ಕಲಬುರಗಿ: ಮುಖ್ಯಮಂತ್ರಿ ಹುದ್ದೆ ಕಾನೂನು ರಕ್ಷಣೆ ಮಾಡುವ, ಜನರ ಹಿತ ಕಾಪಾಡುವ ಸಾಂವಿಧಾನಿಕ ಹುದ್ದೆಯಾಗಿದ್ದರೂ ಸಿಎಂ ಕುಮಾರಸ್ವಾಮಿ ದಂಗೆ ಏಳುವಂತೆ ಜನತೆಗೆ ಕರೆ ನೀಡಿರುವುದು ಸಂವಿಧಾನದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎನ್ನುವುದನ್ನು ನಿರೂಪಿಸುತ್ತದೆ ಎಂದು ಸಂಸದ ಪ್ರಹ್ಲಾದ ಜೋಶಿ ಟೀಕಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಹಿತದೃಷ್ಟಿಯಿಂದ ಕೂಡಲೇ ಕ್ಷಮೆ ಕೋರಬೇಕು. ಈ ತರಹದ ಹೇಳಿಕೆ ಅವರಲ್ಲಿನ ಮಾನಸಿಕ ಸ್ಥಿತಿ ತೋರಿಸುತ್ತದೆ. ಕಾಂಗ್ರೆಸ್ ಜತೆಗೆ ಸೇರಿದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಅನಿಸುತ್ತಿದೆ. ಮಾಜಿ ಸಿಎಂ ಯಡಿಯೂರಪ್ಪ ಮನೆ ಎದುರು ಗೂಂಡಾಗಳನ್ನು ಕಳುಹಿಸಿ ಹೋರಾಟ ಮಾಡಿಸಿದ್ದಾರೆ. ಆ ಗೂಂಡಾಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ದೇವೇಗೌಡರ ಕುಟುಂಬ ಮತ್ತು ಸರ್ಕಾರದ ವಿರುದ್ಧ ಮಾತನಾಡಿದರೆ ಸುರಕ್ಷಿತವಾಗಿರಲು ಬಿಡೋದಿಲ್ಲ ಎಂಬುದಾಗಿ ಬಿಜೆಪಿ ನಾಯಕರಿಗೆ ಬೆದರಿಕೆ ಹಾಕಿದ್ದಾರೆ ಎಂದರು.
ಪಿನ್‌ಗಳೆಲ್ಲ ಇರೋದು ಮುಖ್ಯಮಂತ್ರಿ ಬಳಿ. ಕಿಂಗ್ ಇರೋದು ನಮ್ಮ ಬಳಿ. ರೋಗಿಗೆ ಮನಸ್ಸಿಲ್ಲದಿದ್ದರೆ ಯಾವ ವೈದ್ಯನೂ ಆಪರೇಷನ್ ಮಾಡಲಿಕ್ಕಾಗದು. ರೋಗಿ ಬಂದರೆ ಮಾತ್ರ ಅಪರೇಷನ್ ಸಾಧ್ಯ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಅಸ್ಥಿರತೆಗೆ ಬಿಜೆಪಿ ಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅವರಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗೋದಿಲ್ಲ ಎಂದಿದ್ದರು. ಅದರೆ ಈಗ ಅವರಪ್ಪನ ಬಗ್ಗೆ ಚಿಂತೆಯಾಗಿ ಈ ರೀತಿ ಟ್ವಿಟ್ ಮಾಡಿದ್ದಾರೆ.
– ಪ್ರಹ್ಲಾದ ಜೋಶಿ, ಸಂಸದ