Advertisement

ಸಿಎಂ ಅಧಿಕಾರ ಕೊಟ್ಟು ನೋಡಲಿ

03:12 PM Mar 30, 2019 | Team Udayavani |

ದೇವನಹಳ್ಳಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಂದು ದಿನ ತಮಗೆ ಅಧಿಕಾರ ಬಿಟ್ಟುಕೊಟ್ಟರೆ ಏನೆಲ್ಲಾ ಮಾಡಬಹುದು ಎಂಬುದನ್ನು ತೋರಿಸುತ್ತೇನೆ. ಅಕ್ರಮವೆಸಗುವ ಅಧಿಕಾರಿಗಳು, ಭೂಗಳ್ಳರನ್ನು ಮಟ್ಟಹಾಕಿ, ಕೆರೆಗಳ ಅಭಿವೃದ್ಧಿಪಡಿಸಲಾಗುವುದು ಎಂದು ಹಿರಿಯ ಸ್ವಾತಂತ್ರ ಹೊರಾಟಗಾರ ಡಾ.ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.

Advertisement

ನಗರದ ಬೈಪಾಸ್‌ ರಸ್ತೆಯಲ್ಲಿ ಕರ್ನಾಟಕ ರಾಜ್ಯ ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಸ್ಥಾಪಿತ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆದ ರಾಜ್ಯ ಮಟ್ಟದ ಸ್ವಾಭಿಮಾನಿ ಬೃಹತ್‌ ರೈತರ ಸಮಾವೇಶವನ್ನು ಗಿಡಕ್ಕೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನಲ್ಲಿ 1 ಸಾವಿರ ಕೆರೆಗಳಿದ್ದು, ಕೆಲವು ಕೆರೆಗಳಲ್ಲಿ ಕಟ್ಟಡ ನಿರ್ಮಾಣವಾಗಿವೆ.

ಅದಕ್ಕಾಗಿ ಒಂದು ದಿನ ಅಧಿಕಾರ ನೀಡಿದರೆ ಏನೆಲ್ಲಾ ಮಾಡಿ ತೋರಿಸುತ್ತೇನೆ. ಆಗಿನ ಕಾಲದಲ್ಲಿ ಬಾವಿಗಳನ್ನು ತೆಗೆದು ತೋಟ ಮತ್ತು ಕೃಷಿ ಮಾಡುತ್ತಿದ್ದರು. ರೈತರು ಹಾಗೂ ಅಧಿಕಾರಿಗಳಿಗೆ ತಿಳಿವಳಿಕೆ ಇಲ್ಲದ ಕಾರಣ ಹಾಗೂ ಪ್ರತಿ ಹೊಲಗಳ ಹತ್ತಿರ ಬಾವಿ ನಿರ್ಮಾಣವಾಗಿದ್ದರಿಂದ ಅಂತರ್ಜಲ ಕುಸಿತವಾಗುತ್ತಾ ಬಂದಿತು.

ಬೋರ್‌ವೆಲ್‌ಗ‌ಳನ್ನು ಸಹ ಕೊರೆಸುವಂತಾಯಿತು. ಇಡೀ ರಾಜ್ಯದಲ್ಲಿ ಜಲಕ್ಷಾಮ ಉಂಟಾಗಿದೆ ಎಂದರು. ಸರ್ಕಾರದ ನೀತಿಗಳಿಂದ ಜನರು ಮತ್ತು ರೈತರು ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೋರಾಟಗಳನ್ನು ಮಾಡಿದರೆ ನ್ಯಾಯ ಸಿಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸಲು ಸರಿಯಾದ ಮನೆಗಳ ವ್ಯವಸ್ಥೆಯಿಲ್ಲ.

ರೈತರು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರೊ.ನಂಜುಂಡಸ್ವಾಮಿ ರೈತರಿಗಾಗಿ ಹೋರಾಟಗಳನ್ನು ಮಾಡಿದ್ದಾರೆ. ಅವರು ತೀರಿಕೊಂಡ ಮೇಲೆ ಹೋರಾಟ ಕಡಿಮೆಯಾಗಿದೆ. ಈ ಭಾಗದಲ್ಲಿ ಟಿಪ್ಪು ಸುಲ್ತಾನ್‌ ಆಳ್ವಿಕೆ ರೈತರು ಬೆಳೆದ ಹಣ್ಣುಗಳು ದೇವನಹಳ್ಳಿಯ ಚಕ್ಕೋತ ಎಂಬ ಪ್ರಸಿದ್ಧಿಯಿದೆ. ನಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂದು ಕಿವಿಮಾತು ಹೇಳಿದರು.

