Advertisement

ಶಿಕ್ಷೆಯಲ್ಲ, ಸುರಕ್ಷೆ ಆಡಳಿತದ ಜತೆಗೆ ಸಹಕರಿಸೋಣ

10:13 AM Mar 15, 2020 | mahesh |

ಕೊರೊನಾದ ಭೀತಿಯನ್ನು ಹೆಚ್ಚಿಸುವಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಗಣನೀಯವಾಗಿರುವುದು ಕಂಡು ಬರುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ವೈರಸ್‌ ಕುರಿತಾಗಿ ಅಸಂಖ್ಯಾತ ಮಾಹಿತಿಗಳು ಹರಿದಾಡುತ್ತಿವೆ. ಈ ಪೈಕಿ ಶೇ. 99ರಷ್ಟು ಸಂದೇಶಗಳು ಸುಳ್ಳು ಮಾಹಿತಿಗಳಿಂದ ತುಂಬಿವೆ.

Advertisement

ಕೊರೊನಾ ವೈರಸ್‌ ಹರಡುವ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳು ಕಠಿಣ ನಿರ್ಧಾರಗಳನ್ನು ಕೈಗೊಂಡಿವೆ. ಕರ್ನಾಟದಲ್ಲಿ ಶನಿವಾರದಿಂದ ತೊಡಗಿ ಒಂದು ವಾರ ಕಾಲ ಮಾಲ್‌ಗಳು, ಚಿತ್ರಮಂದಿರಗಳು, ಕ್ಲಬ್‌ಗಳು, ಶಾಲಾ-ಕಾಲೇಜುಗಳು ಮುಚ್ಚಲಿವೆ. ದಿಲ್ಲಿ, ಉತ್ತರ ಪ್ರದೇಶ, ಹರ್ಯಾಣ ರಾಜ್ಯಗಳೂ ಈ ಮಾದರಿಯ ಶಟ್‌ಡೌನ್‌ ಆದೇಶ ನೀಡಿವೆ. ಕೊರೊನಾ ಹಾವಳಿ ಹೆಚ್ಚಿರುವ ಕೇರಳದಲ್ಲಿ ಈಗಾಗಲೇ ಅಘೋಷಿತ ಶಟ್‌ಡೌನ್‌ ಇದೆ.ಅಲ್ಲಿನ ವಿಧಾನಸಭೆ ಅಧಿವೇಶನವನ್ನು ಕೂಡ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಈ ಕ್ರಮದಿಂದ ಜನರಿಗೆ ಕಷ್ಟವಾಗುವುದು ನಿಜ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ. ನಿರ್ಬಂಧಗಳನ್ನು ಸಹಿಸಿಕೊಂಡು ಆಡಳಿತದ ಜತೆಗೆ ಸಹಕರಿಸುವುದು ನಮ್ಮ ಕರ್ತವ್ಯ. ಹೀಗಾಗಿ ಯಾರೂ ರಾಜ್ಯ ಸರಕಾರ ಘೋಷಿಸಿದ ಒಂದು ವಾರದ ಶಟ್‌ಡೌನ್‌ ಅನ್ನು ಶಿಕ್ಷೆ ಎಂದು
ಭಾವಿಸದೆ ನಮ್ಮ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮ ಎಂದು ಭಾವಿಸುವುದು ವಿಹಿತ.

