ಸುವರ್ಣ ವಿಧಾನಸೌಧ: ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಗುರುವಾರ ಸ್ವಾರಸ್ಯಕರ ಚರ್ಚೆ ನಡೆಯಿತು. ಚಿರತೆ, ಆನೆ, ಹುಲಿ, ತೋಳ, ನರಿ, ಮಂಗ ಮೊದಲಾದವು ನಾಡಿಗೆ ಬರುತ್ತಿವೆ. ಹೀಗಾಗಿ ನಾವೊಂದು ಸರ್ವಪಕ್ಷ ನಿಯೋಗವನ್ನು ಅವುಗಳ ಬಳಿಗೆ ಕೊಂಡೊಯ್ದು ತೊಂದರೆ ಆಗುತ್ತಿರುವ ಬಗ್ಗೆ ಗಮನ ಸೆಳೆಯೋಣ ಎಂದು ಕಾಂಗ್ರೆಸ್ ರಮೇಶ್ ಕುಮಾರ್ ಹೇಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ರೀತಿಯ ಘಟನೆಗಳು ಚಂದಮಾಮನ ಕಥೆಗಳಲ್ಲಿ ಬರುತ್ತಿದ್ದವು ಎಂದಾಗ ಇಡೀ ಸದನವೇ ನಗೆಗಡಲಲ್ಲಿ ತೇಲಿತು.
ವಿಧಾನಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಎಂ. ಅಶ್ವಿನ್ ಕುಮಾರ್ ಮಾತನಾಡಿ ಟಿ.ನರಸಿಪುರ ತಾಲೂಕು ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ಬೆಳೆ ಹಾನಿ ಮಾತ್ರವಲ್ಲದೆ ಮನುಷ್ಯರಿಗೂ ಸಮಸ್ಯೆ ನೀಡುತ್ತಿದೆ.
ಚಿರತೆ ದಾಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದರು. ಆಗ ಕಾಂಗ್ರೆಸ್‌ನ ಡಾ.ಯತೀಂದ್ರ ಸಿದ್ದರಾಮಯ್ಯ, ಕಬ್ಬು ಸರಿಯಾದ ಸಮಯಕ್ಕೆ ಕಟಾವು ಮಾಡದೇ ಇರುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ನಮ್ಮ ಕ್ಷೇತ್ರದಲ್ಲೂ ಚಿರತೆ ಹಾವಳಿ ಇದೆ ಎಂದರು. ಇದು ಎಲ್ಲ ಕ್ಷೇತ್ರಗಳಲ್ಲೂ ಇರುವ ಸಮಸ್ಯೆ. ಇದಕ್ಕೊಂದು ಶಾಶ್ವತ ಪರಿಹಾರವನ್ನು ನೀವುಗಳೇ ಸೂಚಿಸಬೇಕು ಎಂದು ಸ್ಪೀಕರ್ ಕಾಗೇರಿ ಹೇಳಿದರು.
ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಅನೇಕ ಕಡೆ ಸಮಸ್ಯೆಯಾಗುತ್ತಿದೆ ಎಂದಾಗ ಕೆಲವು ಸದಸ್ಯರು ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಬೇಕು ಎಂದರು. ಆಗ, ಸ್ಪೀಕರ್ ಪ್ರತಿಕ್ರಿಯಿಸಿ, ಈ ವಿಷಯವಾಗಿ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಸಚಿವ ಆರಗ ಜ್ಞಾನೇಂದ್ರ ಅವರು, ಚರ್ಚೆಯ ಅನಂತರ ಮುಖ್ಯಮಂತ್ರಿಯವರ ಮೂಲಕವೇ ಉತ್ತರ ಕೊಡಿಸಲಾಗುವುದು ಎಂದರು.
ಸಾವಿರ ಕೊಳವೆಬಾವಿ ಕೊರೆಯಲಾಗಿದೆ
ಸುವರ್ಣವಿಧಾನಸೌಧ: ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಒಟ್ಟು 1418 ಕೊಳವೆಬಾವಿಗಳನ್ನು ಕೊರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನ ಪರಿಷತ್ತಿ ನಲ್ಲಿ ಬಿಜೆಪಿಯ ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಕೊರೆಯಲಾಗಿರುವ ಕೊಳವೆಬಾವಿಗಳ ಪೈಕಿ 1139 ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.