Advertisement
ಭಾರತೀಯರಾದ ನಾವು ಪ್ರತೀದಿನ ಬೆಳಿಗ್ಗೆ ಸ್ನಾನ ಮಾಡುವಾಗ ಸಪ್ತ ಜಾಹ್ನವಿಗಳನ್ನು ಆವಾಹನ ಮಾಡುತ್ತೇವೆ. ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುವಾಗ ಪ್ರತೀಸಲವು ಸಂಕಲ್ಪ ಮಾಡುತ್ತೇವೆ. ಶುಭ ಕಾರ್ಯಗಳಲ್ಲಿ ಕಲಶ ಪೂಜೆ, ಗಂಗಾಪೂಜೆ ಮಾಡುತ್ತೇವೆ. ಈ ಎಲ್ಲ ಸಂದರ್ಭಗಳಲ್ಲಿಯೂ ನಮ್ಮನ್ನು ಹಾಗೂ ಸೃಷ್ಠಿಯನ್ನು ಬೆಸೆದಿರುವ ಸಂಬಂಧ ಸೂತ್ರಗಳನ್ನು ಆಗ ಹೇಳಲಾಗುತ್ತದೆ. ಇದರೊಂದಿಗೆ ನಮ್ಮ ಜೀವನಾಂಶವಾಗಿರುವ ನದಿಗಳನ್ನು ಸ್ಮರಿಸಿಕೊಳ್ಳಲಾಗುತ್ತದೆ.
Related Articles
Advertisement
ಕೇವಲ ಧಾರ್ಮಿಕ ಪೂಜೆ-ಪುನಸ್ಕಾರ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ಕಲೆ, ಸಾಹಿತ್ಯಿಕವಾಗಿ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭೆಯರನ್ನು ಸ್ತುತಿಸುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ನಮ್ಮ ಪಕ್ಕದಲ್ಲಿಯೇ ಇರುವ ಮಂಡ್ಯ-ಮೈಸೂರು ಜನ ಕಾವೇರಿಯನ್ನು ನಾಡಿನ ಜೀವನದಿ ಎಂದು ಕರೆದರು. ಅದೇ ರೀತಿ ದಕ್ಷಿಣ ಕನ್ನಡದ ಜನ ಇಂದೂ ನೇತ್ರಾವತಿಯನ್ನು ಜೀವನದಿ ಎಂದು ಗೌರವದಿಂದ ಕಾಣುವರು. ಶರಾವತಿ ಕನ್ನಡ ನಾಡಿನ ಭಾಗಿರಥಿಯಾದಳು. ಅಷ್ಟೇ ಏಕೆ ಕಾವೇರಿ, ಶರಾವತಿ ಜತೆಗೆ ತುಂಗೆ-ಭದ್ರೆಯರ ಕುರಿತು ಸಿನೆಮಾ ಹಾಡುಗಳು, ನೃತ್ಯಗಳು ರಚಿತವಾದವು. ಹಿರಿಯ ಕಲಾವಿದರ ಬಾಯಲ್ಲಿ ಈ ನದಿಗಳ ವೈಭವ ನಲಿದಾಡಿತು. ಆದರೆ ಇದೇ ಪ್ರಮುಖ್ಯತೆ ಕೃಷ್ಣೆಗೇಕೆ ದೊರಕಿಲ್ಲ ಎಂಬುದು ಯಶಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಇದರಿಂದಾಗಿ ಸಾಮಾಜಿಕ ನ್ಯಾಯ ಪಡೆಯುವಲ್ಲಿಯೂ ನಾವು ಕುಗ್ಗಿ ಹೋದೆವು. ಕಾವೇರಿ ಜಲಾನಯನ ಪ್ರದೇಶದ ಯೋಜನೆಗಳು ಅಲ್ಲಿಯ ಜನರಿಗೆ ಅಸ್ಮಿತೆಯ ಸಂಕೇತವಾದರೆ ನಮ್ಮ ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ಜಲಾನಯನ ಪ್ರದೇಶದ ಯೋಜನೆಗಳು ಕೇವಲ ರಾಜಕೀಯ ಪ್ರಚಾರಕ್ಕಷ್ಟೇ ಸೀಮಿತವಾದವು. ಹೀಗಾಗಿ ನಮ್ಮ ಮಹತ್ವಾಕಾಂಕ್ಷೆಯ ನೀರಾವರಿ ಯೋಜನೆಗಳು ಇಂದಿಗೂ ಪೂರ್ಣಗೊಂಡಿಲ್ಲ. ತಮಿಳುನಾಡಿನ ಜನ ಕುಡಿಯಲು ಕಾವೇರಿಯ ನೀರನ್ನು ಕೇಳಿದರೆ ಹಳೆ ಮೈಸೂರು ಭಾಗದ ಜನ ಬೀದಿಗಿಳಿದು ಹೋರಾಟ ಮಾಡುತ್ತಾರೆ. ದಶಕಗಳಿಂದ ಕೃಷ್ಣೆಯ ಸಾವಿರಾರು ಟಿ.ಎಂ.ಸಿ ನೀರು ಆಂದ್ರ-ತೆಲಂಗಾಣದ ಪಾಲಾದರೂ ನಮ್ಮ ಜನ ಗಾಢ ನಿದ್ರೆಯಲ್ಲಿದ್ದಾರೆ. ಕಾವೇರಿಯ ಮೇಲೆ ಮೈಸೂರು ಮಹಾರಾಜರಿಗೆ ವಿಶೇಷ ಅಕ್ಕರೆಯಿತ್ತು. ತುಂಗಭದ್ರೆಯ ದಡದಲ್ಲಿ ವೈಭವದ ವಿಜಯನಗರ ಸಾಮ್ರಾಜ್ಯ ನಿರ್ಮಾಣವಾಗಿತ್ತು. ಹೀಗಾಗಿ ವಿಜಯನಗರದ ಅರಸರು ತುಂಗಭದ್ರೆಯನ್ನು ದೈವವಾಗಿ ಕಂಡರು. ನಮ್ಮ ಕೃಷ್ಣೆಗೆ ಮೈಸೂರು ಮಹಾರಾಜರೂ ಸಿಗಲಿಲ್ಲ, ವಿಜಯನಗರವು ದೊರಕಲಿಲ್ಲ. ಹೀಗಾಗಿ ಕೃಷ್ಣೆಯ ದೈವತ್ವ, ಪೂಜ್ಯತೆ, ಸಮೃದ್ದತೆ, ವಿಶಾಲತೆ ನಮ್ಮ ಜನಕ್ಕೆ ಅರ್ಥವಾಗದ್ದಕ್ಕೆ ಇದೂ ಕಾರಣವಾಗಿರಬಹುದು.
ಕೃಷ್ಣೆಯ ಉಪನದಿಯಾದ ಮಲಪ್ರಭೆ ಚಿಕ್ಕ ನದಿಯಾದರೂ ತನ್ನ ಒಡಲಿನಲ್ಲಿ ಧಾರ್ಮಿಕತೆ, ಪರಂಪರೆಯನ್ನು ಪೋಷಿಸಿ ಬೆಳಸಿದ್ದಾಳೆ. ಪುರಾಣಗಳಲ್ಲಿ ಮಲಪ್ರಭೆಯನ್ನು “ಮಲಾಪಹರಿ’ ಎಂದು ಕರೆಯುತ್ತಿದ್ದರು. ಋಷಿ-ಮುನಿಗಳು ನದಿ ದಂಡೆಯ ಮೇಲೆ ಜಪ-ತಪ, ಯಜ್ಞ-ಯಾಗಾದಿಗಳನ್ನು ಮಾಡಿದ್ದಾರೆ. ಸವದತ್ತಿಯ ರೇಣುಕಾ ಎಲ್ಲಮ್ಮ ದೇವಸ್ಥಾನ ಕರ್ನಾಟಕ-ಮಹಾರಾಷ್ಟ್ರದ ಅಸಂಖ್ಯ ಭಕ್ತರಿಗೆ ಪವಿತ್ರ ಸ್ಥಳ. ಜಮದಗ್ನಿ ಋಷಿ, ರೇಣುಕಾದೇವಿ ಹಾಗೂ ಪರುಶುರಾಮರ ಕುರಿತು ಇಲ್ಲಿ ಹಲವಾರು ಐತಿಹ್ಯಗಳಿವೆ. ಬದಾಮಿ ಬಳಿ ಬನಶಂಕರಿದೇವಿ ಶಕ್ತಿಪೀಠವಿದೆ. ಬದಾಮಿಯ ಚಾಲುಕ್ಯರು ಮಲಪ್ರಭೆಯ ದಂಡೆಯಲ್ಲಿ ವಾತಾಪಿಯನ್ನು (ಇಂದಿನ ಬಾದಾಮಿ) ರಾಜಧಾನಿ ಮಾಡಿಕೊಂಡು ಸಾಮ್ರಾಜ್ಯ ಕಟ್ಟಿದ್ದಾರೆ. ಸಮಾನತೆಗೆ ನಾಂದಿ ಹಾಡಿದ 12 ಶತಮಾನದ ಶ್ರೇಷ್ಠ ಸಮಾಜ ಸುಧಾರಕ, ವಿಶ್ವಗುರು ಬಸವಣ್ಣನವರ ಐಕ್ಯಮಂಟಪ ಕೃಷ್ಣೆ ಮಲಪ್ರಭೆಯನ್ನು ಸಂಗಮಿಸುವ ಕೂಡಲಸಂಗಮದಲ್ಲಿದೆ. ಇಲ್ಲಿಯ ಐತಿಹಾಸಿಕ ಸಂಗಮೇಶ್ವರ ದೇವಸ್ಥಾನವೂ ಪ್ರಸಿದ್ದವಾಗಿದೆ.
