Advertisement

ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಅವಕಾಶ: ಜನರ ರಾಷ್ಟ್ರಪತಿಯಾಗಿ

01:48 PM Jul 21, 2017 | Team Udayavani |

ರಾಮನಾಥ್‌ ಕೋವಿಂದ್‌ ಅವರು ದೇಶದ ಸಮಸ್ತ ಪ್ರಜೆಗಳ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿ ಎನ್ನುವುದು ಜನರ ಅಪೇಕ್ಷೆ.

Advertisement

ರಾಷ್ಟ್ರಪತಿ ಎಂದರೆ ಒಂದು ಔಪಚಾರಿಕ-ಆಲಂಕಾರಿಕ ಹುದ್ದೆ ಎಂಬ ಭಾವನೆಯಿದೆ. ಬಹುತೇಕ ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿದವರನ್ನು ಸರಕಾರ ರಾಷ್ಟ್ರಪತಿ ಮಾಡುತ್ತದೆ. ಸರಕಾರ ಕೈಗೊಂಡ ನಿರ್ಧಾರಗಳಿಗೆ ಅಂಗೀಕಾರದ ಮುದ್ರೆಯೊತ್ತುವುದಷ್ಟೇ ರಾಷ್ಟ್ರಪತಿ ಮಾಡುವ ಕೆಲಸ. ಇನ್ನು ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವುದರಿಂದ ಔಪಚಾರಿಕತೆಯ ವಿಧಿವಿಧಾನಗಳನ್ನು ಬಿಟ್ಟರೆ ರಾಷ್ಟ್ರಪತಿಗೆ ಹೆಚ್ಚೇನೂ ಕೆಲಸವಿರುವುದಿಲ್ಲ. ಹೀಗಾಗಿ ರಾಷ್ಟ್ರಪತಿಗಳಾದವರು ಜನರಿಂದ ಬಲು ದೂರ ಇರುತ್ತಾರೆ. ಕೆಲವೇ ಕೆಲವು ಅಪವಾದಗಳನ್ನು ಹೊರತುಪಡಿಸಿದರೆ ಇದು ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಹೀಗಾಗಿಯೇ ರಾಷ್ಟ್ರಪತಿಯನ್ನು ರಬ್ಬರ್‌ ಸ್ಟಾಂಪ್‌ ಎಂದು ಕರೆಯುವ ರೂಢಿ ಇದೆ. ಆರಂಭದ ಒಂದಿಬ್ಬರು ರಾಷ್ಟ್ರಪತಿಗಳು ಮತ್ತು ಅಬ್ದುಲ್‌ ಕಲಾಂ ಹಾಗೂ ಪ್ರಸ್ತುತ ನಿರ್ಗಮನದ ಹೊಸ್ತಿಲಲ್ಲಿರುವ ಪ್ರಣವ್‌ ಮುಖರ್ಜಿಯವರನ್ನು ಬಿಟ್ಟರೆ ಹೆಚ್ಚಿನೆಲ್ಲ ರಾಷ್ಟ್ರಪತಿಗಳು ರಬ್ಬರ್‌ ಸ್ಟಾಂಪ್‌ಗ್ಳಾಗಿಯೇ ಇದ್ದವರು. 14ನೇ ರಾಷ್ಟ್ರಪತಿಯಾಗಿ ರಾಮ್‌ನಾಥ್‌ ಕೋವಿಂದ್‌ ಪದಗ್ರಹಣ ಮಾಡಲು ಕ್ಷಣಗಣನೆ ಆರಂಭವಾಗಿರುವಂತೆಯೇ ರಾಷ್ಟ್ರಪತಿ ಕುರಿತಾಗಿರುವ ಈ ಅನಿಸಿಕೆಗಳು ನೆನಪಿಗೆ ಬಂದಿವೆ. 

ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಬಿಹಾರದ ರಾಜ್ಯಪಾಲರಾಗಿದ್ದ ಕೋವಿಂದ್‌ ಅವರನ್ನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗಲೇ ಅವರ ಗೆಲುವು ನಿಶ್ಚಯವಾಗಿತ್ತು. ಈ ಸಲದ ರಾಷ್ಟ್ರಪತಿ ಚುನಾವಣೆ ತುಸು ಗಮನ ಸೆಳೆದಿದ್ದರೆ ಕಣದಲ್ಲಿದ್ದ ಇಬ್ಬರು ಸ್ಪರ್ಧಿಗಳ ಜಾತಿಯ ಕಾರಣಕ್ಕೆ ಮಾತ್ರ. ಕೋವಿಂದ್‌ ಮತ್ತು ಯುಪಿಎ ಅಭ್ಯರ್ಥಿ ಮೀರಾ ಕುಮಾರ್‌ ದಲಿತರು ಎಂಬುದೇ ಈ ಸಲ ಹೆಚ್ಚು ಚರ್ಚೆಗೊಳಗಾದ ವಿಷಯ. ಬಿಜೆಪಿ ದಲಿತರ ಒಲವು ಗಳಿಸಿಕೊಂಡು ತನ್ನ ಇಮೇಜ್‌ ಬದಲಾಯಿಸುವ ಸಲುವಾಗಿ ರಾಷ್ಟ್ರ ರಾಜಕಾರಣದಲ್ಲಿ ಅಷ್ಟೇನೂ ಖ್ಯಾತರಾಗಿರದ ಕೋವಿಂದ್‌ರನ್ನು ಆರಿಸಿರುವುದು ಈಗಾಗಲೇ ಬಹಳ ಚರ್ಚೆಗೊಳಗಾಗಿರುವ ವಿಚಾರ. ಗೆಲುವು ಸಾಧ್ಯವಿಲ್ಲದಿದ್ದರೂ ಸಾಂಕೇತಿಕ ಸ್ಪರ್ಧೆ ನೀಡುವ ಸಲುವಾಗಿಯಾದರೂ ಯುಪಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಲೇ ಬೇಕಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿಯ ದಲಿತ ಅಭ್ಯರ್ಥಿಗೆ ಎದುರಾಗಿ ದಲಿತ ಅಭ್ಯರ್ಥಿಯಾಗಿ ಸಿಕ್ಕಿದವರು ಮೀರಾ ಕುಮಾರ್‌. ಹೀಗೆ ಪರಮೋಚ್ಚ ಸ್ಥಾನದ ಚುನಾವಣೆಯೊಂದು ಸಿದ್ಧಾಂತ ಮತ್ತು ತತ್ವಗಳಿಗೆ ಬದಲಾಗಿ ಜಾತಿಯ ಕಾರಣಕ್ಕೆ ಗಮನ ಸೆಳೆದದ್ದು ಪ್ರಜಾಪ್ರಭುತ್ವದ ವಿಪರ್ಯಾಸವೂ ಹೌದು. ಹಾಗೆಂದು ಕೋವಿಂದ್‌ಗೆ ಜಾತಿಯೇ ಅರ್ಹತೆ ಎಂದಲ್ಲ. ಅವರೊಬ್ಬ ಪರಿಪಕ್ವ ರಾಜಕಾರಣಿ. ರಾಜಕಾರಣಕ್ಕೆ ಪ್ರವೇಶಿಸುವ ಮೊದಲು ಸುಪ್ರೀಂ ಕೋರ್ಟಿನ ವಕೀಲರಾಗಿದ್ದವರು. ರಾಜ್ಯಸಭಾ ಸದಸ್ಯರಾಗಿ, ವಿವಿಧ ಸಮಿತಿಗಳ ಅಂಗವಾಗಿ, ವಕ್ತಾರರಾಗಿ ಅಪಾರ ರಾಜಕೀಯ ಅನುಭವವನ್ನು ಹೊಂದಿದ್ದಾರೆ. ಕಾನೂನು ಮತ್ತು ಸಂವಿಧಾನದ ಕುರಿತು ಆಳವಾದ ಜ್ಞಾನ ಹೊಂದಿದ್ದಾರೆ. ಹೀಗಾಗಿ ಅನುಭವ ಮತ್ತು ಅಧಿಕಾರವನ್ನು ಬಳಸಿಕೊಂಡು ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಅವಕಾಶ ಅವರಿಗಿದೆ.  

ಅರಿವಾಗುವುದು ಸಾಂವಿಧಾನಿಕ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ. ತ್ರಿಶಂಕು ಸಂಸತ್ತು ನಿರ್ಮಾಣವಾದರೆ ಅಥವಾ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಶಿಫಾರಸುಗಳು ಬಂದ ಸಂದರ್ಭದಲ್ಲಿ ರಾಷ್ಟ್ರಪತಿಗೆ ಅಗ್ನಿಪರೀಕ್ಷೆ ಎದುರಾಗುತ್ತದೆ. ಈ ಸಂದರ್ಭದಲ್ಲಿ ಅವರ ಕೈಗೊಳ್ಳುವ ನಿರ್ಧಾರ ಅವರ ಸಾಮರ್ಥ್ಯ, ಬದ್ಧತೆ ಮತ್ತು ವಿವೇಚನಾ ಶಕ್ತಿಯನ್ನು ತೋರಿಸುತ್ತದೆ. ಈ ವಿಚಾರದಲ್ಲಿ ನಿರ್ಗಮನ ರಾಷ್ಟ್ರಪತಿ ಮುಖರ್ಜಿಯವರ ಮೇಲ್ಪಂಕ್ತಿಯನ್ನು ಕೋವಿಂದ್‌ ಅನುಸರಿಸಬಹುದು. ಕೋವಿಂದ್‌, ಬಡವರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಬಡವರ ಜತೆಗೆ ದೇಶದ ಸಮಸ್ತ ಪ್ರಜೆಗಳ ಪ್ರಥಮ ಪ್ರಜೆಯಾಗಿ ಅವರು ಕಾರ್ಯನಿರ್ವಹಿಸಲಿ ಎನ್ನುವುದು ಜನರ ಅಪೇಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next