ಭಾರತೀಯ ಸಂಸ್ಕೃತಿ ಆಚರಣೆಯ ಸಾಲಿನಲ್ಲಿ ಹಬ್ಬಗಳಿಗೇನು ಬರವಿಲ್ಲ, ಎಲ್ಲ ಹಬ್ಬಗಳ ಸಾಲಿನಲ್ಲಿ ದೀಪಾವಳಿಯು ಹಬ್ಬಗಳ ರಾಜನ ಹಾಗೇ ಕಾಣುವುದು. ಮೂರು ದಿನಗಳ ಆಚರಣೆ ಎಂದರೆ ಕಮ್ಮಿಯೇನು ಅಲ್ಲ! ಪ್ರತಿ ದಿನವೂ ಭಿನ್ನ ಪದ್ಧತಿಯಲ್ಲಿ ಆಚರಿಸುವ ಹಬ್ಬ. ಕೇವಲ ಇಂತಿಷ್ಟೇ ಪ್ರದೇಶಗಳಿಗೆ ಸೀಮಿತವಾಗದೇ ವಿಶ್ವಾದ್ಯಂತ ಆಚರಣೆಯ ಕ್ರಮ ಭಿನ್ನವಾದರೂ ದೀಪವನ್ನು ಹಚ್ಚಿ ಪೂಜಿಸುವುದು ಸಾಮಾನ್ಯ.
ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ಹಿಂದೆ ಹಬ್ಬಗಳನ್ನು ಆಚರಿಸುವುದರ ಮುಖ್ಯ ಉದ್ದೇಶವೇ ಪ್ರಕೃತಿಯನ್ನು ಆರಾಧಿಸುವುದು ಆಗಿದೆ. ಆದರೆ ಕಾಲ ಕ್ರಮೇಣ ನಾವು ಆಡಂಬರಕ್ಕೆ ಒಗ್ಗಿಕೊಂಡಾಗ ಹಬ್ಬಗಳು ಪರಿಸರಕ್ಕೆ ಮಾರಕವಾಗಲು ಆರಂಭವಾದವು. ನಮ್ಮ ಆಚರಣೆಯಿಂದ ಪ್ರಕೃತಿಗೆ ನೋವುಂಟಾಗದಂತೆ ನೋಡಿಕೊಳ್ಳುವುದು ಕೂಡಾ ನಮ್ಮ ಕರ್ತವ್ಯವೇ ಹೌದು. ಅದಕ್ಕಾಗಿ ಇತ್ತೀಚೆಗೆ ಹಸಿರು ದೀಪಾವಳಿಯ ಆಚರಣೆ ಹೆಚ್ಚಾಗಿದೆ.
ಏನಿದು ಹಸಿರು ದೀಪಾವಳಿ?
ಹೆಚ್ಚಾಗಿ ಇಂದಿನ ಜನ ಪಟಾಕಿ ಸಿಡಿಸುವುದೊಂದೆ ಹಬ್ಬ ಎಂದು ತಿಳಿದಿದ್ದಾರೆ. ಮೌಲ್ಯಗಳು ಕಾಲ ಸರಿದಂತೆ ಗೌಣವಾಗುತ್ತಿದೆ. ಒಂದು ದಿನದ ಆಚರಣೆಗೆ ಅದೆಷ್ಟೋ ಪಟಾಕಿ ಸಿಡಿಮದ್ದು ಸಿಡಿಸುವ ನಮಗೆ ನಮ್ಮನ್ನು ಸಲಹಿದ ಪ್ರಕೃತಿ ಕಾಣಲೇ ಇಲ್ಲ ಎನ್ನುವುದು ವಿಷಾದಕರ ಸಂಗತಿ. ತಿಳಿದ ವಿಷಯವೇ ಆದರೂ ಸಹ ನಿರ್ಲಕ್ಷ್ಯ ಮಾಡುವ ನಮ್ಮ ಮನಸ್ಥಿತಿ ನಿಜಕ್ಕೂ ಸರಿಯಿಲ್ಲ.
