ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಒಂದು ಕ್ವಿಂಟಾಲ್ ಭತ್ತಕ್ಕೆ 2,500 ರೂ. ಬೆಂಬಲ ಬೆಲೆಯನ್ನು ನ. 5ರೊಳಗೆ ಘೋಷಣೆ ಮಾಡದಿದ್ದರೆ ಮೊದಲ ಹಂತವಾಗಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ರೈತರ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಜಿಲ್ಲಾ ಜನಪರ ಹೋರಾಟ ಸಮಿತಿಯ ಪ್ರಮುಖರಾದ ಉಮಾನಾಥ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಮೂರು ವರ್ಷಗಳಿಂದ ಜಿಲ್ಲಾ ಡಳಿತಕ್ಕೆ, ರಾಜ್ಯ ಸರಕಾರಕ್ಕೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಭತ್ತದ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿರುವುದರಿಂದ ಜಿಲ್ಲೆಯ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮುಂದೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಬೇಡಿಕೆಗಳನ್ನು ಸಲ್ಲಿಸಲಾಗುವುದು. ಸರಿಯಾಗಿ ಸ್ಪಂದನೆ ಸಿಗದಿದ್ದರೆ ಮುಂದೆ ಉಗ್ರ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಕೃಷಿಕ ಶಿವಮೂರ್ತಿ ಕೋಟ ಮಾತನಾಡಿ, ರೈತರಿಗೆ ಭತ್ತ ಬೆಳೆಯಲು ಪ್ರತೀ ಎಕರೆಗೆ 30,000 ರೂ. ವೆಚ್ಚವಾಗಲಿದೆ. ಕಟಾವು ಯಂತ್ರಕ್ಕೆ 2,800 ರೂ. ಬಾಡಿಗೆ ನೀಡಬೇಕು. ಆದುದರಿಂದ ಭತ್ತಕ್ಕೆ ಕನಿಷ್ಠ 2,500ರೂ. ಬೆಂಬಲ ನೀಡಬೇಕು. ಆದರೆ ಪ್ರಸ್ತುತ 1,940 ರೂ. ಬೆಂಬಲ ಬೆಲೆ ಇದ್ದರೂ ಮಿಲ್‌ನವರು 1,000 ರೂ.ಗೆ ಖರೀದಿಸುತ್ತಿದ್ದಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ. ಕೇರಳದಲ್ಲಿ ಒಂದು ಕ್ವಿಂಟಾಲ್ ಭತ್ತಕ್ಕೆ 2,748 ರೂ. ನೀಡಲಾಗುತ್ತಿದೆ. ರೈತರಲ್ಲಿ ಈ ರೀತಿ ತಾರತಮ್ಯ ಸರಿಯಲ್ಲ. ರೈತರು ಒಂದು ಕ್ವಿಂಟಾಲ್ ಭತ್ತಕ್ಕೆ 2,500 ರೂ. ಬೆಲೆ ನಿಗದಿಪಡಿಸಿದ್ದುಇದೇ ಬೆಲೆಗೆ ಸಮಸ್ತ ಭತ್ತ ಬೆಳೆಗಾರರಿಂದ ಭತ್ತ ಖರೀದಿಸುವಂತೆ ಖಾಸಗಿಯವರಿಗೆ ಸರಕಾರ ಸ್ಪಷ್ಟ ನಿರ್ದೇಶನ ನೀಡಬೇಕು. ಸ್ವತಃ ಸರಕಾರವೇ ಗ್ರಾಮ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ರಷ್ಯಾ ಲಸಿಕೆ ಅಭಿಯಾನ ಫ್ಲಾಪ್? ಸ್ಫುಟ್ನಿಕ್ ವಿ ಕೋವಿಡ್ ಲಸಿಕೆ ಬಗ್ಗೆ ಜನರ ನಿರ್ಲಕ್ಷ್ಯ
ರೈತ ದಿನಾಚರಣೆಗೆ ವಿರೋಧ: ಎಚ್ಚರಿಕೆ
ಜಯರಾಮ ಶೆಟ್ಟಿ ಮಾತನಾಡಿ, ರೈತರಿಗೆ ನ್ಯಾಯ ದೊರೆಯದಿದ್ದರೆ ಮುಂದೆ ನಡೆಯುವ ರೈತ ದಿನಾಚರಣೆಯನ್ನು ಕರಾವಳಿ ರೈತರು ವಿರೋಧಿಸುತ್ತೇವೆ. ಈವರೆಗೆ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕರಾವಳಿ ರೈತರು ಇನ್ನು ಉಗ್ರ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ. ಇದಕ್ಕೆಲ್ಲ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆಯೇ ಹೊರತು ರೈತರಲ್ಲ ಎಂದರು.ಜನಪರ ಹೋರಾಟ ಸಮಿತಿಯ ಪ್ರಮುಖರಾದ ವಿಕಾಸ್ ಹೆಗ್ಡೆ, ಕೆ. ಭೋಜ ಪೂಜಾರಿ, ವಸಂತ ಗಿಳಿಯಾರು ಉಪಸ್ಥಿತರಿದ್ದರು.
ಕೃಷಿ ಇಲಾಖೆಗೂ ಡಿಸಿ ಇರಬೇಕು
ನಮ್ಮಲ್ಲಿ ಶೇ. 60ರಷ್ಟು ರೈತರಿದ್ದರೂ ಅವರ ಸಮಸ್ಯೆ ಕೇಳಲು ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳೇ ಇಲ್ಲ. ಅಬಕಾರಿ ಇಲಾಖೆಗೆ ಡಿಸಿ ಇದ್ದಂತೆ ಕೃಷಿ ಇಲಾಖೆಗೆ ಡಿಸಿ ಇಲ್ಲದಿರುವುದು ನಮ್ಮ ದುರಂತ. ಹೀಗಿರುವಾಗ ರೈತರ ಸಮಸ್ಯೆಗಳನ್ನು ಕೇಳುವವರು ಯಾರು?.
– ಉಮಾನಾಥ ಶೆಟ್ಟಿ,