Advertisement

ಜಾತಿ ಮತ ಬಿಟ್ಟು ಮನುಷ್ಯರಾಗೋಣ

09:13 PM Aug 13, 2019 | Lakshmi GovindaRaj |

ಮೈಸೂರು: ಜಾತಿ-ಮತ ಬದಿಗೊತ್ತಿ ಜೀವನ ನಡೆಸಿದಾಗ ಮಾತ್ರವೇ ನಾವು ಮನುಷ್ಯರಾಗಲು ಸಾಧ್ಯ ಎಂದು ಶಾಸಕ ಎಲ್‌.ನಾಗೇಂದ್ರ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಮಾತನಾಡಿದರು.

Advertisement

ಕಾಯಕ: ಅಂದಿನ ಕಾಲದಲ್ಲೇ ಮೂಢನಂಬಿಕೆ, ಕಂದಾಚಾರಗಳನ್ನು ತೊಡೆಯಲು ಶ್ರಮಿಸಿರುವ ವಚನಕಾರರ ವಿಚಾರಧಾರೆಗಳನ್ನು ಅರಿತು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಿದೆ. 12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣ ತಮ್ಮ ಕಾಯಕದ ಜೊತೆಗೆ 200ಕ್ಕೂ ಹೆಚ್ಚು ವಚನ ರಚಿಸಿ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಿಂದಿನ ಕಾಲದಲ್ಲಿ ಕಸುಬನ್ನು ಆಧರಿಸಿ ಜಾತಿಗಳು ಹುಟ್ಟಿಕೊಂಡಿವೆ.

ಹೀಗಾಗಿ ತಮ್ಮ ಕಾಯಕದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆಯಿಂದಿರಬೇಕು. ಸಮುದಾಯದವರು ಕೀಳರಿಮೆ ಬಿಟ್ಟು, ತಮ್ಮದೂ ಶ್ರೇಷ್ಠ ಸಮುದಾಯವೆಂದು ತಿಳಿದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು. ವಚನಕಾರರಲ್ಲಿ ಬಸವಣ್ಣನವರ ಆತ್ಮೀಯರಾಗಿ ಗುರುತಿಸಿಕೊಂಡ ಹಡಪದ ಅಪ್ಪಣ್ಣ ನಿಷ್ಠಾವಂತ, ಪ್ರಾಮಾಣಿಕ ಕರ್ತವ್ಯಕ್ಕೆ ಹೆಸರಾಗಿದ್ದು,

ಅವರ ವಚನಗಳ ಸಾರವನ್ನು ಅರಿತು ಅವರಂತೆ ಬದುಕಬೇಕಿದೆ ಎಂದು ಹೇಳಿದರು. ಬೇರೆಯವರು ಹೇಗೆ ನೋಡುತ್ತಾರೆ ಎಂದು ತಲೆಕೆಡಿಸಿಕೊಳ್ಳದೇ, ಕೀಳರಿಮೆ ಬಿಟ್ಟು ಉತ್ತಮವಾಗಿ ಬದುಕಬೇಕು. ಜಾತಿ ಬೇಧಗಳಾಚೆಗೆ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮನುಷ್ಯರಾಗಿ ಬಾಳಬೇಕಿದೆ ಎಂದು ಹೇಳಿದರು.

ಸಂಘಟಿತರಾಗಿ: ಶಾಸಕ ಅಶ್ವಿ‌ನ್‌ಕುಮಾರ್‌ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾದುದು ಇಂದಿನ ಅಗತ್ಯವಾಗಿದೆ. ಸಮುದಾಯದ ಏಳಿಗೆಯ ದೃಷ್ಠಿಯಿಂದ ಹಾಗೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂಘಟಿತರಾಗುವುದು ಮುಖ್ಯ ಎಂದರು.

Advertisement

ವಿಚಾರಧಾರೆ: ಮೇಯರ್‌ ಪುಷ್ಪಲತಾ ಜಗನ್ನಾಥ್‌ ಮಾತನಾಡಿ, ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ವಿಚಾರಧಾರೆಗಳನ್ನು ಅರಿತುಕೊಂಡು ಅದರಂತೆ ಬದುಕಬೇಕು. ಹೀಗಾದಾಗ ಮಾತ್ರ ಮಹಾ ಪುರುಷರ ಜಯಂತಿಗಳ ಆಚರಣೆಗೆ ಅರ್ಥಬರುವುದು ಎಂದು ಹೇಳಿದರು.

ಹುಣಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಪಿ.ನಾಗರಾಜ್‌ ಮುಖ್ಯ ಭಾಷಣ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ಪೂರ್ಣಿಮಾ, ರಾವಂದೂರು ಮುರಘಾ ಮಠ ಬಸವ ಕೇಂದ್ರದ ಮೋಕ್ಷಪತಿ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಹಡಪದ ಅಪ್ಪಣ್ಣ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ನಾಗೇಶ್‌ ಇತರರಿದ್ದರು.

ದೊಡ್ಡ ಉದ್ಯಮವಾದ ಸವಿತಾ ಸಮಾಜದ ವೃತ್ತಿ: ಸವಿತಾ ಸಮಾಜದ ವೃತ್ತಿಯು ಇಂದು ದೊಡ್ಡ ಉದ್ಯಮವಾಗಿದ್ದು, ಅನೇಕರು ಪಾರ್ಲರ್‌ಗಳ ಮೂಲಕ ಆರ್ಥಿಕವಾಗಿಯೂ ಸಬಲರಾಗಿದ್ದಾರೆ. ಹೀಗಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಉನ್ನತ ಸ್ಥಾನಗಳಲ್ಲಿ ಗುರುತಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕಿದೆ. ಸಮುದಾಯದವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪ್ರಬಲರಾಗಲು ಸಂಘಟನೆ ಮುಖ್ಯ ಎಂದು ಶಾಸಕ ಎಲ್‌.ನಾಗೇಂದ್ರ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next