Advertisement

World Bicycle Day- ಸುಸ್ಥಿರ ಭವಿಷ್ಯಕ್ಕಾಗಿ ಸೈಕಲ್‌ ತುಳಿಯೋಣ

12:02 AM Jun 03, 2023 | Team Udayavani |

ಪ್ರತಿಯೋರ್ವರು ತಮ್ಮ ಬಾಲ್ಯದಲ್ಲಿ ಬೈಸಿಕಲ್‌ ತುಳಿದೇ ಇತರ ಯಾವುದೇ ವಾಹನ ಚಾಲನೆ ಕಲಿಕೆಗೆ ಮುಂದಾಗುತ್ತಾರೆ. ಬೈಸಿಕಲ್‌ ಅನ್ನು ಆತ ಸಮರ್ಥವಾಗಿ ತುಳಿಯಬಲ್ಲ ಎಂದರೆ ಇತರ ವಾಹನಗಳ ಚಾಲನೆ ಕಲಿಕೆ ಆತನಿಗೆ ಬಲುಸುಲಭ. ಈ ಕಾರಣ ದಿಂದಾಗಿ ಬಾಲ್ಯದಲ್ಲಿ ಬೈಸಿಕಲ್‌ ತುಳಿದ ನೆನಪು ಸದಾ ಸ್ಮರಣೀಯ. ಬೈಸಿಕಲ್‌ ಕೇವಲ ವಾಹನಗಳ ಚಾಲನೆ ಕಲಿಕೆಗೆ ಮಾತ್ರವಲ್ಲ ವ್ಯಕ್ತಿಯ ದೈಹಿಕ ಬೆಳವಣಿಗೆ ಮತ್ತು ಸದೃಢ ಆರೋಗ್ಯಕ್ಕೂ ಪೂರಕ. ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ಸಹಕಾರಿ. ಪರಿಸರ ಸ್ನೇಹಿಯಾಗಿರುವ ಬೈಸಿಕಲ್‌ಗಾಗಿಯೇ ಒಂದು ದಿನ ಮೀಸಲಿಡಲಾಗಿದೆ. ವಿಶ್ವಸಂಸ್ಥೆ ಪ್ರತೀ ವರ್ಷ ಜೂ.3ರಂದು ವಿಶ್ವ ಬೈಸಿಕಲ್‌ ದಿನವನ್ನು ಆಚರಿಸುತ್ತಾ ಬಂದಿದೆ. ಈ ಬಾರಿ ” ಸುಸ್ಥಿರ ಭವಿಷ್ಯಕ್ಕಾಗಿ ಜತೆಯಾಗಿ ಸವಾರಿ’ ಎಂಬ ಧ್ಯೇಯದೊಂದಿಗೆ ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಲಾಗುತ್ತಿದೆ.

Advertisement

ಬೈಸಿಕಲ್‌ನ ಇತಿಹಾಸ
ಜರ್ಮನ್‌ ಪ್ರಜೆ ಕಾರ್ಲ್ ವಾನ್‌ ಡ್ರಯಸ್‌ 1817ರಲ್ಲಿ ಬೈಸಿಕಲ್‌ ತಯಾರಿಸಿದರು. ವರ್ಷಗಳುರುಳಿ ದಂತೆ ಜನಪ್ರಿಯ ಸಾರಿಗೆ ಸಾಧನ ವಾಗಿ ಜನಪ್ರಿಯವಾದ ಬೈಸಿಕಲ್‌ ಹಲವಾರು ಸುಧಾರಣೆಗಳನ್ನು ಕಂಡು 20ನೇ ಶತಮಾನದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿತು. ತದನಂತರದಲ್ಲಿ ಸಾರಿಗೆ ಕ್ಷೇತ್ರವನ್ನು ಮೋಟಾರು ವಾಹನಗಳು ಅತಿಕ್ರಮಿಸಿಕೊಂಡ ವಾದರೂ ಬೈಸಿಕಲ ತನ್ನ ಪ್ರತ್ಯೇಕತೆ ಯನ್ನು ಉಳಿಸಿಕೊಂಡು, ಕೇವಲ ಸಾರಿಗೆ ಸಾಧನವಾಗಿ ಮಾತ್ರವಲ್ಲದೆ ಕ್ರೀಡೆ, ಶಾರೀರಿಕ ಮತ್ತು ಮನೋ ರಂಜನೆ ಚಟುವಟಿಕೆಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿತು. ಇತ್ತೀ ಚಿನ ದಶಕದಲ್ಲಿ ಸೈಕಲ್‌ ನಿರ್ಮಾಣ ದಲ್ಲೂ ಕ್ರಾಂತಿಕಾರಿ ಬದಲಾವಣೆ ಗಳಾಗಿದ್ದು ಅತ್ಯಂತ ಸುಧಾರಿತ ಮತ್ತು ಪರಿಸರಸ್ನೇಹಿ ವಾಹನವಾಗಿ ಶ್ರೇಷ್ಠತೆ ಮೆರೆದಿದೆ.

