Advertisement
ಉಡುಪಿ: “ಮೈಸೂರು, ಧಾರವಾಡ ಹೊರತುಪಡಿಸಿದರೆ ಅತ್ಯಂತ ಹೆಚ್ಚು ಸಾಂಸ್ಕೃತಿಕ ಚಟುವಟಿಕೆಗಳು ಉಡುಪಿಯಲ್ಲಿ ನಡೆಯುತ್ತವೆ. ಆದರೆ ನಮ್ಮ ಜಿಲ್ಲೆಗೊಂದು ರಂಗಮಂದಿರವೇ ಇಲ್ಲ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ’.
Related Articles
ಉಡುಪಿ ಅಜ್ಜರಕಾಡು ಪುರಭವನ ದುಬಾರಿ. ಅಲ್ಲಿ 30-35 ಸಾವಿರ ರೂ. ಬಾಡಿಗೆ ನೀಡಬೇಕು. ಎಲ್ಲ ರೀತಿಯ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜಾಂಗ ಹೊಂದದು. ನಗರದ ಕೇಂದ್ರ ಭಾಗದವರಿಗೆ ಎಂಜಿಎಂ ನೂತನ ರವೀಂದ್ರ ಮಂಟಪ ಲಭ್ಯವಿದೆ. ಉಳಿದಂತೆ ಅಜ್ಜರ ಕಾಡು ಬಯಲು ರಂಗಮಂದಿರ ಮಾತ್ರ. ಬೀಡಿನಗುಡ್ಡೆ ಬಯಲು ರಂಗ ಮಂದಿರವೂ ನಾಟಕ ಅಥವಾ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವಿಲ್ಲ ಎಂಬುದು ರಂಗವಲಯದ ಅಭಿಪ್ರಾಯ.
Advertisement
ಜಾಗವೇ ಸಿಕ್ಕಿಲ್ಲರಂಗಮಂದಿರ ನಿರ್ಮಾಣಕ್ಕಾಗಿ ಜಾಗದ ಹುಡುಕಾಟ ಇನ್ನೂ ಮುಗಿ ದಿಲ್ಲ. 10 ವರ್ಷಗಳಿಂದ ಪ್ರಯತ್ನ ಪ್ರಗತಿಯಲ್ಲಿದೆ. ಡಾ| ವಿ.ಎಸ್.ಆಚಾರ್ಯ ಅವರು ಸಚಿವರಾಗಿದ್ದಾಗ ಜಾಗ ಗುರುತಿಸಲಾಯಿತು. ಬಳಿಕ ಮಣಿಪಾಲದಲ್ಲೂ ಒಂದೆಡೆ ಗುರುತಿಸಲಾಯಿತು. ಎರಡೂ ಆಗಲಿಲ್ಲ. ಈಗ ಆದಿ ಉಡುಪಿಯಲ್ಲಿ ಜಾಗ ಗುರುತಿಸಿದ್ದರೂ ಅಂತಿಮಗೊಂಡಿಲ್ಲ. ಮನೆಯಲ್ಲೇ ರಿಹರ್ಸಲ್ !
