Advertisement

ತಾಂತ್ರಿಕತೆ ಅಭಿವೃದ್ಧಿಗೆ ಬಳಕೆಯಾಗಲಿ:ಪ್ರಧಾನಿ ಮೋದಿ

06:00 AM Feb 12, 2018 | Team Udayavani |

ದುಬೈ: “ತಾಂತ್ರಿಕ ಸಂಶೋಧನೆಗಳು ಮತ್ತು ವಿಚಾರಗಳು ಜನಸಾಮಾನ್ಯರನ್ನು ಸಬಲೀಕರಣಗೊಳಿಸಿದೆ. ಅದನ್ನು ಮಾನವರ ಸದುಪಯೋಗಕ್ಕೆ ಬಳಕೆ ಮಾಡಬೇಕೇ ಹೊರತು ವಿನಾಶಕ್ಕೆ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ದುಬೈನಲ್ಲಿ ಆಯೋಜಿಸಲಾಗಿರುವ ವಿಶ್ವ ಸರ್ಕಾರಿ ಸಮ್ಮೇಳನ (ವರ್ಲ್x ಗವರ್ನ್ಮೆಂಟ್‌ ಸಮಿಟ್‌)ದಲ್ಲಿ ಪ್ರಧಾನ ಭಾಷಣ ಮಾಡಿದ ಪ್ರಧಾನಿ, ತಂತ್ರಜ್ಞಾನದ ದುರ್ಬಳಕೆ ಮೇಲೆ ನಿಗಾ ವಹಿಸಬೇಕಾಗಿದೆ. ಜಗತ್ತು ತಾಂತ್ರಿಕವಾಗಿ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದ್ದರೂ ಬಡತನ ಮತ್ತು ಅಪೌಷ್ಟಿಕತೆ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದೂ ವಿಷಾದಿಸಿದ್ದಾರೆ. “ನಾವು ಹೆಚ್ಚಿನ ಪ್ರಮಾಣದ ಹಣವನ್ನು ಬಾಂಬ್‌, ಕ್ಷಿಪಣಿಗಳನ್ನು ಸಿದ್ಧಪಡಿಸಲು ವಿನಿಯೋಗಿಸುತ್ತಿದ್ದೇವೆ. ಅದೇ ತಂತ್ರಜ್ಞಾನವನ್ನು ಮಾನವ ಸದ್ಬಳಕೆಗೆ ಬಳಸುವಂತಾಗಬೇಕು’ ಎಂದು ಹೇಳಿದ್ದಾರೆ.

ಆರು “ಆರ್‌’ ಗಳು:
“ನಾವು ಆರು ಆರ್‌ಗಳನ್ನು ಪಾಲಿಸಿದರೆ ಸಂತೋಷ ಹೊಂದಲು ಸಾಧ್ಯ. ಅವುಗಳೆಂದರೆ ರೆಡ್ನೂಸ್‌ (ತಗ್ಗಿಸು), ರೀಯೂಸ್‌ (ಮರು ಬಳಕೆ), ರೀಸೈಕಲ್‌ (ಪುನರುಪಯೋಗಿಸು), ರಿಕವರ್‌ (ಮರಳಿ ಪಡೆದುಕೊಳ್ಳುವುದು),  ರೀಡಿಸೈನ್‌ (ಮರು ವಿನ್ಯಾಸ), ರಿಮ್ಯಾನ್ಯುಫ್ಯಾಕ್ಚರ್‌ (ಮರು ಉತ್ಪಾದಿಸು). ಈ ನಿಯಮಗಳನ್ನು ಪಾಲಿಸಿದಾಗ ಸಂತೋಷ ವೃದ್ಧಿಯಾಗುತ್ತದೆ’ ಎಂದಿದ್ದಾರೆ ಪ್ರಧಾನಿ.

