Advertisement

ಒಂದಿಂಚು ಒತ್ತುವರಿ ಮಾಡಿದ್ದರೂ ಶಿಕ್ಷೆಯಾಗಲಿ

12:26 PM Mar 03, 2018 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ಒಂದಿಂಚು ಜಾಗ ಒತ್ತುವರಿ ಮಾಡಿರುವುದು ಸಾಬೀತು ಪಡಿಸಿದರೆ, ಜನ ನೀಡುವ ಶಿಕ್ಷೆ ಅನುಭವಿಸಲು ನಾನು ಸಿದ್ಧ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಬಿಜೆಪಿಗೆ ಸವಾಲು ಹಾಕಿದ್ದಾರೆ.

Advertisement

ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿ ಶುಕ್ರವಾರ ಜಲಮಂಡಳಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲವರು ನಾನು ಸರ್ಕಾರಿ ಭೂಮಿ ಕಬಳಿಸಿದ್ದೇನೆಂದು ಸುಳ್ಳು ಆರೋಪ ಮಾಡಿದ್ದಾರೆ. ಅದನ್ನು ಅವರು ಸಾಬೀತುಪಡಿಸಿದರೆ ಜನರು ನೀಡುವ ಶಿಕ್ಷೆಗೆ ಸಿದ್ಧನಾಗಿರುತ್ತೇನೆ ಎಂದರು.

ಬಿಜೆಪಿ ಅವಧಿಯಲ್ಲಿ ಬಿಬಿಎಂಪಿ ಆರ್ಥಿಕ ದಿವಾಳಿಯಾಗಿ ವಾರ್ಡ್‌ಗಳ ಅಭಿವೃದ್ಧಿಗೂ ಅನುದಾನ ನೀಡಲಾಗದಂತಹ ಪರಿಸ್ಥಿತಿಯಲ್ಲಿತ್ತು. ಇನ್ನು ಕೆಲವು ಕಡೆಗಳಲ್ಲಿ ಕಾಮಗಾರಿ ನಡೆಸದೆ ಬಿಲ್‌ ಪಡೆದಿದ್ದಾರೆ. ಜತೆಗೆ ನಗರದ ಪಾರಂಪರಿಕ ಕಟ್ಟಡಗಳನ್ನು ಅಡಮಾನವಿರಿಸಿದ್ದರು. ಹೀಗಾಗಿ ಬಿಜೆಪಿವರಿಂದ ಬೆಂಗಳೂರನ್ನು ರಕ್ಷಿಸಬೇಕಿದೆ ಎಂದು ತಿರುಗೇಟು ನೀಡಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಜಲಮಂಡಳಿಯಿಂದ ನಿರ್ಮಿಸಲು ಉದ್ದೇಶಿಸಿರುವ 210 ದಶಲಕ್ಷ ಲೀಟರ್‌ ಸಾಮರ್ಥಯದ ತ್ಯಾಜ್ಯ ನೀರು ಜಲರೇಚಕ ಯಂತ್ರಗಾರ ಕಟ್ಟಡ ಹಾಗೂ ಪಂಪಿಂಗ್‌ ಮೇನ್‌ ಕಾಮಗಾರಿಯಿಂದ ಸುಮಾರು ಮೂರು ಸಾವಿರ ಮನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯನೀರನ್ನು ಸಂಸ್ಕರಿಸಿ ಸಾಗಿಸಲು ಅನುಕೂಲವಾಗಿದೆ ಎಂದರು. ಜಲಮಂಡಳಿ ಪ್ರಧಾನ ಎಂಜಿನಿಯರ್‌ ಕೆಂಪರಾಮಯ್ಯ ಸೇರಿದಂತೆ ಪ್ರಮುಖರು ಇದ್ದರು. 

