ಬೆಂಗಳೂರು: ಬಿಜೆಪಿಯವರು ರಾಜ್ಯದಲ್ಲಿ ಮತ್ತೂಂದು ಹಂತದ ಆಪರೇಷನ್ ಕಮಲ ಮಾಡುವುದಿದ್ದರೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದಿಲ್ಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಎಲ್ಲ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಎಷ್ಟು ಜನರನ್ನು ಆಪರೇಷನ್ ಮಾಡುತ್ತಾರೋ ಮಾಡಲಿ, ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದರು.
ಡಿ.ಜೆ.ಹಳ್ಳಿ ಗಲಭೆ ವಿಚಾರವಾಗಿ ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ನಾಯಕರನ್ನು ವಿಚಾರಣೆ ಮಾಡಲಾಗುತ್ತಿದೆ. ಗಲಭೆಯಲ್ಲಿ ಕಾಂಗ್ರೆಸ್ ಪಾತ್ರ ಇದೆ ಎಂದು ಸಾಬೀತುಪಡಿಸುವ ಪ್ರಯತ್ನ ನಡೆಯುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ ಕಾಂಗ್ರೆಸ್ ನಾಯಕರ ಯಾವುದೇ ಪಾತ್ರವಿಲ್ಲ. ಆದರೆ, ಪಕ್ಷದ ಮೇಲೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ನವೀನ್ ಬಿಜೆಪಿ ಕಾರ್ಯಕರ್ತ, ಸ್ವತಃ ಅವನೇ ಹೇಳಿಕೊಂಡಿದ್ದಾನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮುಖ್ಯ. ಆ ವಿಷಯವನ್ನು ನವೀನ್ ಹಂಚಿಕೊಂಡಿದ್ದಾರೆ. ನನಗೆ ಶುಭಾಶಯ ಕೋರಿದಾಕ್ಷಣ ಕಾಂಗ್ರೆಸ್ ಕಾರ್ಯಕರ್ತ ಅಲ್ಲ. ನವೀನ್ ಮೇಲೆ ಆರೋಪ ಬಂದಾಗ ಪೊಲೀಸರು ಯಾಕೆ ಬಂಧಿಸಿಲ್ಲ ಎನ್ನುವುದನ್ನು ತಿಳಿಸಬೇಕು. ಶಾಸಕರಿಗೆ ರಕ್ಷಣೆ ನೀಡಲು ಆಗದ ಸರಕಾರ ದಲಿತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಹುಲ್ ಜತೆ ವಿಡಿಯೋ ಸಂವಾದ
ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೀಡಿಯೊ ಸಂವಾದ ನಡೆಸಿದ ಡಿ.ಕೆ.ಶಿವಕುಮಾರ್, ತಾವು ಅಧಿಕಾರ ವಹಿಸಿಕೊಂಡ ಅನಂತರ ರಾಜ್ಯದಲ್ಲಿ ಮಾಡಿರುವ ಕಾರ್ಯಕ್ರಮಗಳು ಹೋರಾ ಟಗಳ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.