕೆ ಬಣ್ಣ ಬಳಿಯುವ ಕಾಮಗಾರಿ ಶುರುವಾಗಿದೆ. ರಾತ್ರಿ ಸಮಯದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ನಿತ್ಯ ಸಾವಿರಾರು ಮಂದಿ ಸಂಚರಿಸುವ ಕಾರಣದಿಂದ ಪಾದಚಾರಿಗಳಿಗೆ ನೆರವಾಗಲು ಝೀಬ್ರಾ ಕ್ರಾಸ್ ಕೂಡ ಹಾಕಲಾಗುತ್ತಿದೆ. ಕೆಲವೇ ದಿನಗಳಲ್ಲಿ ಕ್ರಮ
ನಗರದ ಕೆಲವು ಹಂಪ್ಸ್‌ಗಳ ಬಣ್ಣ ಮಾಸಿದೆ. ಆದರೆ ಇತ್ತೀಚಿನವರೆಗೂ ಮಳೆ ಇದ್ದ ಕಾರಣದಿಂದ ಹಂಪ್ಸ್‌ಗಳಿಗೆ ಬಣ್ಣ ಬಳಿಯಲು ಸಾಧ್ಯವಾಗಿರಲಿಲ್ಲ. ಈಗ ಮಳೆ ನಿಂತಿರುವುದರಿಂದ ಕೆಲವೇ ದಿನಗಳಲ್ಲಿ ಹಂಪ್ಸ್‌ಗಳಿಗೆ ಬಣ್ಣ ಬಳಿಯಲು ಹಾಗೂ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಪ್ರೇಮಾನಂದ ಶೆಟ್ಟಿ, ಮೇಯರ್,
ಮಹಾನಗರ ಪಾಲಿಕೆ