Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್, ಕೇಂದ್ರ ಚುನಾವಣಾ ಆಯೋಗದ ಆದೇಶದ ಮೇರೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಜ.22 ರವರೆಗೂ ದಿನಾಂಕ ವಿಸ್ತರಿಸಲಾಗಿದ್ದು, ಎಲ್ಲ ಮತಗಟ್ಟೆ ಅಧಿಕಾರಿಗಳು, ವಿಧಾನಸಭಾ ಕ್ಷೇತ್ರಾವಾರು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳು ಈ ಅವಧಿಯಲ್ಲಿ ಅಭಿಯಾನದ ಮೂಲಕ ಮತದಾರರ ಹೆಸರು ಸೇರ್ಪಡೆ, ವಿಳಾಸ ಬದಲಾವಣೆ, ರದ್ದುಪಡಿಸುವಿಕೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಲು ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೂ ಮೇಲುಸ್ತುವಾರಿ ವಹಿಸಲು ತಿಳಿಸಲಾಗಿದೆ ಎಂದು ಹೇಳಿದರು.
Related Articles
Advertisement
ಮತದಾರರ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಅರ್ಜಿ ನಮೂನೆ 6 ರಲ್ಲಿ ಪಾರ್ಟ್ 4 ಎಂಬಲ್ಲಿ ಹಿಂದಿನ ವಿಳಾಸದ ಮತದಾರರ ಕಾರ್ಡ್ ವಿವರ ಕೊಟ್ಟರೆ ಸಾಕು. ಕೆಲವೆಡೆ ಹಿಂದಿನ ವಿಳಾಸದ ಮತಗಟ್ಟೆ ಅಧಿಕಾರಿ ಬಳಿ ನಿರಾಕ್ಷೇಪಣಾ ಪತ್ರ ಪಡೆದು ಬನ್ನಿ ಎಂದು ಹೇಳುತ್ತಿರುವುದಾಗಿ ದೂರುಗಳು ಬಂದಿವೆ. ಆ ರೀತಿ ಮಾಡುವಂತಿಲ್ಲ. ಯಾವುದೇ ಮತಗಟ್ಟೆ ಅಧಿಕಾರಿ ಬಳಿ ಹೋದರೂ ಅರ್ಜಿ ನಮೂನೆಗಳು ಲಭ್ಯ ಇರಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಉದ್ದೇಶಪೂರ್ವಕವಾಗಿ ಅಲೆದಾಡಿಸುವುದು, ಅನಗತ್ಯ ಮಾಹಿತಿ ಕೇಳುವ ಬಗ್ಗೆ ದೂರು ಬಂದರೂ ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ವಿಶೇಷ ಆ್ಯಪ್ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಹಾಗೂ ಮತಗಟ್ಟೆ ಮಾಹಿತಿ ಪಡೆಯಲು ವಿಶೇಷ ಆ್ಯಪ್ ಸಿದ್ಧಪಡಿಸಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲೂ ಮಾಹಿತಿ ನೀಡಿದೆ. ದೂರವಾಣಿ ಸಂಖ್ಯೆ -9731979899ಗೆ KAEPIC (ಕ್ಯಾಪಿಟಲ್ ಲೆಟರ್)ಒಂದು ಸ್ಪೇಸ್ ಬಿಟ್ಟು ಮತದಾರರ ಎಪಿಕ್ ಸಂಖ್ಯೆ ನಮೂದಿಸಿ ಎಸ್‌ಎಂಎಸ್ ಸಂದೇಶ ಕಳುಹಿಸಿದರೂ ಸಂಪೂರ್ಣ ವಿವರ ಲಭ್ಯವಾಗಲಿದೆ. ಬಾಂಗ್ಲಾ ವಲಸಿಗರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂಬ ದೂರು ಬಂದಿದೆ. ಇದೀಗ ಪರಿಷ್ಕರಣಾ ಕಾರ್ಯ ನಡೆಯುತ್ತಿರುವುದರಿಂದ ಅಂತಹ ದೂರುಗಳಿದ್ದರೆ ಮತಗಟ್ಟೆ ಅಧಿಕಾರಿಗಳಿಗೆ ತಿಳಿಸಿ ತೆಗೆದುಹಾಕಬಹುದು. ನಮ್ಮ ಪ್ರಕಾರ ಮತದಾರರ ಪಟ್ಟಿಗೆ ಸೇರ್ಪಡೆಯಾಗುವುದು ಅಷ್ಟು ಸುಲಭವಲ್ಲ, ಬಾಂಗ್ಲಾ ವಲಸಿಗರಿಗೆ ವಿಳಾಸ ದೃಢೀಕರಣ ಸಿಗುವುದು ಕಷ್ಟ. ಆದರೂ ಆ ಬಗ್ಗೆ ಗಮನ ಹರಿಸಲಾಗಿದೆ. ಉಳಿದಂತೆ ಭಾರತೀಯರಾಗಿದ್ದು ಇಲ್ಲೇ ಖಾಯಂ ವಾಸವಿದ್ದರೆ ಬೇರೆ ರಾಜ್ಯಗಳ ನಿವಾಸಿಗಳಿಗೂ ವಿಳಾಸ ದೃಢೀಕರಣ ಪಡೆದು ಪಟ್ಟಿಗೆ ಸೇರಿಸಲಾಗುವುದು.
– ಸಂಜೀವ್‌ಕುಮಾರ್, ರಾಜ್ಯ ಮುಖ್ಯ ಚುನಾವಣಾಧಿಕಾರಿ