ಮೈಸೂರು: ಬಿಜೆಪಿ ಶಾಸಕರು ಸಿಂಹ ರೂಪದವರು ಎಂದಿರುವ ಶಾಸಕ ಕೆ.ಎಸ್.ಈಶ್ವರಪ್ಪ, ನಮ್ಮ ಒಬ್ಬ ಶಾಸಕರನ್ನು ಮುಟ್ಟಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಮುಂದಿನ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಭಾಗದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅವರು, ಗುರುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಶಾಸಕರು ಮಾರಾಟದ ವಸ್ತುಗಳಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಬಗ್ಗೆ ಅವರ ಅಧ್ಯಕ್ಷರಿಗೆ ನಂಬಿಕೆ ಇಲ್ಲದಂತಾಗಿದೆ ಎಂದು ಲೇವಡಿ ಮಾಡಿದರು. ಆದರೆ, ಬಿಜೆಪಿ ಶಾಸಕರು ಸಿಂಹ ರೂಪದವರು. ನಮ್ಮ ಒಬ್ಬ ಶಾಸಕರನ್ನು ಮುಟ್ಟಿ ನೋಡೋಣ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ನಾವು ಯಾವುದೇ ಕಾಂಗ್ರೆಸ್ ಶಾಸಕರನ್ನು ಸರ್ಕಾರ ಬೀಳಿಸೋಣ ಬನ್ನಿ ಎಂದು ಕರೆದಿಲ್ಲ. ಬಿಜೆಪಿ ನಾಯಕರು ಕರೆದ ಕೂಡಲೇ ನಮ್ಮೊಂದಿಗೆ ಬರುವಷ್ಟು ಕಾಂಗ್ರೆಸ್ ಶಾಸಕರು ದುರ್ಬಲರೇ? ಎಂದು ಪ್ರಶ್ನಿಸಿದರು. ಇದೇ ವೇಳೆ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಪ್ರಸ್ತುತ ರಾಜ್ಯದಲ್ಲಿರುವುದು ವರ್ಗಾವಣೆ ಸರ್ಕಾರವಾಗಿದೆ. ಸರ್ಕಾರದ ಮಂತ್ರಿಗಳು ವರ್ಗಾವಣೆಯ ಕಮೀಷನ್ ಏಜೆಂಟ್‌ಗಳಾಗಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ನೆಪ ಮಾತ್ರಕ್ಕೆ ಮುಖ್ಯಮಂತ್ರಿ. ದೇವೇಗೌಡರೇ ಸುಪ್ರೀಂ ಸಿಎಂ, ಎಚ್.ಡಿ.ರೇವಣ್ಣ ಸೂಪರ್ ಸಿಎಂ. ಕಾಂಗ್ರೆಸ್ ಪಕ್ಷದವರು ಬಾಯಿ ಬಿಟ್ಟುಕೊಂಡು ನೋಡುತ್ತಾ ಕುಳಿತಿರುವ ಸ್ಥಿತಿ ನಿರ್ಮಾಣವಾಗಿದೆ.
– ಕೆ.ಎಸ್.ಈಶ್ವರಪ್ಪ, ಶಾಸಕ