Advertisement

ಸಂಸ್ಕೃತ ಲೋಕಭಾಷೆಯಾಗಲಿ

12:36 PM Sep 20, 2018 | Team Udayavani |

ಬೆಂಗಳೂರು: ದೇವಭಾಷೆಯಾಗಿರುವ ಸಂಸ್ಕೃತ, ಲೋಕಭಾಷೆಯಾದರೆ ಮಾತ್ರ ಉಳಿಯಲು ಸಾಧ್ಯ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

Advertisement

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬುಧವಾರ ಹಮ್ಮಿಕೊಂಡಿದ್ದ ನೂತನ ಕಟ್ಟಡಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕೃತ ದೇವ ಭಾಷೆ ಎನ್ನುತ್ತಾರೆ. ಆದರೆ, ಈ ಭಾಷೆ ಲೋಕ ಭಾಷೆ ಆಗಬೇಕು. ಹೀಗಾದರೆ, ಮಾತ್ರ ಸಂಸ್ಕೃತ ಶಾಶ್ವತವಾಗಿ ಉಳಿಲು ಸಾಧ್ಯ. ಸಂಸ್ಕೃತ ಭಾಷೆಯಲ್ಲಿ ಅತ್ಯುತ್ತಮ ಸಾಹಿತ್ಯ, ಮಹಾಕಾವ್ಯ, ತರ್ಕ, ವಿಜ್ಞಾನ, ಅಧ್ಯಾತ್ಮ, ಆಯುರ್ವೇದ ಇನ್ನೂ ಅನೇಕ ವಿಷಯಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳ ರಚನೆಯಾಗಿದೆ. ಭಾರತ ದೇಶದ ಮೂಲ ಸಂಸ್ಕೃತಿ ಸಂಸ್ಕೃತ ಭಾಷೆಯಲ್ಲಿ ಅಡಕವಾಗಿದೆ ಎಂದರು. 

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಸಂಸ್ಕೃತ ಭಾಷೆಯ ಮಹತ್ವ ಅರಿತು ವಿದೇಶಿಗರು ಸಂಸ್ಕೃತ ಅಧ್ಯಯನಕ್ಕೆಂದು ಭಾರತಕ್ಕೆ ಆಗಮಿಸುತ್ತಾರೆ. ಆದರೆ ಭಾರತೀಯರು ಸಂಸ್ಕೃತದಿಂದ ದೂರ ಉಳಿಯುತ್ತಿದ್ದಾರೆ. ಜಗತ್ತಿಗೆ ಜ್ಞಾನ ನೀಡಿದ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಸ್ಕೃತ ವಿವಿಯಿಂದ ಕೊಡಗಿನ ನೆರೆ ಸಂತ್ರಸ್ಥರಿಗೆ 10,17,685 ರೂ.ಗಳ ಚೆಕ್‌ ನೀಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಪದ್ಮಾಶೇಖರ್‌, ಕುಲಸಚಿವೆ ಎಂ.ಶಿಲ್ಪಾ ಮತ್ತಿತರರು ಹಾಜರಿದ್ದರು. 

10 ಎಕರೆ ಜಾಗ ನೀಡಲು ಮನವಿ ದೇಶದ ಯಾವುದೇ ಸಂಸ್ಕೃತ ವಿವಿಗಳಲ್ಲಿ ಇಲ್ಲದಂತಹ ಒಂದು ವರ್ಷದ ಕಾಂಪ್ಯೂಟೇಷನ್‌ ಲಿಂಗ್ವಿಸ್ಟಿಕ್‌ ಡಿಪ್ಲೋಮಾ ಕೋರ್ಸ್‌ ಅನ್ನು ಕರ್ನಾಟಕ ಸಂಸ್ಕೃತ ವಿವಿಯಿಂದ ಆರಂಭಿಸಲಾಗುತ್ತಿದೆ. ಈ ಕೋರ್ಸ್‌ ಕಲಿಯಲು ವಿದೇಶಿ ವಿದ್ಯಾರ್ಥಿಗಳು ಹೆಚ್ಚು ಉತ್ಸುಕರಾಗಿದ್ದಾರೆ. ಹೀಗಾಗಿ ಈ ಕೋರ್ಸ್‌ಗೆ ಅಧ್ಯಯನ ಕೇಂದ್ರ ತೆರೆಯಲು ಬೆಂಗಳೂರು ವಿವಿಯಲ್ಲಿ 10 ಎಕರೆ ಜಾಗ ನೀಡಬೇಕು. 2010ರಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿದ್ದ ಘಟಕ ಕಾಲೇಜುಗಳನ್ನು ಸಂಸ್ಕೃತ ವಿವಿಯೊಂದಿಗೆ ವಿಲೀನಗೊಳಿಸುವಂತೆ ಆದೇಶ ಹೊರಡಿಸಲಾಯಿತು.

Advertisement

ಆದರೆ ಇದುವೆರಗೂ ಉಪನ್ಯಾಸಕರಿಗೆ ಸ್ಥಾನೀಕರಣ ನೀಡುವಂತೆ ಆದೇಶಿಸಿಲ್ಲ. ಉಪನ್ಯಾಸಕರು ಇನ್ನೂ ರಾಜ್ಯ ಸರ್ಕಾರ ನೀಡುವ ವೇತನವನ್ನೇ ಪಡೆದುಕೊಳ್ಳುತ್ತಿದ್ದಾರೆ. ಸ್ಥಾನೀಕರಣವಾದರೆ ಅವರಿಗೆ ಯುಜಿಸಿ ವೇತನ ದೊರೆಯಲಿದೆ. ಹೀಗಾಗಿ ಉನ್ನತ ಶಿಕ್ಷಣ ಇಲಾಖೆ ಗಮನಹರಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಪದ್ಮಾಶೇಖರ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next