ನಾರಾಯಣಪುರ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಪ್ರಯೋಜನ ಪಡೆಯಬೇಕು ಎಂದು ಯುವ ಮುಖಂಡ ರಮೇಶ ಕೋಳೂರ ಹೇಳಿದರು.
ಇಲ್ಲಿನ ಯಲ್ಲಾಲಿಂಗ ಮಹಾರಾಜರ ಮಠದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಮಹಾಲಕ್ಷ್ಮೀ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕು ಜ್ಞಾನ ವಿಕಾಸ ಸಮನ್ವ ಯಾಧಿಕಾರಿ ಸವಿತಾ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸ್ವಸಹಾಯ ಗುಂಪಿನ ಸದಸ್ಯರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಪ್ರತಿ ತಿಂಗಳು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಹಮ್ಮಿಕೊಂಡು ಆರೋಗ್ಯ, ನೈರ್ಮಲ್ಯ, ಪೌಷ್ಟಿಕ ಆಹಾರ ಶಿಬಿರ, ಸಮಯ ಪಾಲನೆ ಸೇರಿದಂತೆ ಇತರೆ ವಿಷಯಗಳ ಕುರಿತು ಅರಿವು ಮೂಡಿಸಲಾಗುತ್ತದೆ ಜೊತೆಗೆ ಸ್ವಸಹಾಯ ಗುಂಪಿನವರು ವ್ಯವಹಾರದಲ್ಲಿ ಆರ್ಥಿಕ ಶಿಸ್ತು ಪಾಲಿಸುವದನ್ನು ಕಡ್ಡಾಯವಾಗಿ ರೂಢಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು. ಬಸಯ್ಯ ಸ್ವಾಮಿ, ಬಸವರಾಜ ಶಾರದಳ್ಳಿ, ಸ್ವಸಹಾಯ ಗುಂಪಿನ ಸದಸ್ಯರು, ಮಹಿಳೆಯರು ಉಪಸ್ಥಿತರಿದ್ದರು.
ಪೌಷ್ಟಿಕ ಆಹಾರ ಸೇವಿಸಲು ಸಲಹೆ
ಗುರುಮಠಕಲ್: ಮಹಿಳೆಯರು ಉತ್ತಮ ವಿಟಮಿನ್‌ಗಳಿರುವ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಉಪಯೋಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಣಕ್ಕೆ ಕಾರಣಿಕರ್ತರಾಗಬೇಕು ಎಂದು ತಾಪಂ ಸದಸ್ಯ ತಿಪ್ಪಣ್ಣ ಗುಟ್ಟಲ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಖನಿಜಾಂಶ ಹೊಂದಿರುವ ಸೊಪ್ಪು, ತರಕಾರಿ ಜತೆಗೆ ಮೊಳಕೆ ಕಾಳು ತಿನ್ನಬೇಕು. ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯ ಎಂದರು.
ಡಾ| ಭಾಗಾರೆಡ್ಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಉಡಿ ತುಂಬುವ ಮತ್ತು 6 ತಿಂಗಳ ನಂತರದ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮ ಜರುಗಿತು.
ಪಿಡಿಒ ಮಹಾದೇವಪ್ಪ, ಗ್ರಾಪಂ ಮಾಜಿ ಸದಸ್ಯ ಚೆನ್ನಬಸಪ್ಪ, ಡಾ| ಎಂ.ಎಂ. ಪಾಟೀಲ, ಮಲ್ಲಿಕಾರ್ಜುನ, ರಾಘವೇಂದ್ರರೆಡ್ಡಿ, ಮಂಜುನಾಥ, ಯಶೋಧಾ, ಸ್ನೇಹಲತಾ, ಮಲ್ಲಮ್ಮ ಇದ್ದರು.