ವಿಶ್ವ ಬೈಸಿಕಲ್‌ ದಿನದ ರೂವಾರಿ ಸಿಬಿಲ್‌ ಸ್ಕಿ
ವಿಶ್ವ ಬೈಸಿಕಲ್‌ ದಿನವನ್ನು ಆಚರಿಸಬೇಕೆಂದು ಮೊದಲ ಬಾರಿಗೆ ಆಗ್ರಹ ಕೇಳಿಬಂದದ್ದು 2015ರಲ್ಲಿ. ಅಮೆರಿಕ ಮೂಲದ ಸಮಾಜಶಾಸ್ತ್ರ ಉಪನ್ಯಾಸಕರಾದ ಲೆಸಝೆಕ್‌ ಸಿಬಿಲ್‌ ಸ್ಕಿ ಬೈಸಿಕಲ್‌ಗಾಗಿ ದಿನವನ್ನು ಮೀಸಲಿಡಬೇಕೆಂದು ತಮ್ಮ ಬ್ಲಾಗ್‌ ಬರಹದ ಮೂಲಕ ಬೇಡಿಕೆ ಇರಿಸಿದರು. ಅನಂತರದಲ್ಲಿ ಅವರು ಬೈಸಿಕಲ್‌ನಿಂದಾಗುವ ಪ್ರಯೋಜನ ಹಾಗೂ ಮಾನವನ ಬೆಳವಣಿಗೆಯಲ್ಲಿ ಬೈಸಿಕಲ್‌ನ ಪಾತ್ರವನ್ನು ವಿವರಿಸುವ ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅವರ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಬೆಂಬಲ ದೊರಕಿ ದೊಡ್ಡ ಚಳವಳಿಯಾಗಿ ಮಾರ್ಪಾಡಾಗುತ್ತದೆ. ಅನಂತರ 2018ರ ಎ. 12ರಂದು ವಿಶ್ವಸಂಸ್ಥೆ ಪ್ರತೀ ವರ್ಷ ಜೂ.3ರಂದು ವಿಶ್ವ ಬೈಸಿಕಲ್‌ ದಿನ ಆಚರಿಸುವ ತೀರ್ಮಾನ ಕೈಗೊಂಡಿತು.

ಆರೋಗ್ಯಕರ ಹವ್ಯಾಸ
ಪರಿಸರ ಸ್ನೇಹಿ, ಆರೋಗ್ಯ ವೃದ್ಧಿಯ ಪ್ರಯೋಜನ ಹಾಗೂ ಎಲ್ಲ ವರ್ಗದ ಜನರೂ ಬಳಸಬಹುದಾದ ಬೈಸಿಕಲ್‌ಗಾಗಿ ಒಂದು ದಿನವನ್ನು ಮೀಸಲಿಡುವ ಸಲುವಾಗಿ ವಿಶ್ವಸಂಸ್ಥೆ ಬೈಸಿಕಲ್‌ ದಿನವನ್ನು ಆಚರಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸೈಕ್ಲಿಂಗ್‌ನಿಂದ ಸದೃಢ ಶರೀರ ಮತ್ತು ಸಶಕ್ತ ಆರೋಗ್ಯ ಹೊಂದಲು ತುಂಬಾ ಸಹಾಯಕಾರಿ. ಸೈಕಲ್‌ ತುಳಿಯುವುದರಿಂದ ಹೃದಯ ಸಂಬಂಧಿ ಸಮಸ್ಯೆ, ಕಾನ್ಸರ್‌, ಪಾರ್ಶ್ವವಾಯು, ಸಂಧಿವಾತ, ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ನಾಯು, ಮೂಳೆಗಳ ಬಲವರ್ಧನೆಗೂ ಪೂರಕ.

