ಬೀದರ: ಗೊಂಡರು ಸಮಾಜದಲ್ಲಿ ಅತ್ಯಂತ ಹಿಂದುಳಿದಿದ್ದು ಅವರು ಶೈಕ್ಷಣಿಕ, ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಿಬಾಯಿ ಶೇರಿಕಾರ ಹೇಳಿದರು.
ನಗರದ ಚಿದ್ರಿ ಬೊಮ್ಮಗೊಂಡೇಶ್ವರ ವೃತ್ತದ ಬಳಿ ಇತ್ತಿಚೆಗೆ ಜಿಲ್ಲಾ ಗೊಂಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮೂಲ ಆದಿವಾಸಿ ಗೊಂಡ ಕುರಿತು ಜಿಲ್ಲಾಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು,
ಈ ಹಿಂದಿನ ಸರ್ಕಾರಗಳು ಸಮಾಜದತ್ತ ಚಿತ್ತ ಹರಿಸಿಲ್ಲ. ಆದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಇವರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಅಭಿವೃದ್ಧಿಗಾಗಿ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಜಿಲ್ಲೆಯ ಗೊಂಡ ಸಮಾಜದವರು ಇದರ ಲಾಭ ಪಡೆಯಬೇಕು ಎಂದು ಕರೆ ನೀಡಿದರು.
ವಿಜಯಕುಮಾರ ಡುಮ್ಮೆ ಉಪನ್ಯಾಸ ನೀಡಿ, ಗೊಂಡ ಸಮಾಜದ ಪೂರ್ವಾಪರದ ಮೇಲೆ ಬೆಳಕು ಚೆಲ್ಲಿದರು. ಈ ಹಿಂದೆ ಬುಡಕಟ್ಟು ಜನಾಂಗವಾಗಿತ್ತು. ಮಧ್ಯ ಭಾರತದಿಂದ ದಕ್ಷಿಣ ಭಾರತದಲ್ಲೂ ಗೊಂಡ ಸಮಾಜದವರಿದ್ದು ಅವರ ಏಳ್ಗೆಯ ಕಾರ್ಯ ನಡೆಯಬೇಕಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ಮಾತನಾಡಿ, ಗೊಂಡ ಸಮಾಜದ ಪ್ರಮುಖ ಶರಣ ಬೊಮ್ಮಗೊಂಡ ಅವರಿಂದ ಗಡಿ ಜಿಲ್ಲೆ ಬೀದರನಲ್ಲಿ ಸಮಾಜ ಬೆಳಕಿಗೆ ಬಂದಿದೆ ಎಂದು ಅಭಿಪ್ರಾಯಪಟ್ಟರು. ಅಕಾಡೆಮಿ ಮಾಜಿ ಸದಸ್ಯ ಪಂಡಿತರಾವ್ ಚಿದ್ರಿ, ನಗರಸಭೆ ಸದಸ್ಯ ರಾಜಾರಾಮ್, ಜೆಡಿಎಸ್ ಮುಖಂಡ ದೇವೇಂದ್ರ ಸೋನಿ, ದಲಿತ ಮುಖಂಡರಾದ ಪ್ರದೀಪ ಜಂಜೀರೆ, ಮಾಣಿಕರಾವ್ ಬರಿದಾಬಾದೆ ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮ್ಮಕೊಡೆ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕನ್ನಳ್ಳಿ ನಿರೂಪಿಸಿದರು. ಸಂಜುಕುಮಾರ ಅಲ್ಲೂರೆ ವಂದಿಸಿದರು.