ಧಾರವಾಡ: ಪರಿಶ್ರಮ ಹಾಗೂ ಶ್ರದ್ಧೆಯಿಂದ ಜನರು ನಮ್ಮನ್ನು ಗುರುತಿಸುವಂತಾಗಬೇಕೇ ಹೊರತು ಜಾತಿಯಿಂದ ಗುರುತಿಸುವಂತೆ ಆಗಬಾರದು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು. ನಗರದ ಆಲೂರು ವೆಂಕಟರಾವ್ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಮುದಾಯದಲ್ಲಿನ ಭಿನ್ನಾಭಿಪ್ರಾಯ ಹೆಚ್ಚಿಸಲು ಅನೇಕರು ಪ್ರಯತ್ನಿಸುತ್ತಾರೆ. ಅದನ್ನು ತಡೆದು ಮುಂದೆ ಬರುವ ಪ್ರಯತ್ನ ಮಾಡಬೇಕು. ಉಳಿದ ಸಮಾಜವನ್ನೂ ಗೌರವಿಸಬೇಕು. ಲಿಂಗಾಯತರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಆದರೆ ಇಂದು ಸಂಘರ್ಷಮಯ ವಾತಾವರಣದಲ್ಲಿ ಸಿಲುಕುವಂತಾಗಿದೆ. ಇಂತಹ ಸಂದರ್ಭವನ್ನು ಮೀರಿ ಮೇಲೇಳುವ ಶಕ್ತಿ ಲಿಂಗಾಯತ ಸಮುದಾಯಕ್ಕೆ ಇದೆ ಎಂದರು.
ಮೊಬೈಲ್ಗಿಂತ ಲಿಂಗದೀಕ್ಷೆ ಮುಖ್ಯ: ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ಮೊಬೈಲ್ ಗೆ ಮಾರು ಹೋಗಿರುವ ಮಕ್ಕಳಿಗೆ ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರದ ಕೊರತೆ ಇದೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಲಿಂಗದೀಕ್ಷೆ ಹಾಗೂ ಲಿಂಗತತ್ವ, ಬಸವತತ್ವದ ಅರಿವು ನೀಡಬೇಕು.
ಸ್ಮಾರ್ಟ್ಪೋನ್ಗಳ ಮೇಲೆ ಬೆರಳು ಆಡಿಸುವ ಬದಲು ಲಿಂಗಕ್ಕೆ ವಿಭೂತಿ ಹಚ್ಚುವ ಕೆಲಸ ಮಕ್ಕಳಿಂದ ಆಗಬೇಕಿದೆ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಸಂಘದ ರಾಜ್ಯಾಧ್ಯಕ್ಷ ಡಾ| ಶಿವಬಸಪ್ಪ ಹೆಸರೂರು ಮಾತನಾಡಿ, ಮಕ್ಕಳು ಕೇವಲ ಅಂಕಗಳನ್ನು ಪಡೆಯುವತ್ತ ಗಮನ ಹರಿಸದೆ ಮುಕ್ತ ಮನಸ್ಸಿನಿಂದ ಒಳ್ಳೆಯ ಕಾರ್ಯಗಳನ್ನು ಮಾಡುವಲ್ಲಿ ಸಹ ಗಮನಹರಿಸಬೇಕು ಎಂದರು.
ಗದಗ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಸಿದ್ದು ಯಾಪಲಪರವಿ ಮಾತನಾಡಿ, ಇಂಗ್ಲೆಂಡ್ನಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪಿಸುವ ಮೂಲಕ ಅವರ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರುವಂತಹ ಕೆಲಸವಾಗಿದ್ದು ಹೆಮ್ಮೆಯ ಸಂಗತಿ. ಸಮಾಜವನ್ನು ಜಾಗರೂಕತೆಯಿಂದ ಮುನ್ನಡೆಸುವ ಜವಾಬ್ದಾರಿ ಸಂಘದ ಮೇಲಿದೆ.
ಹೀಗಾಗಿ ಸಂಘದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಉತ್ತಮ ಕಾರ್ಯಗಳು ನಡೆಯಲಿ ಎಂದು ಹಾರೈಸಿದರು. ಹಾಸನದ ಅರಕಲಗೂಡಿನ ಬಸವಪಟ್ಟಣದ ಶ್ರೀ ತೋಂಟದಾರ್ಯ ಸಂಸ್ಥಾನಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಸಂಘದ ತಾಲೂಕಾಧ್ಯಕ್ಷ ಶೇಖರ ಕವಳಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಪಡೆದ ರಾಚಪ್ಪ ತಿರ್ಲಾಪುರ, ಪ್ರಿಯದರ್ಶಿನಿ ಸಾಣಿಕೊಪ್ಪ, ಸ್ನೇಹಾ ಕೋರಿ ಹಾಗೂ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಪಿಎಂಸಿ ಮಾಜಿ ಅಧ್ಯಕ್ಷ ಶಿವಶಂಕರ ಹಂಪಣ್ಣವರ, ಡಾ| ಎಸ್.ಆರ್. ಜಂಬಗಿ, ಡಾ| ಅಮೃತ ಮಹಾಬಲಶೆಟ್ಟಿ, ವಿ.ಸಿ. ಸವಡಿ, ಜಿಲ್ಲೆ-ತಾಲೂಕು ಘಟಕದ ಪದಾಧಿ ಕಾರಿಗಳು ಇದ್ದರು. ರಾಜಶೇಖರ ಉಪ್ಪಿನ ಸ್ವಾಗತಿಸಿದರು.