ಹಲವು ರೂಪಾಂತರ, ಸುಧಾರಣೆ
ಜರ್ಮನಿಯ ಕಾರ್ಲ್ ವಾನ್‌ ಡ್ರಯಸ್‌ ಅವರು ಮೊದಲ ಬಾರಿಗೆ ತಯಾರಿಸಿದ ಸೈಕಲ್‌ನಲ್ಲಿ ಯಾವುದೇ ಚೈನ್‌, ಬ್ರೇಕ್‌ ಹಾಗೂ ತುಳಿಯಲು ಪೆಡಲ್‌ಗ‌ಳು ಇರಲಿಲ್ಲ. ಕಾಲಿನಲ್ಲೇ ದೂಡಿಕೊಂಡು ಸೈಕಲ್‌ ಚಲನೆ ಮಾಡಬೇಕಾಗಿತ್ತು. ಅನಂತರದಲ್ಲಿ ಇದರ ಆಧಾರವಾಗಿ ಸೈಕಲ್‌ನ ವಿನ್ಯಾಸ ಮಾಡಲಾಯಿತು. 1860ರಲ್ಲಿ ಸೈಕಲ್‌ಗ‌ಳಿಗೆ ಪೆಡಲ್‌ ಅಳವಡಿಸಲಾಯಿತು. ಅನಂತರ ಫ್ರಾನ್ಸ್‌ ದೊಡ್ಡ ಮಟ್ಟದಲ್ಲಿ ಬೈಸಿಕಲ್‌ ಉತ್ಪಾದನೆಯನ್ನು ಕೈಗೊಂಡಿತು. 1990ರಲ್ಲಿ ಜಪಾನ್‌ ಹೊಸ ರೂಪಾಂತರವಾಗಿ ಎಲೆಕ್ಟ್ರಾನಿಕ್‌ ಬೈಸಿಕಲ್‌ ಅನ್ನು ಪರಿಚಯಿಸಿತು.

Advertisement

ಹೆಚ್ಚುತ್ತಿರುವ ಬೇಡಿಕೆ
2022ರಲ್ಲಿ ಜಾಗತಿಕವಾಗಿ ಬೈಸಿಕಲ್‌ ಮಾರುಕಟ್ಟೆ ಮೌಲ್ಯ ಅಂದಾಜು 110.38 ಬಿಲಿಯನ್‌ ಡಾಲರ್‌ಗಳಷ್ಟಾಗಿತ್ತು. 2023ರ ಹೊತ್ತಿಗೆ ಇದು 228.90 ಬಿಲಿಯನ್‌ ಡಾಲರ್‌ಗಳಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಿಶ್ವಾದ್ಯಂತ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸತೊಡಗಿದ್ದು, ಒಟ್ಟಾರೆ ಸೈಕಲ್‌ ಮಾರುಕಟ್ಟೆಯ ಬೆಳವಣಿಗೆಗೆ ಇದು ಸಹಾಯಕಾರಿಯಾಗುತ್ತಿದೆ. ಹೆಚ್ಚುತ್ತಿರುವ ಸಂಚಾರದಟ್ಟಣೆ, ನಗರೀಕರಣ ಹಾಗೂ ಪರಿಸರ ಕಾಳಜಿಯಿಂದ ಜನರು ಬೈಸಿಕಲ್‌ ಬಳಕೆಯೆಡೆಗೆ ಒಲವು ತೋರಿಸುತ್ತಿರುವುದರಿಂದಾಗಿ ಮಾರುಕಟ್ಟೆಯಲ್ಲಿ ಸೈಕಲ್‌ಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next