ಸಂಪದ್ಭರಿತವಾದ ಐತಿಹಾಸಿಕ ಭವ್ಯ ಪರಂಪರೆಯ ನಾಡು ಕನ್ನಡ ನಾಡು. ಇಂತಹ ಕನ್ನಡ ನಾಡು ನುಡಿಯಲ್ಲಿ ವಿಭಿನ್ನವಾದ ಸಂಸ್ಕೃತಿ, ಸಂಪ್ರದಾಯಗಳ ಸತ್ವ ಇದೆ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಆಲೂರು ವೆಂಕಟರಾಯರು ಸೇರಿದಂತೆ ಅಸಂಖ್ಯಾತ ಕನ್ನಡಾಭಿಮಾನಿಗಳಿಂದ ಈ ನಾಡು ಒಂದಾಗಿದೆ. ಕನ್ನಡ ನಾಡಿನ ಇತಿಹಾಸ ಎರಡು ಸಾವಿರ ವರ್ಷಗಳಷ್ಟು ಹಳೆಯದು. ಹರಪ್ಪ, ಸಿಂಧೂ ಹೀಗೆ ಅನೇಕ ನಾಗರಿಕತೆಗಳ ಹುಟ್ಟಿನ ಕುರುಹುಗಳಿಗೆ ಸಾಕ್ಷಿಯಾಗಿದೆ. ಕದಂಬರು, ಗಂಗರು, ಚೋಳರು, ಹೊಯ್ಸಳರು ಆಳ್ವಿಕೆ ನಡೆಸಿ, ಈ ನಾಡಿನ ಕೀರ್ತಿ ಪತಾಕೆಯನ್ನು ಗಗನಕ್ಕೇರಿಸಿದವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಭವ್ಯ ಪರಂಪರೆಯ ಈ ನಾಡಿನಲ್ಲಿ ಕವಿ ಪುಂಗವರು, ವಚನಕಾರರು, ಲೇಖಕರು ಹೀಗೆ ಕನ್ನಡ ಸಾಹಿತ್ಯದ ಲೋಕಕ್ಕೆ ಅಮೋಘವಾದ ಸಾಹಿತ್ಯವನ್ನು ನೀಡಿದ ಕೀರ್ತಿಯೂ ಮಹಾ ಪುರುಷರಿಗೆ ಸಲ್ಲುತ್ತದೆ. ಅನೇಕ ದೇವಾಲಯಗಳು ಪುಣ್ಯಕ್ಷೇತ್ರಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ಅನೇಕ ರಾಜ ಮನೆತನಗಳಿಗೆ ಸಲ್ಲುತ್ತದೆ. ಇಂತಹ ಗತ ವೈಭವವನ್ನು ಸಾರುವ ಕ್ಷೇತ್ರಗಳ ಪೌರಾಣಿಕ ಇತಿಹಾಸದ ಕಂಪು ಕನ್ನಡ ನಾಡಿನ ಎಲ್ಲೆಡೆಯೂ ಮಾರ್ದನಿಸುತ್ತಿದೆ. ಕೇಳಿಸದೇ ಕಲ್ಲು ಕಲ್ಲಿನಲ್ಲಿ ಎಂಬ ಹಾಡನ್ನು ಕೇಳಿದಾಗ ಹಂಪೆಯ ವಿಜಯನಗರ ಸಾಮ್ರಾಜ್ಯದ ಗತ ವೈಭವ ಕಣ್ಣ ಮುಂದೆ ಸಾಗುತ್ತದೆ.
1956 ರಂದು ಕರ್ನಾಟಕ ಏಕೀಕರಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಮದ್ರಾಸ್ ಕರ್ನಾಟಕ ನಾಲ್ಲು ಭಾಗಗಳಾಗಿ ಹಂಚಿ ಹೋಗಿದ್ದವು. ಆದರೆ ನಾಲ್ಕು ಭಾಗವಾಗಿದ್ದ ಕನ್ನಡ ನಾಡು ರಾಜಕೀಯವಾಗಿ ಒಂದಾಯಿತು. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ದಿನವನ್ನು ಕನ್ನಡಿಗರು ನಾಡ ಹಬ್ಬವನ್ನಾಗಿ ಆಚರಿಸುವುದು ವಿಶೇಷ. ಈ ಹಿಂದೆ ಇದ್ದ ರಾಜ್ಯದ ಹೆಸರೇ ಈ ನಾಡಿಗೆ ಇರಲೆಂದು ಮೈಸೂರು ಹೆಸರನ್ನೇ ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ಒಮ್ಮತದ ಮೇರೆಗೆ 1973ರಂದು ಕರ್ನಾಟಕ ಎಂದು ಮರು ನಾಮಕರಣಗೊಂಡಿತು. ಈ ಸಂದರ್ಭ ದೇವರಾಜ ಅರಸು ರಾಜ್ಯದ ಮುಖ್ಯ ಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಕೀರ್ತಿಯೂ ಅನಕೃ, ಶಿವರಾಮ ಕಾರಂತ, ಕುವೆಂಪು, ಮಾಸ್ತಿ, ವೆಂಕಟೇಶ್ ಅಯ್ಯಂಗಾರ್, ಎ.ಎನ್. ಕೃಷ್ಣರಾವ್ ಮತ್ತು ಬಿ.ಎಂ ಶ್ರೀಕಂಠಯ್ಯ ಅವರಿಗೆ ಸಲ್ಲುತ್ತದೆ.
ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಬಣ್ಣದ ಬಾವುಟಗಳು ರಾಜ್ಯದ ಎಲ್ಲೆಡೆ ಕನ್ನಡ ನಾಡಿನ ಕಂಪನ್ನು ಸೂಸುತ್ತದೆ. ಆದರೆ ವಿಪರ್ಯಾಸವೆಂಬಂತೆ ನವೆಂಬರ್ ತಿಂಗಳು ಮುಗಿದಂತೆ, ಕನ್ನಡ ನಾಡು ನುಡಿ ಕುರಿತು ಯಾರು ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಅಚರಣೆ ಎಂಬುದು ಕೇವಲ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದಿರಲಿ. ಇಂದು ನಮ್ಮ ಜೀವನ ಶೈಲಿ ಬದಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರವೂ ಮನುಷ್ಯನನ್ನು ಕೈ ಗೊಂಬೆಯಂತೆ ಆಡಿಸುತ್ತಿದೆ. ಕನ್ನಡಾಂಬೆಯ ಕಂಪನ್ನು ಎಲ್ಲೆಡೆ ಸೂಸುವಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಅನಿವಾರ್ಯ ಇದೆ. ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಪ್ರತಿಯೊಬ್ಬ ಕನ್ನಡಿಗರು ತಮ್ಮ ಕನ್ನಡ ನಾಡಿನ ಸಿರಿಸಂಪತ್ತು, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಹೋದರೆ ಮಾತ್ರ ಕನ್ನಡ ರಾಜ್ಯೋತ್ಸವಕ್ಕೆ ನಿಜವಾದ ಅರ್ಥ ಲಭಿಸಲು ಸಾಧ್ಯ.
ಸಾಯಿನಂದಾ ಚಿಟ್ಪಾಡಿ
ದ್ವಿತೀಯ ಎಂ.ಸಿ.ಜೆ, ವಿವೇಕಾನಂದ ಕಾಲೇಜು, ನೆಹರು ನಗರ ಪುತ್ತೂರು