Advertisement
ಅನಿರೀಕ್ಷಿತವಾಗಿ ಬಂದೆರಗಿದ ಸಾಂಕ್ರಾಮಿಕ ಕಾಯಿಲೆಯಿಂದ ಜಗತ್ತಿನಾದ್ಯಂತ ಹಲವು ಏರುಪೇರುಗಳಾದವು. ಇದು ಸಹಜ ವಾಗಿ ನಮ್ಮ ಆತ್ಮವಿಶ್ವಾಸದ ಬೇರನ್ನು ಅಲುಗಾ ಡಿಸಿದೆ. ಈ ಎಲ್ಲ ನಕಾರಾತ್ಮಕ ಪರಿಣಾಮ ಗಳ ಹೊರತಾಗಿಯೂ ಕೋವಿಡ್ ಜನರಲ್ಲಿ ನೈರ್ಮಲ್ಯ, ಸುರಕ್ಷತೆಯ ಬಗೆಗೆ ಜಾಗೃತಿ ಮೂಡುವಂತೆ ಮಾಡಿದ್ದೇ ಅಲ್ಲದೆ ಜನರ ಯೋಚನಾಲಹರಿಯನ್ನೂ ಬದಲಾಯಿ ಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.
Related Articles
Advertisement
ಲಾಕ್‌ಡೌನ್ ಅವಧಿಯಲ್ಲಿ ಜನರ ವ್ಯವಹಾರಗಳು ಕಡಿಮೆಯಾದ ಕಾರಣ ಪ್ರಕೃತಿಯೂ ನಿಟ್ಟುಸಿರು ಬಿಟ್ಟು ಹಾಯಾಗಿತ್ತು. ವಾಹನಗಳು ರಸ್ತೆಗಿಳಿಯದೇ ಇದ್ದುದರಿಂದ ವಾಯುಮಾಲಿನ್ಯ ಅಚ್ಚರಿಯ ರೀತಿಯಲ್ಲಿ ಕಡಿಮೆಯಾಗಿತ್ತು. ಕಾರ್ಖಾನೆಗಳು ಬಂದ್ ಆಗಿದ್ದರಿಂದ ಶಬ್ದಮಾಲಿನ್ಯ ಕಡಿಮೆಯಾಗಿ ಹಕ್ಕಿಗಳ ಇಂಚರಕ್ಕೆ ಕಿವಿಯಾಗುವ ಸೌಭಾಗ್ಯವೂ ಪ್ರಾಪ್ತಿಯಾಗಿತ್ತು. ಸಣ್ಣದಾಗಿ ನೆಗಡಿ, ಜ್ವರ ಕಾಣಿಸಿಕೊಂಡಾಗಲೂ ವೈದ್ಯರ ಬಳಿ ಓಡುತ್ತಿದ್ದ ಮಂದಿ ಊರಲ್ಲಿಯೇ ಸಿಗುವ ಗಿಡಮೂಲಿಕೆಗಳ ಮೊರೆ ಹೋದರು. “ಹಿತ್ತಲ ಗಿಡ ಮದ್ದಲ್ಲ’ ಎಂದು ಮೂಗು ಮುರಿಯುತ್ತಿದ್ದವರಿಗೆ ಔಷಧ ಸಸ್ಯಗಳ ಮೌಲ್ಯವೇನು ಎಂಬುದು ತಿಳಿಯಿತು. ಅದೆಷ್ಟೋ ಮಂದಿ ಈಗ ಆರೋಗ್ಯ ವೃದ್ಧಿಗಾಗಿ ಪ್ರಾಣಾಯಾಮ, ಯೋಗ, ಧ್ಯಾನದಲ್ಲಿ ನಿರತರಾಗಿದ್ದಾರೆ.
ಇನ್ನು ನದಿ, ಸಾಗರಗಳಲ್ಲಿ ವಾಣಿಜ್ಯಿಕ ಚಟುವಟಿಕೆಗಳು ಕಡಿಮೆಯಾದ ಪರಿಣಾಮ ಜಲ ಮಾಲಿನ್ಯದ ಪ್ರಮಾಣ ಕಡಿಮೆಯಾದರೆ ವಿಮಾನಗಳ ಹಾರಾಟದ ಅಬ್ಬರವಿಲ್ಲದೆ ಆಗಸ ನಿರ್ಮಲವಾಗಿತ್ತು.
