Advertisement

Politics: ರಾಜ್ಯದ ಹಿತಕ್ಕಾಗಿ ಭ್ರಷ್ಟಾಚಾರದ ದಾಖಲೆಗಳನ್ನು ಯತ್ನಾಳ್‌ ನೀಡಲಿ- ಪ್ರಿಯಾಂಕ್‌

11:25 PM Dec 27, 2023 | Team Udayavani |

ಬಾಗಲಕೋಟೆ: ಕೊರೊನಾ ವೇಳೆ ಬಿಜೆಪಿ ನಾಯಕರು ಹೆಣದ ಮೇಲೆ ಹಣ ಮಾಡಿಕೊಂಡಿದ್ದಾರೆ. ಇದನ್ನು ಅವರ ಪಕ್ಷದ ಶಾಸಕ ಯತ್ನಾಳ್‌ ಕೂಡ ಹೇಳಿದ್ದಾರೆ. ರಾಜ್ಯದ ಜನರ ಹಿತಕ್ಕಾಗಿ ಈ ಭ್ರಷ್ಟಾಚಾರದ ದಾಖಲೆಯನ್ನು ಯತ್ನಾಳ್‌ ಸರಕಾರಕ್ಕೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪ್ರಮುಖರು ಉತ್ತರಿಸಲಿ
ಲೋಕಸಭೆ ಚುನಾವಣೆ ಹಿನ್ನೆಲೆ ಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ನಾಯಕರ ಅಭಿಪ್ರಾಯ ಸಂಗ್ರಹಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಬಿಜೆಪಿ ಸರಕಾರದಲ್ಲಿ ಕೊರೊನಾ ವೇಳೆ 40 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ ಎಂದು ಯತ್ನಾಳ್‌ ಹೇಳಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ, ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಉತ್ತರ ಕೊಡಲೇಬೇಕು. ರಾಜ್ಯದ ಹಿತ ಕಾಪಾಡಲು ಯತ್ನಾಳ್‌ ಸತ್ಯವನ್ನು ಜನರ ಮುಂದಿಡಬೇಕು ಹಾಗೂ ಅವರಲ್ಲಿರುವ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನ್ಯಾ| ಮೈಕಲ್‌ ಡಿ. ಕುನ್ನಾ ಸಮಿತಿ ಎದುರು ಹಾಜರುಪಡಿಸಬೇಕು. ಇದು ನಾನು ಮಾಡುವ ಮನವಿ ಎಂದು ಹೇಳಿದರು.

ಸತ್ಯವನ್ನೇ ಹೇಳಿದ ಯತ್ನಾಳ್‌: ಮಧು ಬಂಗಾರಪ್ಪ
ಶಿವಮೊಗ್ಗ: ಯತ್ನಾಳ್‌ ಸತ್ಯವನ್ನೇ ಹೇಳಿದ್ದಾರೆ. ನಾವು ವಿಪಕ್ಷದಲ್ಲಿದ್ದಾಗ ಹೇಳುತ್ತಿದ್ದುದನ್ನೇ ಯತ್ನಾಳ್‌ ಈಗ ಹೇಳಿದ್ದಾರೆ. ಅವ್ಯವಹಾರದ ಬಗ್ಗೆ ಯತ್ನಾಳ್‌ ಸರಕಾರದ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಮ್ಮ ಕೆಲಸ ಹಗುರ ಮಾಡಿದ ಯತ್ನಾಳ್‌: ಪರಂ
ಹಿಂದಿನ ಕೋವಿಡ್‌ ಸಂದರ್ಭದಲ್ಲಿ ಕೇವಲ ನಾಲ್ಕು ಸಾವಿರ ಕೋಟಿ ರೂ. ಭ್ರಷ್ಟಾಚಾರ ಆಗಿರಬಹುದು ಅಂತ ನಮ್ಮಲ್ಲಿ ತಪ್ಪು ಕಲ್ಪನೆ ಇತ್ತು. ಆದರೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆಯಂತೆ 40 ಸಾವಿರ ಕೋಟಿ ರೂ. ಆಗಿದೆ. ನಮ್ಮಿಂದ ಮೊದಲು ಅವರೇ ಹೇಳಿ ನಮ್ಮ ಕೆಲಸವನ್ನು ಹಗುರ ಮಾಡಿದ್ದಾರೆ ಎಂದು ಸಚಿವ ಪರಮೇಶ್ವರ್‌ ಹೇಳಿದರು.

ಯತ್ನಾಳ್‌ ಲಕ್ಷ್ಮಣರೇಖೆ ದಾಟದಿರಲಿ : ಶಹಾಪುರ
ವಿಜಯಪುರ: ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವಂತೆ ಯಾರೂ ವರ್ತಿಸಬಾರದು. ಪಕ್ಷದ ಲಕ್ಷ್ಮಣ ರೇಖೆಯನ್ನು ದಾಟಬಾರದು. ಅವರ(ಯತ್ನಾಳ್‌) ವರ್ತನೆಯನ್ನು ಖಂಡಿಸುವ ವಿಷಯದಲ್ಲಿ ನಾನು ಸಣ್ಣವನು. ಹೀಗಾಗಿ “ಛೋಟಿ ಮೂಮೇ ಬಡೀ ಬಾತ್‌” ಎನ್ನುವಂತೆ ಆಗದಿರಲೆಂದು ಬಾಯಿ ಮುಚ್ಚಿಕೊಂಡಿದ್ದೇನೆ ಎಂದು ಮಾಜಿ ಶಾಸಕ ಅರುಣ ಶಹಾಪುರ ಹೇಳಿದ್ದಾರೆ. ಕೋವಿಡ್‌ ಸಾಮಗ್ರಿ ಖರೀದಿಯಲ್ಲಿ 40 ಸಾವಿರ ಕೋಟಿ ರೂ. ಅವ್ಯವಹಾರದ ಬಗ್ಗೆ ದಾಖಲೆ ಇದ್ದರೆ ಬಸನಗೌಡ ಪಾಟೀಲ್‌ ಯತ್ನಾಳ್‌ ಬಿಡುಗಡೆ ಮಾಡಲಿ. ಆರೋಪ ಮಾಡಿದರೂ ನಂಬುವಂತಿರಬೇಕು. ಯಾವುದೂ ಅತಿಯಾಗಬಾರದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next