ರಾಮನಗರ: ಲಾಕ್‌ಡೌನ್ ವೇಳೆ ಕಾರ್ಮಿಕರಿಗೆ ವೇತನ ಕೊಡಿ ಎಂದು ಕೈಗಾರಿಕೆಗಳ ಮಾಲಿಕರಿಗೆ ಸೂಚನೆಕೊಟ್ಟು ಕೈತೊಳೆದುಕೊಳ್ಳದೆ, ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರು, ರೈತರು ಮತ್ತು ನಿರಾಶ್ರಿತರಿಗೆ ಕೇಂದ್ರ ಸರ್ಕಾರ ಕನಿಷ್ಠ ವೇತನ ಕೊಡ ಬೇಕು ಎಂದು ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಭಾರತ ಸಂವಿಧಾನದ ಪೀಠಿಕೆ ಓದು ಕಾರ್ ಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಲಾಕ್‌ಡೌನ್ ವೇಳೆ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ದಿನಸಿ ಪದಾರ್ಥ ಪೂರೈಸಿ ಸರ್ಕಾರ ಸುಮ್ಮನಾಗುವಂತಿಲ್ಲ. ಲಾಕ್‌ಡೌನ್ ಮುಗಿಯುವವರೆಗೂ ರೈತರು ಮತ್ತು ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರವೇ ನಿಗದಿ ಮಾಡಿರುವ ಕನಿಷ್ಠ ವೇತನ ನೀಡಬೇಕು ಎಂದರು.
ತುರ್ತು ಯೋಜನೆ ಅವಶ್ಯ: ಲಾಕ್‌ಡೌನ್ ಸಂದರ್ಭದಲ್ಲಿ ಬಹು ಮುಖ್ಯವಾಗಿ ಶ್ರಮಿಕರು, ತಳಮಟ್ಟದ ಸಮುದಾಯದ ರಕ್ಷಣೆಗೆ ರಾಜ್ಯ -ಕೇಂದ್ರ ಸರ್ಕಾರ ತುರ್ತು ಯೋಜನೆ ರೂಪಿಸಬೇಕಾಗಿದೆ. ರಾಜ್ಯದ ಬಿಜೆಪಿ, ಕಾರ್ಮಿಕ ಇಲಾಖೆ ಇಲಾಖೆಯಿಂದ ಕೊಡುತ್ತಿರುವ ಸವಲತ್ತು ಗಳನ್ನು ತನ್ನ ಪಕ್ಷವೇ ನೀಡುತ್ತಿದೆ ಏನೋ ಎಂಬಂತೆ ಬಿಂಬಿಸುತ್ತಿದೆ ಎಂದು ಅಸಮಾ ಧಾನ ವ್ಯಕ್ತಪಡಿಸಿದರು. ಪ್ರತಿ ಪಕ್ಷಗಳ ಶಾಸಕರು ಇರುವ ಕ್ಷೇತ್ರಗಳನ್ನು ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಗಂಗಾಧರ್ , ಕೋವಿಡ್-19 ಜನ ಜಾಗೃತಿ ಟಾಸ್ಕ್ ಫೋರ್ಸ್ ಸಮಿತಿ ಇಕ್ಬಾಲ್ ಹುಸೇನ್, ತಾಪಂ ಅಧ್ಯಕ್ಷ ಜಿ.ಎನ್.ನಟರಾಜು, ಪ್ರಮುಖರಾದ ಎ.ಬಿ.ಚೇತನ್ ಕುಮಾರ್, ವಿ.ಎಚ್.ರಾಜು, ರಾಂಪುರ ನಾಗೇಶ್, ಧನಂಜಯ, ಶ್ರೀನಿ ವಾಸ್ ಮೂರ್ತಿ, ಮಹಾಲಕ್ಷ್ಮೀ, ಪ್ರಕಾಶ್, ಚಲುವರಾಜು, ಶಿವಕುಮಾರ ಸ್ವಾಮಿ, ರಾ.ಶಿ.ದೇವರಾಜು ಹಾಗೂ ಸೇವಾದಳದ ಸ್ವಯಂ ಸೇವಕಿಯರು ಉಪಸ್ಥಿತರಿದ್ದರು.
ಸಂವಿಧಾನದ ಪೀಠಿಕೆ ಓದು: ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಕಾಂಗ್ರೆಸ್ ಮುಖಂಡರು ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನಾಗಿ ರೂಪಿಸಿತ್ತು. ಸೋಮವಾರ ನಿಧನರಾದ ಹಿರಿಯ ಕಾಂಗ್ರೆಸ್ಸಿಗ ಎಂ.ವಿ.ರಾಜಶೇಖರನ್ ಅವರ ಭಾವ ಚಿತ್ರಕ್ಕೂ ಗಣ್ಯರು ಪುಷ್ಪ ನಮನ ಸಲ್ಲಿಸಿದರು.