ಡಿಜಿಟಲ್‌ನತ್ತ ಮುಖಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಕೆಲವು ತಿಂಗಳುಗಳ ಹಿಂದೆ ದೇಶದಲ್ಲಿ ಯಾವುದು ಅಸಾಧ್ಯ ಎಂದು ಭಾವಿಸಲಾಗಿತ್ತೋ ಅದು ಕಾರ್ಯಸಾಧ್ಯವಾಗುತ್ತಿದೆ. ಸುಮಾರು ಎರಡು ದಶಕಗಳ ಹಿಂದೆಯೇ ವಾಣಿಜ್ಯ ವ್ಯವಹಾರ ಸಹಿತ ಆರ್ಥಿಕ ಚಟುವಟಿಕೆಗಳಿಗೆ ತಂತ್ರಜ್ಞಾನವನ್ನು ಬಳಕೆ ಮಾಡುವ ಬಗೆಗೆ ದೇಶದಲ್ಲಿ ಚರ್ಚೆಗಳು ಆರಂಭವಾಗಿದ್ದವಾದರೂ ಆರೇಳು ವರ್ಷಗಳ ಹಿಂದೆಯಷ್ಟೇ ಡಿಜಿಟಲ್ ವ್ಯವಹಾರಕ್ಕೆ ಒಂದಿಷ್ಟು ಆದ್ಯತೆ ಲಭಿಸಿತು. ಸರಕಾರದ ಸತತ ಪ್ರಯತ್ನಗಳ ಹೊರತಾಗಿಯೂ ಜನರು ಆನ್‌ಲೈನ್ ವ್ಯವಹಾರಕ್ಕೆ ಒಗ್ಗಿಕೊಂಡಿರಲಿಲ್ಲ. ಆದರೆ ಈಗ ಅನಿವಾರ್ಯವಾಗಿ ನಗದು ರಹಿತ ವ್ಯವಹಾರದತ್ತ ಹೆಚ್ಚಿನ ಆಸಕ್ತಿ ತೋರಲಾರಂಭಿಸಿದ್ದಾರೆ. ಸಣ್ಣಪುಟ್ಟ ಹಣಕಾಸು ವ್ಯವಹಾರಕ್ಕೆ ಬ್ಯಾಂಕ್, ಅಂಚೆ ಕಚೇರಿಗಳಿಗೆ ಅಲೆದಾಡುತ್ತಿದ್ದವರು ಈಗ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ತಮ್ಮ ಬೇಕು-ಬೇಡಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಜನರು ಈ ವಿಚಾರದಲ್ಲಿ ಒಂದಿಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವರಾದರೂ ಕಾಲಕ್ರಮೇಣ ಇದಕ್ಕೂ ಪರಿಹಾರ ಸಿಗುವ ನಿರೀಕ್ಷೆ ಇದೆ. ಕೊರೊನಾದ ಬಳಿಕ ಜನರು ಸ್ವತ್ಛತೆಗೆ ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಪದೇಪದೆ ಕೈ ತೊಳೆಯುತ್ತಿದ್ದಾರೆ. ಮನೆ ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕೊರೊನಾ ನಮ್ಮ ಜೀವನ ಶೈಲಿಯ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಲು ಸಹಾಯಕ ವಾದರೆ ಪ್ರಕೃತಿಯ ಮುಂದೆ ಮಾನವ ತೃಣ ಸಮಾನ ಎಂಬುದನ್ನೂ ಸಾಬೀತುಪಡಿಸಿದೆ. “2020 ನೆಗೆಟಿವ್ ಇಯರ್’, “ದುರಂತಗಳ ವರ್ಷ’ ಎಂದು ಕೊರಗುವ ಬದಲು ನಮಗೆ ಈ ವೈರಸ್ ಮೂಲಕ ಪ್ರಕೃತಿ ನೀಡಿದ ಎಚ್ಚರಿಕೆಗಳನ್ನು ನಾವು ಮೊದಲು ಅರ್ಥೈಸಿಕೊಳ್ಳೋಣ. ಕೊರೊನಾ ನಮಗೆ ಕಲಿಸಿದ ಜೀವನ ಪಾಠ ಅಮೂಲ್ಯವಾದುದಾಗಿದ್ದು ಅವನ್ನು ಮರೆಯ ದಿರೋಣ. ಕೊರೊನಾ ನೆಪದಲ್ಲಾದರೂ ನಾವು ಒಂದಿಷ್ಟು ಬದಲಾದರೆ ಅದು ನಮ್ಮ ಭವಿಷ್ಯಕ್ಕೆ ಪೂರಕವಾಗುವುದಂತೂ ಖಂಡಿತ. ಕಾರ್ತಿಕ್ ಅಮೈ