Advertisement

ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಿಸೋಣ

06:30 PM Aug 29, 2019 | Lakshmi GovindaRaj |

ಚನ್ನರಾಯಪಟ್ಟಣ: ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಯನ್ನು ಪ್ರೋತ್ಸಾಹಿಸಲು ತಾಲೂಕು ಆಡಳಿತ ಮುಂದಾಗಬೇಕಿದ್ದು ನಿಷೇಧಿತ ಪ್ಲಾಸ್ಟರ್‌ ಆಫ್ ಪ್ಯಾರಿಸ್‌(ಪಿಒಪಿ) ಗಣಪತಿ ಮೂರ್ತಿ ಮಾರಾಟ ಮಾಡದಂತೆ ತಡೆಯುವ ಮೂಲಕ ಜಲಮಾಲಿನ್ಯಕ್ಕೆ ಕಡಿವಾಣ ಹಾಕಬೇಕಿದೆ.

Advertisement

ಅಧಿಕಾರಿಗಳ ನಿರ್ಲಕ್ಷ್ಯ: ತಾಲೂಕು ಆಡಳಿತ, ಪುರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹಲವು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಚತುರ್ಥಿ ಹಬ್ಬ ಆಚರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿಲ್ಲ, ಹಾಗಾಗಿ ಪಟ್ಟಣದ ಸೇರಿದಂತೆ ತಾಲೂಕಿನ ನುಗ್ಗೇಹಳ್ಳಿ, ಹಿರೀಸಾವೆ, ಬಾಗೂರು ಹಾಗೂ ಶ್ರವಣಬೆಳಗೊಳ ಹೋಬಳಿ ಕೇಂದ್ರದ‌ಲ್ಲಿ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಮಾರಾಟ ಜೋರಾಗಿ ನಡೆಯುತ್ತದೆ.

ತಾಲೂಕಿನ 41 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು ತಮ್ಮ ವ್ಯಾಪ್ತಿಯ ಗ್ರಾಮದಲ್ಲಿ ಪಿಒಪಿ ಮತ್ತು ವಿಷಕಾರಿ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಸಾರ್ವಜನಿರಲ್ಲಿ ಅರಿವು ಮೂಡಿಸಿ ಕಲ್ಯಾಣಿ, ಕೆರೆ, ಕಟ್ಟೆಯ ಜಲ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕು. ಈ ಬಗ್ಗೆ ತಾಪಂ ಇಒ ಹಾಗೂ ತಹಶೀಲ್ದಾರ್‌ ಸಭೆ ನಡೆಸಿ ಪರಿಸರ ಸ್ನೇಹಿ ಹಬ್ಬ ಅಚರಣೆಗೆ ಒತ್ತು ನೀಡಬೇಕು.

ಜಲ ಮೂಲಗಳನ್ನು ಸಂರಕ್ಷಿಸಿ: ಕೇಂದ್ರ ಸರ್ಕಾರ ಜಲಶಕ್ತಿ ಹಾಗೂ ರಾಜ್ಯದ ಜಲಾಮೃತ ಯೋಜನೆ ಮೂಲಕ ಕೆರೆ, ಕಟ್ಟೆ, ಕಲ್ಯಾಣಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಜಲಮೂಲಗಳಿಗೆ ಹಾನಿ ಉಂಟು ಮಾಡುವ ಪಿಒಪಿ ಮೂರ್ತಿಗಳಿಲ್ಲದ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಗುರಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಮಾಡಬೇಕಿದೆ. ತಾಲೂಕು ಆಡಳಿತ ಹಾಗೂ ಪುರಸಭೆ ಅಧಿಕಾರಿ ಅದನ್ನು ಸಹಕಾರಗೊಳಿಸಬೇಕಿದೆ.

ಸಭೆ ನಡೆಸದ ಅಧಿಕಾರಿಗಳು: ಈಗಾಗಲೇ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮದಲ್ಲಿ ವಿಘ್ನೇಶ್ವರ ಮೂರ್ತಿ ತಯಾರಿಕೆ ಕಾರ್ಯ ಭರದಿಂದ ನಡೆಯುತ್ತಿದೆ. ಹೊರ ಜಿಲ್ಲೆ ಹಾಗೂ ರಾಜ್ಯದಲ್ಲಿ ತಯಾರಾಗುವ ಪಿಒಪಿ ವಿಘ್ನೇಶ್ವರ ಮೂರ್ತಿ ಖರೀದಿಗೆ ಕೆಲ ವರ್ತಕರು ಈಗಾಗಲೆ ಮುಂಗಡ ಹಣ ಸಂದಾಯ ಮಾಡಿದ್ದಾರೆ. ತಾಲೂಕಿನ ಅಧಿಕಾರಿಗಳು ಗಣೇಶ ಮೂರ್ತಿ ತಯಾರಕರು ಹಾಗೂ ಮಾರಾಟಗಾರರ ಸಭೆ ನಡೆಸದೇ ಇರುವುದನ್ನು ನೋಡಿದರೆ ತಾಲೂಕಿನಲ್ಲಿ ಪ್ರಸಕ್ತ ವರ್ಷವೂ ಪಿಒಪಿ ಮೂರ್ತಿಗಳು ಮಾರಾಟದ ಲಕ್ಷಣಗಳು ಕಾಣುತ್ತಿವೆ.