ಮದುವೆ, ಹುಟ್ಟುಹಬ್ಬದಂಥ ಶುಭಕಾರ್ಯಗಳಿಗೂ ನಿರ್ಬಂಧ ಹೇರಲಾಗಿದೆ. ಇಂಥ ಕಾರ್ಯಗಳಿಗೆ ನೂರಕ್ಕಿಂತ ಹೆಚ್ಚು ಜನರನ್ನು ಸೇರಿಸಬಾರದು ಎಂದು ಸರಕಾರ ಹೇಳಿದೆ. ಈಗಾಗಲೇ ಆಮಂತ್ರಣ ಪತ್ರಿಕೆಗಳನ್ನು ಹಂಚಿರುವ ಶುಭಕಾರ್ಯಗಳಲ್ಲಿ ಈ ಮಿತಿಯನ್ನು ಪಾಲಿಸುವುದೂ ಕಷ್ಟವಾದರೂ ಸಾಧ್ಯವಾದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುವುದರಲ್ಲಿ ನಮ್ಮ ಹಿತವಿದೆ. ಅಂತೆಯೇ ಜಾತ್ರೆ, ಉತ್ಸವ, ಮೇಳಗಳಂತ ಧಾರ್ಮಿಕ ಕಾರ್ಯಕ್ರಮಗಳಿಗೂ ನಿರ್ಬಂಧದಿಂದ ಸಮಸ್ಯೆಯಾಗಬಹುದು. ಅದರಲ್ಲೂ ಇದೀಗ ಜಾತ್ರೆ ಮತ್ತು ಉತ್ಸವಗಳ ಕಾಲ. ಈ ಸಂದಭìದಲ್ಲೇ ಕೊರೊನಾ ಎಂಬ ಮಹಾ ಪಿಡುಗು ಹಾವಳಿಯಿಟ್ಟಿರುವುದು ದುರದೃಷ್ಟಕರ.

ಕೊರೊನಾ ವೈರಸ್‌ ಅಪಾಯಕಾರಿ ನಿಜ. ಹಾಗೆಂದು ಅದರ ಬಗ್ಗೆ ಅನಗತ್ಯ ಭೀತಿ, ಆತಂಕ ಇಟ್ಟುಕೊಳ್ಳುವ ಅಗತ್ಯವಿಲ್ಲ. ಸರಕಾರ ಸಾರ್ವಜನಿಕವಾಗಿ ಜನ ಸೇರುವುದನ್ನು ನಿರ್ಬಂಧಿಸಿರುವುದು ವೈರಸ್‌ ಹರಡುವುದನ್ನು ತಡೆಯುವ ಉದ್ದೇಶದಿಂದಲೇ ಹೊರತು ಅದರ ನಿಯಂತ್ರಣ ಕೈಮೀರಿದ ಹೋಗಿದೆ ಎಂಬ ಕಾರಣಕ್ಕಾಗಿ ಅಲ್ಲ. ಈ ಬಗ್ಗೆ ಸಾರ್ವಜನಿಕರು ತಪ್ಪು ಅಭಿಪ್ರಾಯ ಬೆಳೆಸಿಕೊಳ್ಳಬಾರದು.

