ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿನ ಹೊಸತನವನ್ನು ಪತ್ರಕರ್ತೆಯರು ಅಳವಡಿಸಿಕೊಳ್ಳಬೇಕು ಎಂದು ಪತ್ರಕರ್ತೆ ಡಾ.ವಿಜಯಾ ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಪತ್ರ ಕರ್ತೆಯರ ಸಂಘ ಹಾಗೂ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಸಹಯೋಗದೊಂದಿಗೆ ಬುಧವಾರ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಆಯೋ ಜಿಸಿದ್ದ “ಮಾಧ್ಯಮದಲ್ಲಿ ಮಹಿಳೆ; ಹೊಸ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಸರಿಯಾದ ಶ್ರೇಣಿ ಹಾಗೂ ಉತ್ತಮ ಸಂಬಳ ಸಿಗುತ್ತಿಲ್ಲ. ಜತೆಗೆ ಅನಿಶ್ಚಿಯತೆ ಯಾವಾಗಲು ಕಾಡುತ್ತಿರುತ್ತದೆ ಎಂದರು. ಪತ್ರಿಕಾ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ಮಹಿಳೆಗೆ ನಾನಾ ರೀತಿಯ ತೊಂದರೆ ಎದುರಾಗುತ್ತವೆ.
ಅವನ್ನೆಲ್ಲ ಮೆಟ್ಟಿ ನಿಲ್ಲಬೇಕು. ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳು ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಸಿಗಬಹುದು ಎಂಬುದನ್ನು ಬಿಟ್ಟು ಹೊಸ ರೀತಿಯ ಪ್ರಯತ್ನಗಳಿಗೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎನ್.ಭೃಂಗೀಶ್ ಮಾತನಾಡಿ, ಮಾಧ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಕಚೇರಿ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂದು ಕಾನೂನು ಇದ್ದರೂ, ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ವ್ಯಾಪ್ತಿಯಲ್ಲಿ 53 ಇಲಾಖೆಗಳಿದ್ದು, ಇದುವರೆಗೂ ವಾರ್ತಾ ಇಲಾಖೆ ಹೊರತು ಪಡಿಸಿ ಇನ್ನುಳಿದ ಇಲಾಖೆಯಲ್ಲಿ ಲಿಂಗಾಧಾರಿತ ಬಜೆಟ್ ಮೂಡಿ ಬಂದಿಲ್ಲ. ಲಿಂಗಾಧಾರಿತ ಬಜೆಟ್ ಅನ್ನು ಮಂಡಿಸಿದಾಗ ಮಾತ್ರ ಮಹಿಳೆಯರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸ್ಥಾನಿಕ ಸಂಪಾದಕಿ ಸಾಂತ್ವನಾ ಭಟ್ಟಾಚಾರ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕ್ಯಾಪ್ಟನ್ ಪಿ.ಮಣಿವಣ್ಣನ್, ವಾರ್ತಾ ಇಲಾಖೆಯ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ, ಹಿರಿಯ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.