ಬೆಂಗಳೂರು: ಘನತ್ಯಾಜ್ಯ ನಿರ್ವಹಣೆ, ಮಳೆ ನೀರು ಕೊಯ್ಲು, ಜಲಮೂಲಗಳು ಮತ್ತು ಪರಿಸರ ಸಂರಕ್ಷಣೆ ನಗರ ಸ್ಥಳೀಯ ಸಂಸ್ಥೆಗಳ ಆದ್ಯತೆ ಆಗಬೇಕು. ಈ ನಿಟ್ಟಿನಲ್ಲಿ ಹೆಚ್ಚು ಆವಿಷ್ಕಾರಗಳು ನಡೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಇಲ್ಲಿನ ಅರಮನೆ ಮೈದಾನದ ತ್ರಿಪುರವಾಸಿನಿ ಯಲ್ಲಿ ಹಮ್ಮಿಕೊಂಡಿರುವ “16ನೇ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮ್ಮೇಳನ’ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರವಾಹ, ಭೂಕುಸಿತದಂತಹ ಪ್ರಕೃತಿ ವಿಕೋಪಗಳಿಂದ ಆಗುವ ಅನಾಹುತ ತಪ್ಪಿಸಲು ಯೋಜಿತ ರೀತಿಯಲ್ಲಿ ಸಂರಕ್ಷಿತ ನಗರಗಳನ್ನು ರೂಪಿಸುವುದರ ಜತೆಗೆ ಜಲ ಮತ್ತು ಇಂಧನ ಮೂಲಗಳ ಮಿತವ್ಯಯ ಮತ್ತು ಸಂರಕ್ಷಣೆ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಯೋಜಿತ ರೀತಿಯಲ್ಲಿ ನಗರಗಳನ್ನು ರೂಪಿಸಬೇಕಿದೆ ಎಂದರು.
ವಿಶ್ವದ ಎಲ್ಲ ನಗರಗಳಿಗೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುವುದು ಎಂದ ಅವರು, ವಿಶ್ವದಲ್ಲೇ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಅನುಗುಣವಾಗಿ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಅವಿರತ ಪಯತ್ನ ಮಾಡುತ್ತಿದೆ.
ಇದು ಸಾಕಾರಗೊಂಡರೆ, ವಿಶ್ವದ ಎಲ್ಲ ನಗರಗಳೊಂದಿಗೆ ಸಿಲಿಕಾನ್ ಸಿಟಿಗೆ ಸಂಪರ್ಕ ಸಾಧ್ಯವಾಗುತ್ತದೆ ಎಂದು ಹೇಳಿದರು. ಇದಲ್ಲದೆ, ನಗರ ಸಂಚಾರ ಮತ್ತು ಸಾಗಣೆ ಸುಗಮಗೊಳಿಸಲು ಉಪನಗರ ರೈಲು ಮತ್ತು ಸಮೀಪದ ನಗರಗಳಿಗೆ ತ್ವರಿತ ಸೇವೆ ಒದಗಿಸಲು ಹೈಸ್ಪೀಡ್ ರೈಲು ಸಂಪರ್ಕ, ಸಂಚಾರ ದಟ್ಟಣೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಮುಖ್ಯಮಂತ್ರಿ ಯಡಿಯೂರಪ್ಪ,
ಕರ್ನಾಟಕವು ಇಡೀ ದೇಶದಲ್ಲಿ ತ್ವರಿತವಾಗಿ ನಗರೀಕರಣಗೊಳ್ಳುತ್ತಿರುವ ರಾಜ್ಯ. ಪ್ರಸ್ತುತ ನಗರೀಕರಣ ಮಟ್ಟವು ಶೇ.40ಕ್ಕಿಂತ ಹೆಚ್ಚಿದ್ದು, ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೇಂದ್ರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬೆಂಗಳೂರು ಕೂಡ ಇರುವುದು ಸಂತಸ ತಂದಿದೆ ಎಂದರು.