ಶಿಗ್ಗಾವಿ: ಅಧ್ಯಕ್ಷರು ಅಧಿಕಾರಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ಸಾಮಾನ್ಯ ಸಭೆಗೆ ಬರುತ್ತಾರೆ. ಹಿಂದಿನ ಸಭೆಯಲ್ಲಿ ಕಡ್ಡಾಯ ಹಾಜರಾತಿ ಕುರಿತು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತಾದರೂ, ಹಲವು ಇಲಾಖೆ ಅಧಿಕಾರಿಗಳು ಮತ್ತೇ ಗೈರಾಗಿದ್ದಾರೆ. ಅವರೇ ಇಲ್ಲದ ಮೇಲೆ ಚರ್ಚಿ ನಡೆಸುವುದು ಯಾರ ಜೊತೆಗೆ? ನಿಮಗೆ ಎಲ್ಲ ಅಧಿಕಾರ ನೀಡಿದ್ದೇವೆ. ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಸಾಮಾನ್ಯ ಸಭೆಗೆ ಗೈರಾರಾದರೆ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಿ ಎಂದು ತಾಲೂಕು ಪಂಚಾಯತ್ ಸರ್ವ ಸದಸ್ಯರು ಪಕ್ಷ ಬೇಧವಿಲ್ಲದೇ ಅಧ್ಯಕ್ಷರ ವಿರುದ್ಧ ಹರಿಹಾಯ್ದ ಪ್ರಸಂಗ ನಡೆಯಿತು.
ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಪಂ ಅಧ್ಯಕ್ಷೆ ಪಾರವ್ವಾ ಆರೇರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯ ಆರಂಭದಲ್ಲಿಯೇ ಎಲ್ಲ ಸದಸ್ಯರು ಎದ್ದು ನಿಂತು ಅಧ್ಯಕ್ಷರನ್ನೇ ತರಾಟೆಗೆ ತೆಗೆದುಕೊಂಡರು. ಸಭೆಗೆ ಗೈರಾದ ಅಕ್ಷರ ದಾಸೋಹ ಅಧಿಕಾರಿ ರವಿಶೆಟ್ಟೆಪ್ಪನವರಿಗೆ ಜ್ವರ ಬಂದಿದೆ. ಸಭೆಯ ಹಾಜರಾತಿ ಕುರಿತು ಪೋನ್ ಮೂಲಕ ಸ್ಪಷ್ಟನೇ ನೀಡಿದ್ದಾರೆ ಎಂದು ಅಧಿಕಾರಿಗಳ ಪರ ಅಧ್ಯಕ್ಷರು ಲಾಭಿ ನಡೆಸಿದರು.
ನಿನ್ನೆ ಸಂಜೆವರೆಗೂ ಇಲ್ಲಿಯೇ ಸುತ್ತಾಡಿಕೊಂಡವರಿಗೆ ಒಮ್ಮೆಲೆ ಮೀಟಿಂಗ್ ಬಂದಾಗಲೇ ಜ್ವರ ಬಂದಿತೇನು ಎಂದು ಸದಸ್ಯ ಶ್ರೀಕಾಂತ ಪೂಜಾರ ಏರು ದಾಟಿಯಲ್ಲಿ ಅಧ್ಯಕ್ಷರನ್ನು ಪ್ರಶ್ನಿಸಿದರು. ಸದಸ್ಯ ವಿಶ್ವನಾಥ ಹರವಿ ಸದಸ್ಯರ ಮಾತಿಗೆ ದ್ವಿನಿಗೂಡಿಸಿ, ಆಹಾರ ವಿಭಾಗದ ಅ ಧಿಕಾರಿಗಳು ಸಭೆಗೆ ಬಂದಿಲ್ಲ. ತಾಲೂಕಿನ ಸಾಕಷ್ಟು ಬಡ ಜನರರೇಷನ್ ಕಾರ್ಡ್ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಿತ್ತು. ಅಲ್ಲದೇ ಸಿಡಿಪಿಒ ಸಹ ಸಭೆಗೆ ಗೈರಾಗಿದ್ದಾರೆ. ತಾಲೂಕಿನ ಅನೇಕ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರ ಸಮಸ್ಯೆಗಳ ಕುರಿತು ನಾವು ಯಾರೊಂದಿಗೆ ಮಾತನಾಡಬೇಕು ಎಂದು ಅಧ್ಯಕ್ಷರನ್ನು ಖಾರವಾಗಿ ಪ್ರಶ್ನಿಸಿದರು. ಅಧ್ಯಕ್ಷೆ ಪಾರವ್ವ ಆರೇರ ಸದಸ್ಯರ ಮಾತಿಗೆ ಉತ್ತರಿಸಿ, ಇಲಾಖೆ ಕೆಲಸದ ನಿಮಿತ್ತ ಹೊರಹೋಗಿದ್ದಾರೆ. ನಮ್ಮ ಒಪ್ಪಿಗೆಯನ್ನೂ ಪಡೆದಿದ್ದಾರೆ. ಅನಧಿಕೃತ ಗೈರಾದವರಿಗೆ ನೋಟಿಸ್ ನೀಡೋಣ ಎಂದು ಸದಸ್ಯರುನ್ನು ಸಮಾದಾನ ಮಾಡಲು ಎತ್ನಿಸಿದರು.