Advertisement

ಪಿಒಪಿ ಮೂರ್ತಿ ಸ್ಥಾಪಿಸಿದರೆ ದಂಡ ವಿಧಿಸಿ: ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನೆಗೆ ಅನುಮತಿ ನೀಡುವಾಗ ಪರಿಸರ ಸ್ನೇಹಿ ಗಣಪತಿ ಮೂರ್ತಿ ಮಾತ್ರ ಅನುಮತಿಗೆ ನೀಡಬೇಕು ಹಾಗೂ ಪಿಒಪಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಅವುಗಳನ್ನು ವಶಕ್ಕೆ ಪಡೆಯುವುದಲ್ಲದೆ ಸಾವಿರಾರು ರೂ. ದಂಡ ಹಾಕಲಾಗುವುದು ಎಂಬ ಎಚ್ಚರಿಕೆಯನ್ನು ಸರ್ಕಾರಿ ಅಧಿಕಾರಿಗಳು ನೀಡದರೆ ಮಾತ್ರ ಹೊರ ರಾಜ್ಯ ಮತ್ತು ಜಿಲ್ಲೆಯಿಂದ ತಾಲೂಕಿಗೆ ಪಿಒಪಿ ಮೂರ್ತಿ ನುಸುಳದಂತೆ ತಡೆಯಬಹುದು.

ಜನಪ್ರತಿನಿಧಿಗಳು ಮಾದರಿಯಾಗಲಿ: ಕೆಲ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರು ತಮ್ಮ ಮನೆಯಲ್ಲಿ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸುವ ಮೂಲಕ ಇತರರಿಗೆ ಮಾದರಿ ಆಗಬೇಕಿದೆ. ಸಾರ್ವಜನಿಕವಾಗಿ ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪಿಸುವ ಯುವಕರಿಗೆ ಧನ ಸಹಾಯ ನೀಡುವ ಕೆಲ ರಾಜಕೀಯ ಪ್ರಭಾವಿ ಮುಖಂಡರು ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸುವಂತೆ ಸೂಚಿಸಬೇಕಿದೆ.

ಕೆರೆ, ಕಲ್ಯಾಣಿ ನೀರು ಮಲೀನವಾದರೆ ಜಲಚರ ಪ್ರಾಣಿಗಳಗೆ ತೊಂದರೆ ಆಗುವುದಲ್ಲದೆ, ಕುರಿ, ಮೇಕೆ, ರಾಸುಗಳು ಇದೇ ನೀರನ್ನು ಕುಡಿಯುವುದರಿಂದ ಅವುಗಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ, ಕೆರೆ ಕಲ್ಯಾಯಲ್ಲಿ ಮಹಿಳೆಯರು ಬಟ್ಟೆ ಹಾಗೂ ಪಾತ್ರೆ ಸ್ವಚ್ಚತೆ ಮಾಡುತ್ತಾರೆ ಇವರಿಗೆ ಅಲರ್ಜಿ, ಚರ್ಮ ಕಾಯಿಲೆ ಬರುತ್ತದೆ ಎನ್ನುತ್ತಾರೆ ವೈದ್ಯರು.

ರಾಸಾಯನಿಕ ಯುಕ್ತ ಪಿಒಪಿ: ಪಿಒಪಿ ಮೂರ್ತಿಗೆ ಲೇಪಿಸುವ ಬಣ್ಣಗಳಲ್ಲಿ ಕ್ರೋಮಿಯಂ, ಅರ್ಸೆನಿಕ್‌, ಸೀಸ, ನಿಕ್ಕಲ್‌, ಕ್ಯಾಡ್ಮಿಯಂ, ಮ್ಯಾಂಗನೀಸ್‌ ಮತ್ತು ಸತು ರಾಸಾಯನಿಕಗಳಿರುತ್ತವೆ. ಇವೆಲ್ಲವೂ ವಿಷಕಾರ ರಾಸಾಯನಿಕವಾಗಿದ್ದು ಜೀವ ಸಂಕುಲಕ್ಕೆ ಹಾನಿಯುಂಟು ಮಾಡುತ್ತವೆ ಎನ್ನುವು ವಿಷಯ ತಿಳಿದಿದ್ದೂ ಹಣದ ಆಸೆಗೆ ಇದನ್ನು ತಯಾರು ಮಾಡುತ್ತಿದ್ದಾರೆ.

ನಿಯಮವೇನು?: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974ರ ಕಾಲಂ 33 ಬಿ ನಲ್ಲಿ ತಿಳಿಸಿರುವ ಅಧಿಕಾರ ಬಳಸಿಕೊಂಡು ಕೆರೆ ಹಾಗೂ ಇತರೆ ಜಲಮೂಲಗಳಲ್ಲಿ ಪಿಒಪಿ ಗಣೇಶ ಮೂರ್ತಿ ವಿಸರ್ಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ, ಒಂದೊಮ್ಮೆ ನಿಯಮ ಉಲ್ಲಂಘಿಸಿದರೆ ಜಲಮಾಲಿನ್ಯ ತಡೆ ಮತ್ತು ನಿಯಂತ್ರಣದ ಕಾಯ್ಕೆ 1974ರ 45(ಎ) ಅನ್ವಯ ಸುಮಾರು 10 ಸಾವಿರ ರೂ. ದಂಡ ಹಾಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಒಂದು ವಾರದಲ್ಲಿ ಗಣೇಶ ಮೂರ್ತಿ ತಯಾರು ಮಾಡುವವರು, ಮಾರಾಟ ಮಾಡುವವರ ಸಭೆ ನಡೆಸಲಾಗುವುದು.ಪಿಒಪಿ ಮೂರ್ತಿ ಮಾರಾಟಕ್ಕೆ ಮುಂದಾದರೆ ಮೂರ್ತಿಗಳನ್ನು ಪುರಸಭೆ ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತದೆ.
-ಎಂ.ಕುಮಾರ, ಪುರಸಭೆ ಮುಖ್ಯಾಧಿಕಾರಿ

* ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next