ಮೈಸೂರು: ಜನವಿರೋಧಿ, ಕಾರ್ಮಿಕ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿರುವ ಸರ್ಕಾರಗಳನ್ನು ಕಿತ್ತೂಗೆಯುವ ನಿಟ್ಟಿನಲ್ಲಿ ಹೋರಾಟಗಳನ್ನು ನಡೆಸಬೇಕಿದೆ ಎಂದು ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಟಿ.ನರಸಿಂಹನ್ ಸಲಹೆ ನೀಡಿದರು.
ಅಖೀಲ ಭಾರತ ಆರ್‌ಎಂಎಸ್ ಮತ್ತು ಎಂಎಂಎಸ್ ನೌಕರರ ಸಂಘದಿಂದ ಮೈಸೂರಿನಲ್ಲಿ ಆಯೋಜಿಸಿರುವ 35ನೇ ಅಖೀಲ ಭಾರತ ಸಮ್ಮೇಳನದ ಬಹಿರಂಗ ಅಧಿವೇಶನ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ದುಡಿಯುವ ವರ್ಗ ಆತಂಕಕ್ಕೆ ಸಿಲುಕಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಹೊಸ ನೀತಿಗಳಿಂದ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಿವೆ.
ಹಕ್ಕುಗಳಿಗಾಗಿ ದುಡಿವ ವರ್ಗದ ಹೋರಾಟ: ದೇಶದ ಸಂವಿಧಾನದಲ್ಲಿ ಪ್ರತಿ ಪ್ರಜೆಗೂ ಹಕ್ಕುಗಳನ್ನು ನೀಡಲಾಗಿದ್ದರೂ ಸರ್ಕಾರಗಳು ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ. ಸರ್ಕಾರದ ನೀತಿಗಳ ವಿರುದ್ಧ ಬೆರಳು ಮಾಡುವ, ದನಿ ಎತ್ತುವವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದ್ದು, ಪರಿಣಾಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷವಾದರೂ ದುಡಿಯುವ ವರ್ಗದ ಜನರು ಗುಲಾಮರಂತೆ ಬದುಕುವ ಮೂಲಕ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.
ಅಸಂಘಟಿತ ವಲಯ: ಕೇಂದ್ರ ಸರ್ಕಾರ ಸಾರ್ವಜನಿಕ ಸೇವಾ ವಲಯಗಳನ್ನು ಕಡೆಗಣಿಸುವ ಮೂಲಕ ಅಲ್ಲಿನ ನೌಕರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹೀಗಾಗಿ ದೇಶದ ಶೇ.93 ದುಡಿಯುವ ವರ್ಗಗಳು ಅಸಂಘಟಿತವಾಗಿದ್ದು, ಕನಿಷ್ಠ ವೇತನ, ಪಿಂಚಣಿ, ಸಾಮಾಜಿಕ ಭದ್ರತೆ, ಇಎಸ್‌ಐ, ಪಿಎಪ್ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇಂದಿಗೂ 3 ಸಾವಿರ ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಉದ್ಯೋಗಾವಕಾಶ ಇಲ್ಲ: ದೇಶದಲ್ಲಿ ಪ್ರತಿ ವರ್ಷ ಅಂದಾಜು 1.25 ಕೋಟಿ ವಿದ್ಯಾರ್ಥಿಗಳು ಪದವಿ ಮುಗಿಸಿ ಹೊರಬರುತ್ತಿದ್ದರೂ ಇವರಿಗೆ ಉದ್ಯೋಗ ಸಿಗುತ್ತಿಲ್ಲ. ಎಲ್ಲಾ ಕಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತಿರುವುದರಿಂದ ಯಾವ ಉದ್ಯೋಗಾಕಾಂಕ್ಷಿಗೂ ಕಾಯಂ ನೌಕರಿ ದೊರೆಯುತ್ತಿಲ್ಲ ಎಂದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಎನ್‌ಎಪ್‌ಪಿಇ ಮುಖಂಡ ಸಿ.ಸಿ.ಪಿಳ್ಳೆ„, ಕರ್ನಾಟಕ ವೃತ್ತದ ಮುಖ್ಯ ಅಂಚೆ ಅಧಿಕಾರಿ ಡಾ. ಚಾರ್ಲ್ಸ್ ಲೋಬೋ, ಎನ್‌ಎಪ್‌ಪಿಇ ಅಧ್ಯಕ್ಷ ಗಿರಿರಾಜ್‌ಸಿಂಗ್, ಪೋಸ್ಟಲ್ ಅಕೌಂಟ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಯಾದವ್, ಪಿ.ಕಮಲೇಶನ್ ಇನ್ನಿತರರು ಹಾಜರಿದ್ದರು.
ದೇಶದಲ್ಲಿಂದು ಪ್ರತಿಯೊಂದಕ್ಕೂ ಆಧಾರ್ ಕಡ್ಡಾಯ ಮಾಡಲಾಗುತ್ತಿದೆ. ಆಧಾರ್, ಪ್ಯಾನ್‌ಕಾರ್ಡ್ ಮಾಡುವುದು ದೊಡ್ಡ ದಂಧೆಯಾಗಿದೆ. ಹೀಗೇ ಸಾಗಿದರೆ ಮುಂದೆ ಯಮಧರ್ಮ ಆಧಾರ್ ಇದ್ದರೆ ಮಾತ್ರ ಯಮಲೋಕಕ್ಕೆ ಪ್ರವೇಶ ನೀಡುವ ಸ್ಥಿತಿ ನಿರ್ಮಾಣವಾಗಲಿದೆ.
-ಟಿ.ನರಸಿಂಹನ್, ಉಪಾಧ್ಯಕ್ಷ(ಎಐಟಿಯುಸಿ).