ಆಗ ಅಂದಲಗಿ ಕ್ಷೇತ್ರದ ಸದಸ್ಯ ಬಿ.ಎಸ್. ಹಿರೇಮಠ ಮಾತನಾಡಿ, ತಾಪಂ ಆವರಣದಲ್ಲಿನ ಇಲಾಖೆ ಕಟ್ಟಡವೊಂದು ಬಳಸದೆ ಖಾಲಿಬಿದ್ದಿದೆ. ಸಿಡಿಪಿಒ ಕಾರ್ಯಾಲಯ ಬಾಡಿಗೆ ಕಟ್ಟಡದಲ್ಲಿ ನಡೆಸುವ ಬದಲಾಗಿ ಖಾಲಿ ಇರುವ ಕಡ್ಡದಲ್ಲೆ ನಡೆಸಬಹುದಲ್ಲವೆ? ಇದರಿಂದಾಗಿ ಪ್ರತಿ ತಿಂಗಳೂ ಇಲಾಖೆಗೆ ಹಣಕಾಸಿನ ಹೊರೆಯಾಗುತ್ತಿದ್ದು, ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು. ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರು ಪೂಜಾರ ತಮ್ಮ ಟೇಬಲ್ ಮೇಲಿದ್ದ ಫೈಲ್‌ಒಳಗಿನ ನೋಟಿಸ್‌ಗಳನ್ನು ತೋರಿಸಿ, ಹಿಂದಿನ ಸಭೆಯಲ್ಲಿ ಗೈರಾದವರ ನೋಟಿಸ್ಸಿಗೆ ಅನುಪಾಲನಾ ವರದಿ ಸ್ಪಷ್ಟನೆಯನ್ನು ಓದಿ ಹೇಳಿದರು. ಆದರೆ, ಎಲ್ಲ ಸದಸ್ಯರು ಎದ್ದು ನಿಂತು ಒಕ್ಕೊರಲಿನಿಂದ ಎಲ್ಲ ಇಲಾಖೆ ಅಧಿಕಾರಿಗಳಿಲ್ಲದಿದ್ದರೆ ಸಭೆ ನಡೆಸಲಾಗದು ಎಂದು ಪಟ್ಟ ಹಿಡಿದರು.
ಕಾರ್ಯ ನಿರ್ವಹಣಾಧಿಕಾರಿ ಚಂದ್ರು ಪೂಜಾರ, ಆ. 13ರಂದು ಸಭೆ ನಡೆಸಲಾಗುವುದು. ಅಧಿಕಾರಿಗಳು ಕಡ್ಡಾಯ ಇರುವಂತೆ ನೋಟಿಸ್ ನೀಡಲಾಗುವುದು. ಅಲ್ಲದೇ ಅನಧಿಕೃತ ಗೈರು ಹಾಜರಾದ ಅ ಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಾಖಿತು ಮಾಡಿದರು. ಸಭೆಗೆ ಗೈರಾದ ಅಕ್ಷರದಾಸೋಹ, ಆರೋಗ್ಯ, ಆಹಾರ ವಿಭಾಗದ ನಿರೀಕ್ಷಕರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಎಂಟು ಇಲಾಖೆ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಬೇಕೆಂದು ಠರಾವಿನೊಂದಿಗೆ ಸಭೆ ಅಂತ್ಯಗೊಂಡಿತು.