ದೇಶಗಳು ಒಂದಾಗಬೇಕು:
ತಮ್ಮ ನೇತೃತ್ವದ ಕೇಂದ್ರ ಸರ್ಕಾರ “ಸಬ್‌ ಕಾ ಸಾಥ್‌; ಸಬ್‌ ಕಾ ವಿಕಾಸ್‌’  ಎಂಬ ನಿಯಮ ಅನುಸರಿಸುತ್ತಿದೆ. ಅದು ಕೇವಲ ಭಾರತಕ್ಕೆ ಮಾತ್ರವಲ್ಲ. ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಅನ್ವಯವಾಗುತ್ತದೆ. ಎಲ್ಲಾ ರಾಷ್ಟ್ರಗಳು ಮುಂದಾಗಿ ಸಹ್ಯ ಅಭಿವೃದ್ಧಿಯತ್ತ ಮನಸ್ಸು ಮಾಡಬೇಕು. ಏಕೆಂದರೆ ನಾವೆಲ್ಲರೂ ಪರಸ್ಪರ ಸಂಪರ್ಕ ಹೊಂದಿದ ವಿಶ್ವದಲ್ಲಿ ಬದುಕುತ್ತಿದ್ದೇವೆ. ತಾಂತ್ರಿಕವಾಗಿ ಜಗತ್ತು ಬದಲಾಗುತ್ತಿರುವಾಗ ಹೊಸ ರೀತಿಯ ಸವಾಲುಗಳು ಬರುತ್ತವೆ. ಅವುಗಳನ್ನು ಎದುರಿಸಲು ಎಲ್ಲ ದೇಶಗಳೂ ಒಂದಾಗಬೇಕು ಎಂದಿದ್ದಾರೆ.

ದೇಶದ ರೈತರ ಆದಾಯವನ್ನು 2020ರ ಒಳಗೆ ವೃದ್ಧಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಆಧಾರ್‌ ಜಾರಿಯಿಂದಾಗಿ ಸರ್ಕಾರಕ್ಕೆ 5 ಲಕ್ಷ ಕೋಟಿ ರೂ.ಗಳಷ್ಟು (8 ಬಿಲಿಯನ್‌ ಡಾಲರ್‌) ಉಳಿತಾಯವಾಗಿದೆ ಎಂದೂ ಹೇಳಿದ್ದಾರೆ.

Advertisement

ದೇಗುಲ ನಿರ್ಮಾಣಕ್ಕೆ ಪಿಎಂ ಶಂಕುಸ್ಥಾಪನೆ
ಪ್ರಧಾನಿ ನರೇಂದ್ರ ಮೋದಿ ಅಬುಧಾಬಿಯಲ್ಲಿ ನಿರ್ಮಾಣವಾಗಲಿರುವ ಮೊದಲ ಹಿಂದೂ ದೇಗುಲಕ್ಕೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 

ದುಬೈ ಒಪೇರಾ ಹೌಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಮೊದಲು ವಿಡಿಯೋ ಕಾನ್ಫರೆನ್ಸ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಗುಲಗಳು ಸೌಹಾರ್ದತೆ ಮತ್ತು ಮಾನವೀಯತೆಯ ನಡುವಿನ ಸಂಬಂಧದ ವೇಗವನ್ನು ವರ್ಧಿಸುವುದಕ್ಕೆ ಕಾರಣವಾಗುತ್ತವೆ. ಈ ಅಂಶವೇ ಭಾರತವನ್ನು ಗುರುತಿಸುವಿಕೆಯ ಪ್ರಧಾನ ಅಂಶ ಎಂದಿದ್ದಾರೆ. ಇಲ್ಲಿನ ಆಡಳಿತಾಧಿಕಾರಿಗಳು ದೇಶದ ಸಾಂಸ್ಕೃತಿಕ ಇತಿಹಾಸ ಗಮನಿಸಿ ಜಮೀನು ನೀಡಿದ್ದಾರೆ. ಹೀಗಾಗಿ ಇತರರಿಗೆ ತೊಂದರೆಯಾಗದಂತೆ ದೇಗುಲದ ನಿರ್ಮಾಣಕಾರರು ಮತ್ತು ಭಕ್ತರು ಮುಂದಿನ ದಿನಗಳಲ್ಲಿ ವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next