Advertisement

ಸಣ್ಣ ಸಮುದಾಯ ಅಧಿಕಾರಕ್ಕೆ ಬರಲಿ

10:14 AM Sep 05, 2017 | Team Udayavani |

ಕಲಬುರಗಿ: ಸಣ್ಣ ಮತ್ತು ಅತಿ ಸಣ್ಣ ಸಮುದಾಯಗಳಲ್ಲಿನ ಯುವಕರು ಹಾಗೂ ಮುಖಂಡರು ತುಂಬಾ ಎಚ್ಚರಿಕೆಯಿಂದ
ನಡೆದುಕೊಂಡು ರಾಜಕೀಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬೆಳೆದಾಗ ಮಾತ್ರವೇ ಈ ಸಮುದಾಯಗಳ ಕಲ್ಯಾಣ ಸಾಧ್ಯ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ ಹೇಳಿದರು. 

Advertisement

ನಗರದ ಹಿಂದಿಪ್ರಚಾರ ಸಭೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತಿ ಸಣ್ಣ ಸಮುದಾಯಗಳ ಒಕ್ಕೂಟ
ಹಮ್ಮಿಕೊಂಡಿದ್ದ ಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ಹಿಂದುಳಿದ ಸಣ್ಣ ಮತ್ತು ಅತಿಸಣ್ಣ ಸಮುದಾಯಗಳು ರಾಜಕೀಯ ಮೀಸಲಾತಿ ಅಧಿಕಾರ ಪಡೆಯಲು ಒಂದಾಗುವುದು ಅಗತ್ಯ. ಇಲ್ಲದೆ ಹೋದರೆ ಈ ಸಮುದಾಗಳು ನಿರೀಕ್ಷೆ ಮತ್ತು ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗುವುದಿಲ್ಲ. ಈ ಸಮುದಾಯಗಳ ಮುಖಂಡರನ್ನು ಕೆಲವು ರಾಜಕೀಯ ತಂತ್ರಗಾರಿಕೆಗೆ ಸಿಲುಕಿಸಿ ಅಧಿಕಾರದಿಂದ ದೂರ ಇರುವಂತೆ ಮಾಡಲಾಗುತ್ತಿದೆ. ಇಂತಹ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ಒಂದೇ ವಲಯದ ಜನರನ್ನು ಗುರುತಿಸಿಕೊಂಡು ಸಂಘಟನಾತ್ಮಕವಾಗಿ ಮುನ್ನಡೆಯುವುದನ್ನು ರೂಢಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಎಚ್ಚರಿಸಿದರು.

ಒಕ್ಕೂಟದ ರಾಜ್ಯಧ್ಯಕ್ಷ ಸಾಯಿಬಣ್ಣ ಎಂ. ಮಡಿವಾಳ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ಸಣ್ಣ ಮತ್ತು ಅತಿಸಣ್ಣ
ಸಮುದಾಯ ಜನರು ಶೇ. 69ರಷ್ಟು ಇದ್ದಾರೆ. ಶಾಲಾ ಕಾಲೇಜುಗಳ ಮಕ್ಕಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯಲು ಆದ್ಯತೆ ಹಾಗೂ ಸರಕಾರದ ವಿವಿಧ ಯೋಜನೆ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ನಿಟ್ಟಿನಲ್ಲಿ ಈ ಒಕ್ಕೂಟ ಸೇವೆ ನೀಡುತ್ತಿದೆ. 

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯಪ್ರಾತಿನಿಧ್ಯ ಪಡೆಯಲು ಎಲ್ಲ ಪಕ್ಷಗಳಿಗೆ ಒತ್ತಡ ಹಾಕಲಾಗುವುದು. ಮುಂಬರುವ ಚುನಾವಣೆಗಳಲ್ಲಿ ಈ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಸ್ಥಾನಮಾನ, ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಸದಸ್ಯರ ನಾಮನಿರ್ದೇಶನ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳ
ಆಯ್ಕೆ ಪಟ್ಟಿ ತಯಾರಿಸುವಂತೆ ರಾಜ್ಯಾದ್ಯಂತ ರಾಜ್ಯಮಟ್ಟದಲ್ಲಿ ಹೋರಾಟ ಆಯೋಜಿಸಲಾಗುವುದು ಎಂದು
ಹೇಳಿದರು. 

Advertisement

ಅಶೋಕ ಗುರುಜಿ, ಡಾ| ಜಯಣ್ಣ, ಪ್ರೊ| ಸಂಜಯ ಮಾಕಲ, ಜಿಲ್ಲಾ ಪ್ರಧಾನಕಾರ್ಯದರ್ಶಿ ರವಿ ಬಡಿಗೇರ, ರಾಜ್ಯ
ಸಂಚಾಲನ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಶಾಮಲಾ ಮಂದೆವಾಲ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಪ್ರಧಾನ ಕಾರ್ಯದರ್ಶಿಗಳಾದ ಭೀಮಾಶಂಕರ ಮಡಿವಾಳ ಆಳಂದ, ವೆಂಕಟೇಶ ದೊರೆಪಲ್ಲಿ, ಒಕ್ಕೂಟದ ಉಪಾಧ್ಯಕ್ಷ ಬಸವರಾಜ ಬಾಗೆವಾಡಿ, ಬಸವರಾಜ ವಂಟಗೊಡಿ, ಸಹ ಪ್ರಧಾನಕಾರ್ಯದರ್ಶಿ ಅಶೋಕ ಆರ್‌. ಹೂಗಾರ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next