Advertisement

ಕೊರೊನಾದ ಭೀತಿಯನ್ನು ಹೆಚ್ಚಿಸುವಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಗಣನೀಯವಾಗಿರುವುದು ಕಂಡು ಬರುತ್ತಿದೆ. ವಾಟ್ಸ್‌ಆಪ್‌, ಯೂಟ್ಯೂಬ್‌, ಫೇಸ್‌ಬುಕ್‌, ಟಿಕ್‌ಟಾಕ್‌, ಇನ್‌ಸ್ಟಾಗ್ರಾಂನಂಥ ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ವೈರಸ್‌ ಕುರಿತಾಗಿ ಅಸಂಖ್ಯಾತ ಮಾಹಿತಿಗಳು ಹರಿದಾಡುತ್ತಿವೆ. ಈ ಪೈಕಿ ಶೇ. 99ರಷ್ಟು ಸಂದೇಶಗಳು ಸುಳ್ಳು ಮಾಹಿತಿಗಳಿಂದ ತುಂಬಿವೆ. ಉದಾಹರಣೆಗೆ ಹೇಳುವುದಾದರೆ ಶರಾಬು ಹಚ್ಚಿಕೊಂಡರೆ ಕೊರೊನಾ ವೈರಸ್‌ ಸಾಯುತ್ತದೆ ಎಂಬ ಮಾಹಿತಿಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಸಾಬೂನು ಅಥವಾ ಸಾಬೂನು ದ್ರಾವಣ ಇಲ್ಲದಿದ್ದರೆ ಪರ್ಯಾಯವಾಗಿ ಅಲ್ಕೊಹಾಲ್‌ ಅಂಶ ಇರುವ ದ್ರಾವಣದಿಂದ ಕೈತೊಳೆದುಕೊಳ್ಳಬಹುದು ಎಂದಿದ್ದ ಮಾಹಿತಿಯನ್ನೇ ಪೂರ್ತಿಯಾಗಿ ತಿರುಚಿ ಈ ಸುಳ್ಳು ಸಂದೇಶವನ್ನು ಸೃಷ್ಟಿಸಲಾಗಿದೆ. ಅದೇ ರೀತಿ ಬೆಳ್ಳುಳ್ಳಿ ತಿಂದರೆ ಕೊರೊನಾ ಬರುವುದಿಲ್ಲ ಎನ್ನುವ ಮಾಹಿತಿ ಕೂಡ ಪೂರ್ತಿ ಸುಳ್ಳು. ಬೆಳ್ಳುಳ್ಳಿಯಲ್ಲಿ ರೋಗ ನಿರೋಧಕ ಶಕ್ತಿ ಇದೆ ಎನ್ನುವುದು ನಿಜವಾದರೂ ಕೊರೊನಾ ಸೋಂಕಿತರು ಬೆಳ್ಳುಳ್ಳಿ ತಿಂದರೆ ರೋಗ ಗುಣವಾಗುವುದಿಲ್ಲ. ಗೋಮೂತ್ರ, ಸಗಣಿ, ಇತ್ಯಾದಿಗಳ ಚಿಕಿತ್ಸೆಗೂ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಹೀಗಾಗಿ ಜನರು ಇಂಥ ಆನ್‌ಲೈನ್‌ ಪರಿಹಾರಗಳನ್ನು ನಂಬದೆ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸರಕಾರಗಳು ಸೂಚಿಸಿರುವ ಮುನ್ನೆಚ್ಚರಿಕೆಗಳನ್ನು ಪಾಲಿಸಿದರಷ್ಟೇ ಸಾಕು. ಕೊರೊನಾ ಸೊಳ್ಳೆಗಳಿಂದ ಹರಡುತ್ತದೆ ಎಂಬ ಸುದ್ದಿಯೂ ಸುಳ್ಳು. ಕೊರೊನಾದ ಬಗ್ಗೆ ವಿಶ್ವಾಸಾರ್ಹ ಮೂಲಗಳು ನೀಡುವ ಮಾಹಿತಿಯನ್ನು ನಂಬಿದರೆ ಆ ಕುರಿತಾಗಿರುವ ಆತಂಕ ದೂರವಾಗುತ್ತದೆ.

ಇನ್ನು ಸಾರ್ವಜನಿಕ ನಿಬಂìಧ ಇದೆ ಎಂಬ ಕಾರಣಕ್ಕಾಗಿ ಜನರಿಗೆ ನಿತ್ಯದ ಅಕ್ಕಿ ಬೇಳೆ ದಿನಸಿ ಸಾಮಗ್ರಿಗಳಿಗೆ ತತ್ವಾರವಾಗಬಹುದು ಎಂಬ ಭೀತಿಯೂ ಅನಗತ್ಯ. ಸದ್ಯಕ್ಕೆ ಮಾಲ್‌ಗಳನ್ನು ಮಾತ್ರ ಮುಚ್ಚಲು ಆದೇಶಿಸಲಾಗಿದೆ. ಉಳಿದಂತೆ ಎಲ್ಲ ವ್ಯಾಪಾರ ಮಳಿಗೆಗಳು ತೆರೆದಿರುತ್ತವೆ. ಹೀಗಾಗಿ ಜನರು
ಅಗತ್ಯಕ್ಕಿಂತ ಹೆಚ್ಚಿನ ಸಾಮಾಗ್ರಿಗಳನ್ನು ಖರೀದಿಸಿ ದಾಸ್ತಾನು ಇಟ್ಟುಕೊಳ್ಳುವ ಅಗತ್ಯವಿಲ್ಲ. ಅಂತೆಯೇ ವ್ಯಾಪಾರಿಗಳು ಕೂಡ ಈ ಸಂದರ್ಭವನ್ನು ಬೆಲೆ ಹೆಚ್ಚಿಸಿ ಲಾಭ ಮಾಡಲು ಬಳಸಿಕೊಳ್ಳಬಾರದು. ಸಂಕಷ್ಟದ ಪರಿಸ್ಥಿತಿಯಲ್ಲಿ ಪರಸ್ಪರರಿಗೆ ಸಹಕರಿಸುವುದು ಮಾನವೀಯ ಧರ್ಮ.

Advertisement

Udayavani is now on Telegram. Click here to join our channel and stay updated with the latest news.

Next