“ರಂಗಮಂದಿರ ಹೇಗೂ ಇಲ್ಲ. ಬೇರೆ ಉತ್ತಮ ವೇದಿಕೆಗಳೂ ಇಲ್ಲ. ರಿಹರ್ಸಲ್ ಮಾಡುವುದಕ್ಕೂ ಸ್ಥಳವಿಲ್ಲ. ಕಳೆದ ಬಾರಿ ನಾಟಕ ತಂಡವೊಂದು ನನ್ನ ಮನೆಯ ಮಹಡಿ ಜಾಗದಲ್ಲಿ ರಿಹರ್ಸಲ್ ಮಾಡಿತು. ರಂಗಮಂದಿರವಿದ್ದರೆ 2-3 ಸಾವಿರ ರೂ. ಬಾಡಿಗೆ ಕೊಟ್ಟು ನಾಟಕ ಮಾಡಲು ಸಾಧ್ಯ’ ಎನ್ನುತ್ತಾರೆ ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ. ಮುರಲೀಧರ ಉಪಾಧ್ಯಾಯ. ಈ ಸಂಸ್ಥೆ 1981ರಲ್ಲಿ ಆರಂಭಗೊಂಡು ಪ್ರತಿವರ್ಷ ನಾಟಕೋತ್ಸವ ಹಾಗೂ ಇತರೆ ರಂಗ ಚಟುವಟಿಕೆ ಹಮ್ಮಿಕೊಳ್ಳುತ್ತದೆ. ಆರ್ಥಿಕ ಹೊರೆ
ಎರಡು ವರ್ಷಗಳ ಹಿಂದೆ ಸುವರ್ಣ ಮಹೋತ್ಸವ ಆಚರಿಸಿಕೊಂಡ ರಂಗಭೂಮಿ ಸಂಸ್ಥೆಯೂ ಜಿಲ್ಲಾ ರಂಗಮಂದಿರಕ್ಕಾಗಿ ಪ್ರಯತ್ನಿಸುತ್ತಲೇ ಇದೆ. 38 ವರ್ಷಗಳಿಂದ ಪ್ರತಿ ವರ್ಷವೂ ನಾಟಕ ಸ್ಪರ್ಧೆ, ನಾಟಕ ಪ್ರದರ್ಶನ ಇತ್ಯಾದಿ ಚಟುವಟಿಕೆಗಳನ್ನು ನಡೆಸುತ್ತಿದೆ.“ನೀನಾಸಂ ನಾಟಕೋತ್ಸವ, ಕಲಾತ್ಮಕ ಚಿತ್ರಪ್ರದರ್ಶನವನ್ನೂ ಏರ್ಪಡಿಸುತ್ತಿದ್ದೇವೆ. ಆದರೆ ಉತ್ತಮ ವೇದಿಕೆ ಇರದೇ ಆರ್ಥಿಕ ಹೊರೆ ಹೆಚ್ಚುತ್ತಿದೆ. ರಂಗಮಂದಿರವಾದರೆ ಕಡಿಮೆ ಬಾಡಿಗೆಗೆ ವೇದಿಕೆ ಸಿಗುತ್ತದೆ. ಕಲಾವಿದರು ಉಳಿದುಕೊಳ್ಳಲೂ ಅವಕಾಶವಿರಲಿದೆ. ಜಿಲ್ಲೆಯ ಹೆಜಮಾಡಿಯಿಂದ ಬೈಂದೂರುವರೆಗೆ 25ಕ್ಕೂ ಅಧಿಕ ಸಕ್ರಿಯ ನಾಟಕ ಸಂಸ್ಥೆಗಳಿದ್ದು, ನಾಟಕೋತ್ಸವ, ಸ್ಪರ್ಧೆ ಆಯೋಜಿಸುವವರಿಗೆ ಅನುಕೂಲ’ ಎನ್ನುತ್ತಾರೆ ಸಂಸ್ಥೆಯ ಜತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ. ಸುಮಾರು 44 ವರ್ಷ ಆನಂದ ಗಾಣಿಗರು ಮುನ್ನಡೆಸಿದ್ದ ಸಂಸ್ಥೆಗೆ ಈಗ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷರಾಗಿ, ಡಾ| ಎಚ್.ಶಾಂತಾರಾಮ್ ಗೌರವಾಧ್ಯಕ್ಷರಾಗಿದ್ದಾರೆ. ತುಳು ನಾಟಕಗಳಿಗೂ ಬೇಡಿಕೆ