Advertisement

ಮೋದಿ ಬೆಂಬಲಿಸಲು ಸಾಧ್ಯವಿಲ್ಲ: ನಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಬರಬೇಕು. ಲೋಕಸಭಾ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸಬೇಕು ಎಂಬುವುದರ ಬಗ್ಗೆ ಇನ್ನೆರಡು ದಿನಗಳಲ್ಲಿ ತೀರ್ಮಾನ ಮಾಡಬೇಕು. ಮಂಡ್ಯದಲ್ಲಿ ಸುಮಲತಾ, ಬೆಂಗಳೂರು ದ‌ಕ್ಷಿಣ ಕ್ಷೇತ್ರದಲ್ಲಿ ಪ್ರಕಾಶ್‌ ರೈ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಇರುವ ಕಡೆಗಳಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ತೀರ್ಮಾನ ಮಾಡಲಾಗುವುದು.

ಯಾವುದೇ ಕಾರಣಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದರು. ಸ್ವಾತಂತ್ರ ಹೊರಾಟಗಾರ ಹಾಗೂ ಮಾಜಿ ಶಾಸಕ ಸುರಂ ರಾಮಯ್ಯ ಮಾತನಾಡಿ, ದೇಶದಲ್ಲಿ ರೈತರಿಗೆ ಸರಿಯಾದ ರಕ್ಷಣೆಯಿಲ್ಲ. ಮಾರುಕಟ್ಟೆಯ ವ್ಯವಸ್ಥೆಯಿಲ್ಲ. ಕೃಷಿ ಚಟುವಟಿಕೆಗಳು ನಶಿಸಿ ಹೋಗುತ್ತಿದೆ. ವಿಜ್ಞಾನ ಬೆಳೆದರೂ ಆಹಾರದ ಕೊರತೆ ಕಂಡು ಬರುತ್ತಿದೆ.

ಸರ್ಕಾರ ಹೆಚ್ಚಿನ ಚಿಂತನೆ ಮಾಡಬೇಕು. ಜಲ ಮೂಲಗಳನ್ನು ಹೆಚ್ಚಿಸುವ ಕೆಲಸ ಮಾಡಬೇಕು. ದಕ್ಷಿಣಕ್ಕೆ ಗಂಗಾ ನದಿ ಹರಿಸುವ ಯೋಜನೆಯನ್ನು ಮಾಡಿದರೆ ಈ ಭಾಗದಲ್ಲಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದರು. ರೈತ ನಾಯಕಿ ಸಂದರ್ಶಿನಿ ಮಾತನಾಡಿ, ನೀರಿನ ಸಮಸ್ಯೆ ರೈತರನ್ನು ಹೆಚ್ಚು ಕಾಡುತ್ತಿದೆ.

ಇರುವ ನೀರಿನಲ್ಲಿಯೇ ಬೆಳೆಗಳನ್ನು ಬೆಳೆದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರು ಸಾವಯವ ಗೊಬ್ಬರಗಳನ್ನು ಹೆಚ್ಚು ಬಳಸಿದರೆ ಮಣ್ಣಿನ ಫ‌ಲವತ್ತತೆ ಹೆಚ್ಚಾಗುತ್ತದೆ ಎಂದರು. ರೈತ ಸಂಘ ರಾಜ್ಯಾಧ್ಯಕ್ಷ ಬಿಜಿ ಹಳ್ಳಿ ಬಿ.ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ವೇಳೆ ರಾಜ್ಯ ಉಪಾಧ್ಯಕ್ಷೆ ವಿಜಯ ಲಕ್ಷಿ, ರಾಜ್ಯ ಕಾರ್ಯಾಧ್ಯಕ್ಷ ಮಾಧವರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಕಾರ್ಯದರ್ಶಿ ಮುನಿಕೃಷ್ಣಪ್ಪ (ತಮ್ಮಯ್ಯ) ರಾಜ್ಯ ಮುಖಂಡರಾದ ರಾಮು ಶಿವಣ್ಣ, ವೀರಸಿಂಗ್‌, ಜಯರಾಮಯ್ಯ, ಜಿಲ್ಲಾಧ್ಯಕ್ಷ ವಿ.ನಾಗೇಶ್‌, ಉಪಾಧ್ಯಕ್ಷ ವಿಜಯ್‌ ಕುಮಾರ್‌,

ಪ್ರಧಾನ ಕಾರ್ಯದರ್ಶಿ ಭುವನ ಹಳ್ಳಿ ವೆಂಕಟೇಶ್‌, ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಎಸ್‌.ಎಂ.ಉಮೇಶ್‌, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ನರೇಂದ್ರ ಕುಮಾರ್‌, ಉಪಾಧ್ಯಕ್ಷ ರಾಮಣ್ಣ, ತಾಲೂಕು ಅಧ್ಯಕ್ಷ ಮುನಿಶಾಮಪ್ಪ, ಪ್ರಧಾನ ಕಾರ್ಯದರ್ಶಿ ಜಯಶಂಕರ್‌, ಹಾಗೂ ರಾಜ್ಯದ ವಿವಿಧ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next