ಇದನ್ನೂ ಓದಿ:ಸಿಹಿ ತಿನಿಸು, ಪಟಾಕಿ, ಅಪ್ಪನ ಬೋನಸ್..: ದೀಪಗಳ ಹಬ್ಬದ ನೆನಪು
ಹಸಿರು ದೀಪಾವಳಿ. ಹೆಸರೇ ಹೇಳುವ ಹಾಗೆ ಪ್ರಕೃತಿಯ ಜೊತೆಗಿನ ದೀಪಾವಳಿ; ಹಣತೆ ಬೆಳಗುವ ಮೂಲಕ ಹಬ್ಬವನ್ನು ಆಚರಣೆ ಮಾಡಿದ ಹಾಗೂ ಆಗುತ್ತದೆ ; ಪಟಾಕಿ ಸಿಡಿಮದ್ದು ಮುಂತಾದವುಗಳನ್ನು ನಿಷೇಧ ಮಾಡಿದಾಗ ಪ್ರಕೃತಿಗೆ ಆಗುವ ಹಾನಿಯನ್ನು ಸಹ ತಡೆಗಟ್ಟಬಹುದು . ಹಲವು ಸಂಘ ಸಂಸ್ಥೆಗಳು ಇಂತಹ ಆಚರಣೆಗೆ ಒತ್ತು ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದೆ. ಶಬ್ಧ ಮಾಲಿನ್ಯದ ಜೊತೆಗೆ ಅದೆಷ್ಟೋ ವಿಷಕಾರಿ ರಾಸಾಯನಿಕ ಅನಿಲಗಳು ಪಟಾಕಿಯ ಮೂಲಕ ಪ್ರಕೃತಿಯನ್ನು ಸೇರುತ್ತಿದೆ. ಆಮ್ಲಜನಕದ ಜೊತೆಗೆ ಇಂತಹ ವಿಷಾನಿಲಗಳು ಸೇರಿ ನಾವು ಉಸಿರಾಡುವ ಗಾಳಿಯು ಸಹ ನಮಗೆ ತಿಳಿದೂ ಹಾಳಾಗುತ್ತಿದೆ. ಇದನ್ನು ತಡೆಗಟ್ಟಲು ಪೂರಕವಾಗಿ ಇಂತಹ ಆಚರಣೆಗಳು ನಿಜಕ್ಕೂ ಅವಶ್ಯಕ.
ಪಟಾಕಿಗಳ ಹೊಗೆಯಿಂದ ಉಸಿರಾಟದ ತೊಂದರೆಯಾಗುತ್ತದೆ. ಅಂತೆಯೆ ಯಾರಿಗೆ ಉಸಿರಾಟದ ತೊಂದರೆಯಿದೆಯೋ ಅವರ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಪರಿಸರದಲ್ಲಿ ಆಮ್ಲಜನಕದ ಪ್ರಮಾಣವು ಕಡಿಮೆಯಾಗಿ ಕಾರ್ಬನ್ ಡೈ ಆಕ್ಸೈಡ್ ನ ಪ್ರಮಾಣವು ಹೆಚ್ಚುತ್ತದೆ. ಆದುದರಿಂದ ಜನರಿಗೆ ಶುದ್ಧ ಗಾಳಿ ಸಿಗುವುದಿಲ್ಲ ಹಾಗೂ ಪರಿಸರ ಮಾಲಿನ್ಯವಾಗುತ್ತದೆ. ಹಾಗಾಗಿ ನಾವು ಪ್ರಕೃತಿಗೆ ತೊಂದರೆ ನೀಡದೇ ಪರಿಸರ ಪೂರಕವಾಗಿ ಹಬ್ಬವನ್ನು ಆಚರಿಸುವ ಎನ್ನುವುದೇ ಆಶಯವಾಗಿದೆ.
ಮನುಷ್ಯ ಸದಾ ಇತಿಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು ಎಂಬ ಸಂಕೇತ ಕೂಡ ಇಲ್ಲಿದೆ. ಇನ್ನಾದರೂ ಹಬ್ಬದ ನಿಜ ಅರ್ಥವನ್ನು ತಿಳಿದು ಆಚರಿಸಬೇಕು ಮನಸ್ಸಿನ ಅಂಧಕಾರವನ್ನು ತೆಗೆದು ಹಾಕಿ ಜ್ಞಾನದ ಬೆಳಕನ್ನು ಹರಿಸಬೇಕು ನಮ್ಮಲ್ಲಿನ ನಾನು ಎಂಬುದನ್ನು ತೊರೆದು ನಾವೆಂಬ ಭಾವನೆ ಬಿತ್ತಬೇಕು. ಹೀಗಾದರೆ ಮಾತ್ರ ಅದು ನಿಜವಾದ ದೀಪಾವಳಿಯ ಆಚರಣೆಗೆ ಅರ್ಥ ದೊರೆಯುತ್ತದೆ.
– ಸಾಧನ ಶಾಸ್ತ್ರೀ
ಭಂಡಾರ್ಕರ್ ಕಾಲೇಜು ಕುಂದಾಪುರ