ಬೆಳ್ತಂಗಡಿ: ಶೇಣಿ ಯಕ್ಷಗಾನ ಮತ್ತು ಹರಿಕಥೆಯ ಮೇರು ಕಲಾವಿದರು. ಧರ್ಮಸ್ಥಳದ ಯಕ್ಷಗಾನ ಮೇಳದಲ್ಲಿ ಹಿರಿಯ ಕಲಾವಿದರೊಂದಿಗೆ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ಶೇಣಿ ಒಂದು ಸಂಸ್ಥೆಯಾಗಿ ಯಕ್ಷಗಾನ ಮತ್ತು ತಾಳಮದ್ದಳೆಯನ್ನು ಉತ್ತುಂಗಕ್ಕೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇದ್ರ ಕುಮಾರ್ ಹೇಳಿದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಉಜಿರೆ ಘಟಕ, ಶ್ರೀ ಜನಾರ್ದನ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಉಜಿರೆಯ ಯಕ್ಷಜನ ಸಭಾ ಸಹಯೋಗದಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಜರಗಿದ ಶೇಣಿ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಧರ್ಮಸ್ಥಳ ಕ್ಷೇತ್ರದಲ್ಲಿ ಎರಡು ಶತಮಾನಗಳಿಂದ ಯಕ್ಷಗಾನ ಕಲೆಯನ್ನು ನಾಡಿನಾದ್ಯಂತ ಪಸರಿಸುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಯಕ್ಷಗಾನ ಮತ್ತು ಹರಿಕಥೆ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ದಾಖಲೀಕರಣಗೊಳಿಸಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಆರ್.ವಾಸುದೇವ ಮಾತನಾಡಿ, ಉಜಿರೆಯು ಸಾಂಸ್ಕೃತಿಕ ನಗರಿಯಾಗಿ ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿರುವ ನಿಧಿಯಾಗಿದೆ. ಹಿಂದೆ ದೇವಸ್ಥಾನಗಳು ಹರಿಕಥೆಗಳಿಗೆ ರಾಜಾಶ್ರಯ ನೀಡು ತ್ತಿದ್ದರಿಂದ ಆರು ಸಾವಿರ ವರ್ಷ ಹಿಂದಿನ ಪುರಾಣಗಳು ಇಂದಿಗೂ ಜನಜನಿತವಾಗಿದೆ. ಹೀಗಾಗಿ ಹರಿಕಥೆ ಮತ್ತು ಗಮಕ ಕಲೆ ಮನೆ ಮನೆಗಳಿಗೆ ತಲುಪಿಸಲು ದೇವಸ್ಥಾನಗಳು ಆಶ್ರಯ ತಾಣವಾಗಬೇಕು ಎಂದರು.
ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ಉಪ ಸ್ಥಿತರಿದ್ದರು. ಶೇಣಿ ಗೋಪಾಲಕೃಷ್ಣ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಕೂಡ್ಲು ಮಹಾಬಲ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಜಿ.ಕೆ.ಭಟ್ ಸೇರಾಜೆ ನಿರೂಪಿಸಿದರು. ಕಾರ್ಯದರ್ಶಿ ಪಿ.ವಿ.ರಾವ್ ವಂದಿಸಿದರು. ಮಧ್ಯಾಹ್ನ ಎ.ಆರ್.ವಾಸುದೇವ ಅವರಿಂದ ಭಗವದ್ಗೀತೆ ಬಗೆಗೆ ಧಾರ್ಮಿಕ ಉಪನ್ಯಾಸ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದರಿಂದ ಶ್ರೀರಾಮದರ್ಶನ ಮತ್ತು ಸಂಜೆ ಶ್ರೀ ರಾಮ ನಿರ್ಯಾಣ ಪ್ರಸಂಗದ ತಾಳಮದ್ದಳೆ ನಡೆಯಿತು.
57 ವರ್ಷಗಳ ಕಲಾಸೇವೆ
ಯಕ್ಷಗಾನದ ಹಿಮ್ಮೇಳ ಮತ್ತು ಸಂಗೀತಗಾರರಾಗಿ ಸುಮಾರು 57 ವರ್ಷ ಕಲಾಸೇವೆಗೈದ ಉಜಿರೆಯ ವಾಸುದೇವ ಆಚಾರ್ಯ ದಂಪತಿಗೆ ಶೇಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಪ್ರಾಂಶುಪಾಲ ಗೇರುಕಟ್ಟೆ ದಿವಾಕರ ಆಚಾರ್ಯ ಅಭಿನಂದನ ಭಾಷಣ ಮಾಡಿದರು. ಶೇಣಿ ಚಾರಿಟಬಲ್ ಟ್ರಸ್ಟ್ ಸಂಘಟನ ಕಾರ್ಯದರ್ಶಿ ಸರ್ಪಂಗಳ ಈಶ್ವರ ಭಟ್ ಸಮ್ಮಾನ ಪತ್ರ ವಾಚಿಸಿದರು.