ಜಲರೇಚಕ ಯಂತ್ರಾಗಾರ ವಿವರ: ನಿತ್ಯ 210 ಎಂಎಲ್‌ಡಿ ನೀರನ್ನು ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಹರಿಸಲು ಈ ಜಲರೇಚಕ ಯಂತ್ರಾಗಾರ ಕಟ್ಟಡ ನಿರ್ಮಿಸಲಾಗುತ್ತಿದ್ದು, 12 ಯಂತ್ರಗಳು ಕೆಲಸ ಮಾಡಲಿವೆ. 38.61 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, 24 ತಿಂಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. 7 ವರ್ಷಗಳ ನಿರ್ವಹಣೆಗೆ 9.23 ಕೋಟಿ ರೂ. ವ್ಯಯಿಸಲಾಗುತ್ತಿದೆ. ನೀರನ್ನು ಕೆ ಆ್ಯಂಡ್‌ ಸಿ ಕಣಿವೆಯ ಎಸ್‌ಟಿಪಿಗೆ ಹರಿಸಲು 5.3 ಕಿ.ಮೀ. ಉದ್ದದ ಕೊಳವೆ ಮಾರ್ಗ ನಿರ್ಮಾಣ ಕಾಮಗಾರಿಯೂ ನಡೆಯಲಿದ್ದು, 1800 ಮಿ.ಮೀ. ಪೈಪ್‌ಲೈನ್‌ ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಹಲಸೂರು ಕೆರೆ ಎಸ್‌ಟಿಪಿಗೆ ಚಾಲನೆ: ಸಚಿವರಾದ ಕೆ.ಜೆ.ಜಾರ್ಜ್‌ ಹಾಗೂ ರೋಷನ್‌ ಬೇಗ್‌ ಹಲಸೂರು ಕೆರೆಯಂಗಳದಲ್ಲಿನ ಎಸ್‌ಬಿಆರ್‌(ಸಿಕ್ಯೂವೆಷಿಯಲ್‌ ಬ್ಯಾಚ್‌ ರಿಯಾಕ್ಟರ್‌) ತಂತ್ರಜ್ಞಾನದ 2 ಎಂಎಲ್‌ಡಿ ಎಸ್‌ಟಿಪಿ ಚಾಲನೆ ನೀಡಿದರು. ಕೆರೆಯಲ್ಲಿನ ಆಮ್ಲಜನಕ ಕೊರತೆಯಿಂದ ಮೀನುಗಳ ಮಾರಣ ಹೋಮ ನಡೆಯುವುದನ್ನು ತಡೆಯಲು 3.98 ಕೋಟಿ ರೂ. ವೆಚ್ಚದಲ್ಲಿ ಎಸ್‌ಟಿಪಿ ಅಳವಡಿಸಲಾಗಿದ್ದು, 5.53 ಕೋಟಿ ರೂ. ವೆಚ್ಚದಲ್ಲಿ 10 ವರ್ಷ ನಿರ್ವಹಣೆ ಮಾಡಲಾಗುತ್ತದೆ.

ಮೇಲ್ಸೇತುವೆ ಲೋಕಾರ್ಪಣೆ: ಜೆ.ಪಿ.ನಗರದ ಡಾಲರ್ ಕಾಲೋನಿ ವೃತ್ತದ ಬಳಿ 25.89 ಕೋಟಿ ರೂ.ಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆಯನ್ನು ಶುಕ್ರವಾರ ಸಾರ್ವಜನಿಕ ಸೇವೆಗಾಗಿ ಸಮರ್ಪಿಸಲಾಯಿತು. ಮೇಲ್ಸೇತುವೆ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಡಾಲರ್ ಕಾಲೋನಿ ವೃತ್ತದಲ್ಲಿ ದ್ವಿಮುಖ ಸಂಚಾರದ ನಾಲ್ಕು ಪಥಗಳ ಮೇಲ್ಸೇತುವೆಯನ್ನು 25.89 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ರಾಜ್ಯ ಸರ್ಕಾರ ಬೆಂಗಳೂರು ನಗರದ ಅಭಿವೃದ್ಧಿಗೆ 7300 ಕೋಟಿ ರೂ.ಗಳನ್ನು ಈಗಾಗಲೇ ನೀಡಿದೆ. 5100 ಕೋಟಿ ರೂ.ಗಳನ್ನು ಒದಗಿಸಲು ಕ್ರಮ ತೆಗೆದುಕೊಂಡಿದೆ. ಒಟ್ಟು 12400 ಕೋಟಿ ರೂ.ಗಳನ್ನು ನಗರದ ಅಭಿವೃದ್ಧಿಗೆ ವಿನಿಯೋಗಿಸಲಿದ್ದೇವೆ ಎಂದರು. ಶಾಸಕ ಬಿ.ಎನ್‌.ವಿಜಯ್‌ ಕುಮಾರ್‌ ಮಾತನಾಡಿ, ಜಯನಗರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.

ಆದರೆ, ಡಾಲರ್ ಕಾಲೋನಿಯ ಬೃಹತ್‌ ನೀರುಗಾಲುವೆಯು ಸರಿಯಾದ ಸಂಪರ್ಕವಿಲ್ಲದೆ, ಮಳೆಗಾಲದಲ್ಲಿ ಈ ಭಾಗವು ಸಂಪೂರ್ಣ ಮುಳುಗಡೆ ಆಗುವ ಅಂತಕದಲ್ಲಿ ಇರುತ್ತದೆ. ಈ ಕಾಮಗಾರಿಯನ್ನು ಬಹುಬೇಗ ಕೈಗೆತ್ತಿಕೊಂಡು ಮಳೆಗಾಲದ ಒಳಗಾಗಿ ಸಂಪೂರ್ಣಗೊಳಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಗೃಹ ಸಚಿವ ರಾಮಲಿಂಗಾರೆಡ್ಡಿ, ಸ್ಥಳೀಯ ಜನಪ್ರತಿನಿಧಿಗಳು, ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next