ಉಡುಪಿ ತುಳುಕೂಟ 33 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, 17 ವರ್ಷಗಳಿಂದ ಕೆಮೂ¤ರು ದೊಡ್ಡಣಗುಡ್ಡೆ ನಾಟಕ ಸ್ಪರ್ಧೆ ಹಮ್ಮಿಕೊಳ್ಳುತ್ತಿದೆ. 18ಕ್ಕೂ ಅಧಿಕ ತಂಡಗಳು ಪ್ರವೇಶಿಸಲು ಇಚ್ಛಿಸಿದ್ದರೂ ನಾವು 10 ತಂಡಗಳನ್ನು ಮಾತ್ರ ಆಯ್ಕೆ ಮಾಡುತ್ತೇವೆ. ಇಷ್ಟಕ್ಕೇ ಲಕ್ಷಾಂತರ ರೂ. ಖರ್ಚಾಗುತ್ತದೆ. ಸೂಕ್ತ ಮತ್ತು ಕಡಿಮೆ ಬಾಡಿಗೆಗೆ ರಂಗವೇದಿಕೆ ಸಿಕ್ಕರೆ ಪ್ರಯೋಜನವಾದೀತು. ಭುಜಂಗ ಪಾರ್ಕ್‌ನ ಬಯಲುರಂಗ ಮಂದಿರವನ್ನಾದರೂ ಸುವ್ಯವಸ್ಥಿತ ಗೊಳಿಸಿದರೆ ಉತ್ತಮ. ತುಳು ನಾಟಕ ಗಳಿಗೂ ಉತ್ತಮ ಬೇಡಿಕೆ ಇದೆ. ತುಳು ರಂಗಭೂಮಿಯೂ ನಗರದಲ್ಲಿ ಕ್ರಿಯಾಶೀಲ ವಾಗಿದೆ ಎನ್ನುತ್ತಾರೆ ಇದರ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ. ಯುನೆಸ್ಕೋ ಸಹಯೋಗದ 1948 ರಲ್ಲಿ ಆರಂಭವಾದ ಇಂಟರ್ ನ್ಯಾಶನಲ್ ಥಿಯೇಟರ್ ಇನ್‌ಸ್ಟಿಟ್ಯೂಟ್ (ಐಟಿಐ) 1961ರಲ್ಲಿ ಮಾರ್ಚ್ 27ರಂದು ವಿಶ್ವರಂಗಭೂಮಿ ದಿನಾಚರಣೆಯನ್ನು ಆಚರಿಸುವುದಾಗಿ ಘೋಷಿಸಿತು. ಮೊದಲ ಆಚರಣೆ ನಡೆದದ್ದು 1962 ರಲ್ಲಿ. ಪ್ರತಿ ವರ್ಷವೂ ಒಬ್ಬ ವಿಶ್ವದ ರಂಗ ದಿಗ್ಗಜರಿಂದ ಆ ವರ್ಷದ ಸಂದೇಶವನ್ನು ನೀಡಲಾಗುತ್ತದೆ. ಈ ವರ್ಷ ಸಂಸ್ಥೆಯ 70 ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಫ್ರಿಕಾ, ಅಮೆರಿಕಾ, ಅರಬ್ ದೇಶಗಳು, ಏಷಿಯಾ ಫೆಸಿಫಿಕ್ ಹಾಗೂ ಯುರೋಪ್‌ನ ಐವರು ರಂಗದಿಗ್ಗಜರಿಗೆ ಸಂದೇಶ ನೀಡುವ ಅವಕಾಶ ದೊರೆತಿದೆ. ಆ ಪೈಕಿ ಏಷಿಯಾ ಫೆಸಿಫಿಕ್ ನ ಪರವಾಗಿ ನಮ್ಮ ದೇಶದ ರಾಮ್ ಗೋಪಾಲ್ ಬಜಾಜ್ ಅವರು ಸಂದೇಶ ನೀಡಿದ್ದಾರೆ. ಇವರು ಹಿರಿಯ ರಂಗಕರ್ಮಿ, ನಟ, ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕರು.ಇದರ ಮಧ್ಯೆ ನಮ್ಮ ದೇಶದಲ್ಲಿನ್ನೂ ಐಟಿಐ ಕೇಂದ್ರ ಅಸ್ತಿತ್ವಕ್ಕೆ ಬಂದಿಲ್ಲ. ಮನವಿ ಅಭಿಯಾನ
ಇಲ್ಲಿಯ ರಂಗ ಚಟುವಟಿಕೆಗಳಿಗೆ ದೊಡ್ಡ ಇತಿಹಾಸವಿದೆ. ಆದರೆ ಇಲ್ಲಿನ ರಂಗಭೂಮಿ ಹೊಸ ನಾಟಕಗಳಿಗೆ ತೆರೆದುಕೊಂಡದ್ದು 1970ರ ದಶಕದಲ್ಲಿ ಬಿ.ವಿ.ಕಾರಂತ ಅವರು ಎಂಜಿಎಂನಲ್ಲಿ ನಡೆಸಿದ ಕಾರ್ಯಾಗಾರದ ಬಳಿಕ. ಉಡುಪಿ ಅನೇಕ ರಂಗಭೂಮಿ ಸಾಧಕರು, ಪ್ರತಿಭೆಗಳ ಊರು. ಇಲ್ಲಿ ನೀನಾಸಂ,ರಂಗಾಯಣ ಹಾಗೂ ಎನ್‌ಎಸ್‌ಡಿ (ರಾಷ್ಟ್ರೀಯ ನಾಟಕ ಶಾಲೆ)ಯಲ್ಲಿ ಕಲಿತ ಪ್ರತಿಭಾವಂತರ ವರ್ಗವೇ ಇದೆ. ಈಗ ರಂಗ ಮಂದಿರ ಕ್ಕಾಗಿ ರಥಬೀದಿ ಗೆಳೆಯರು ಸಂಸ್ಥೆ ಮನವಿ ಅಭಿಯಾನ ಆರಂಭಿಸಲಿದೆ. 1.20 ಎಕರೆ ಗುರುತಿಸಿದ್ದೇವೆ
ಜಿಲ್ಲಾ ರಂಗಮಂದಿರ ನಿರ್ಮಾಣಕ್ಕೆ ಬೇಡಿಕೆ ಬಹುಕಾಲದಿಂದ ಇದೆ. ಇಲಾಖೆ ಕೂಡ ಪ್ರಯತ್ನಿಸುತ್ತಿದೆ. ಪ್ರಸ್ತುತ ಆದಿ ಉಡುಪಿಯಲ್ಲಿ 1.20 ಎಕರೆ ಜಾಗವನ್ನು ಗುರುತಿಸಲಾಗಿದೆ. ಬಹುತೇಕ ಅದು ಅಂತಿಮಗೊಳ್ಳುವ ನಿರೀಕ್ಷೆ ಇದೆ. ರಂಗಮಂದಿರ ನಿರ್ಮಾಣಕ್ಕಾಗಿ 50 ಲ.ರೂ. ಈಗಾಗಲೇ ಬಿಡುಗಡೆಯಾಗಿದೆ. ಇದಕ್ಕೆ 6ರಿಂದ 7 ಕೋ.ರೂ. ವೆಚ್ಚವಾಗಬಹುದು. ಅನುದಾನಕ್ಕೆ ಕೊರತೆಯಾಗದು.
– ಡಾ| ಬಿ.ದೇವದಾಸ ಪೈ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ರಂಗ ಚಟುವಟಿಕೆ ಗ್ರಾಮೀಣ ಮತ್ತು ನಗರ ಎಲ್ಲೆಡೆ ಹರಡಬೇಕು. ರಂಗಭೂಮಿ ಮಾನವೀಯತೆಯ ಕಾಪಾಡಲು ಅವಶ್ಯ.
– ರಾಮ್ ಗೋಪಾಲ್ ಬಜಾಜ್
(ಈ ಬಾರಿಯ ಸಂದೇಶದ ಒಟ್ಟೂ ಸಾರ) – ಸಂತೋಷ್ ಬೊಳ್ಳೆಟ್ಟು