ಕಾಕತಾಳೀಯವೆಂಬಅತೆ ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕೆಯವರ ಐಕ್ಯಮಂಟಪವು ಮಲಪ್ರಭಾ ದಂಡೆಯ ಮೇಲಿನ ಎಂ.ಕೆ. ಹುಬ್ಬಳ್ಳಿ ಬಳಿ ಇರುವುದು ವಿಶೇಷ. ಬಾಗಲಕೋಟೆ ಜಿಲ್ಲೆಯ ಶಿವಯೋಗ ಮಂದಿರ ಈ ಎಲ್ಲ ಕ್ಷೇತ್ರಗಳು ವಿರಶೈವ ಲಿಂಗಾಯತರ ಪವಿತ್ರ ಶೃದ್ದಾ ಕೇಂದ್ರಗಳು. ಬದಾಮಿ ಚಾಲುಕ್ಯರ ಕಾಲದ ಬಾದಾಮಿ ಗುಹೆಗಳು, ಐಹೊಳೆ, ಪಟ್ಟದಕಲ್ಲು ಮಹಾಕೂಟ ಯುನೆಸ್ಕೋ ಪಟ್ಟಿಯಲ್ಲಿ ಸೆರ್ಪಡೆಯಾದ ಪಾರಂಪರಿಕ ತಾಣಗಳಿವೆ. ಮಲಪ್ರಭಾ ನದಿಯು ಮುನ್ನವಳ್ಳಿ ಬಳಿ ಉತ್ತರಾಭಿಮುಖವಾಗಿ ಹರಿಯುವುದರಿಂದ ಋಷಿ-ಮುನಿಗಳು ತಪಸ್ಸು ಮಾಡಲು ಪವಿತ್ರವಾಗಿತ್ತು ಎಂಬ ಧಾರ್ಮಿಕ ನಂಬಿಕೆ ಇದೆ. ಮುನಿಗಳು ತಪಸ್ಸು ಮಾಡಿದ ಮುನಿಪಳ್ಳಿ ಕಾಲಾಂತರದಲ್ಲಿ ಮನ್ನವಳ್ಳಿಯಾಯಿತು. ಸಪ್ತರ್ಸಿಗಳಲ್ಲಿ ಒಬ್ಬರಾದ ಅಗಸ್ತ್ಯರು ಇಲ್ಲಿ ಹಲವಾರು ವರ್ಷ ತಪಸ್ಸು ಮಾಡಿದ್ದಾರೆ. ಅಮರಶಿಲ್ಪಿ ಜಕಣಾಚಾರ್ಯ ಕೆತ್ತಿದ ಪಂಚಲಿಂಗೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ. ಮಾದನೂರಿನ ವಿಷ್ಣುತಿರ್ಥರು ಇಲ್ಲಿ 11 ವರ್ಷಗಳ ಕಾಲ ತಪಸ್ಸು ಮಾಡಿದ್ದಾರೆ. ಹಾನಗಲ್‌ನ ಕುಮಾರೇಶ್ವರರು, ಭಾರದ್ವಾಜ ಮುನಿಗಳು, ಚಿದಂಬರರು ಹಾಗೂ ಅವರ ಶಿಷ್ಯರಾದ ಕೈವಲ್ಯಾನಂದರು ಮಲಪ್ರಭೆಯ ತಟದಲ್ಲಿ ಧಾರ್ಮಿಕ ಕೈಂಕರ್ಯ ಕೈಗೊಂಡಿದ್ದಾರೆ. ಹೀಗಾಗಿ ಮಲಪ್ರಭೆಯ ದಡದಲ್ಲಿ ಮಹಾನ್ ತಪಸ್ವಿಗಳು ಸಾಧನೆ ಮಾಡಿದ್ದಾರೆ. ಅನೇಕ ಜನಪದ ಹಾಡುಗಳು ಮಲಪ್ರಭೆಯ ಕುರಿತು ರಚಿತವಾಗಿವೆ. ಇಂದಿಗೂ ಮಲಪ್ರಭೆಯ ನೀರನ್ನು ಕಳಸದಲ್ಲಿ ಒಯ್ದು ಶ್ರದ್ದೆಯಿಂದ ಪೂಜೆ ಮಾಡುವ ಸಂಸ್ಕೃತಿ ಇದೆ. ಈ ಶ್ರೀಮಂತ ಐತಿಹಾಸಿ ಹಾಗೂ ಧಾರ್ಮಿಕ ಹಿನ್ನೆಲೆ ಇಂದಿನ ಯುವ ಪೀಳಿಗೆಗೆ ಪರಿಚಯಿಸಿ ಕೊಡುವ ಕಾರ್ಯವಾಗಬೇಕು.
ನಮ್ಮ ನದಿಗಳ ಬಗೆಗಿನ ಇಂತಹ ಅಸಂಖ್ಯ ಸಂಗತಿಗಳು ನಮಗೆ ಗೊತ್ತಿಲ್ಲ. ಅವುಗಳನ್ನು ಶೋಧಿಸುವ, ಪೋಷಿಸುವ ಕೆಲಸವನ್ನು ಸುಸಂಸ್ಕೃತ ಸಮಾಜ ಮಾಡಬೇಕು. ಕೃಷ್ಣೆ, ಕಾವೇರಿ, ತುಂಗಭದ್ರೆ ಮಾತ್ರವಲ್ಲ, ಚಿಕ್ಕ-ಪುಟ್ಟ ನದಿಗಳು ನಮಗೆ ದೈವಸ್ವರೂಪ. ಈ ಎಲ್ಲ ನದಿಗಳು ನಮಗೆ ನೆಮ್ಮದಿಯ ಬದುಕು ಕಟ್ಟಿಕೊಟ್ಟಿವೆ. ನಾಗರಿಕತೆಯ ಪಾಠ ಹೇಳಿಕೊಟ್ಟಿವೆ. ಅವುಗಳ ಬಗ್ಗೆ ನಮಗೆ ಧನ್ಯತೆ ಮತ್ತು ಪೂಜ್ಯತೆಯ ಭಾವ ಬೆಳೆಯಬೇಕು. ಭಾರತ ಭಾವನೆಗಳಿಂದ ನಿರ್ಮಾಣವಾದ ರಾಷ್ಟ್ರ. ಹೆಜ್ಜೆ-ಹೆಜ್ಜೆಗೂ ತೀರ್ಥಕ್ಷೇತ್ರಗಳು, ಪುರಾಣ ಕಥೆಗಳನ್ನು ಪೋಷಿಸಿಕೊಂಡ ಬಂದ ರಾಷ್ಟ್ರ. ನಮ್ಮ ಸಾಂಸ್ಕೃತಿಕ ಹಿರಿಮೆ, ಪರಂಪರೆಯನ್ನು ಪೋಷಿಸುವುದು ನಮ್ಮ ಕರ್ತವ್ಯ. ಮಾತೃಸ್ವರೂಪವಾದ ನಮ್ಮ ನದಿಗಳು ಹಾಗೂ ಅಮೃತಕ್ಕೆ ಸಮನಾದ ಜೀವಜಲದ ಕುರಿತು ಭಕ್ತಿ ಭಾವವನ್ನು ಬೆಳೆಸಿಕೊಳ್ಳೋಣ, ನದಿ ರಾಷ್ಟ್ರಸ್ಯ ಮಹಾಅಮೃತಂ ಎಂಬುದನ್ನು ಅರಿತು ನದಿಗಳನ್ನು ಸ್ತುತಿಸೋಣ.
– ಸಂಗಮೇಶ ಆರ್. ನಿರಾಣಿ.,ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು