Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಕಳಂಕ ರಹಿತರು ಎಂದು ಮುಂಬೈನಲ್ಲಿ ಕುಳಿತು ಹೇಳಿದರೆ ಸಾಲದು. ನಿಮಗೆ ರಾಜಕೀಯ ಪುನರ್ಜನ್ಮ ಕೊಟ್ಟ ಪಕ್ಷದ ಋಣ ತೀರಿಸುವ ಬಯಕೆ, ಆತ್ಮಸಾಕ್ಷಿ, ಮನಃಸಾಕ್ಷಿ ಇದ್ದರೆ ಸೋಮವಾರ ವಿಧಾನಸಭೆಗೆ ಬಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೋರುವ ವಿಶ್ವಾಸಮತದಲ್ಲಿ ಭಾಗಿಯಾಗಿ ಎಂದು ಹಳ್ಳಿಹಕ್ಕಿ ವಿಶ್ವನಾಥ್‌ಗೆ ಕುಟುಕಿದರು.
Related Articles
Advertisement
ಹಿಂಬಾಲಕರಿಗೆ ಸೀಟು: ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ನಮ್ಮ ಪಕ್ಷದೊಳಗೆ ಇದ್ದು, ರಾಜ್ಯಾಧ್ಯಕ್ಷರಾಗಿದ್ದರಿಂದ ಅವರು ಹೇಳಿದ ಹಿಂಬಾಲಕರಿಗೆ ಆರು ಸೀಟು ಕೊಟ್ಟಿದ್ದೆವು. ನಾನು ತಪ್ಪು ಮಾಡಿದ್ದರೆ ಅಧ್ಯಕ್ಷರಾಗಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡದೆ ಬಹಿರಂಗವಾಗಿ ಟೀಕೆ ಮಾಡಿದರು.
ಆಪರೇಷನ್ ಕಮಲ: ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಪೋರೇಟ್ ಹಣ ತಂದು ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ನನಗೂ ಅಂಥ ಆಫರ್ ಕೊಟ್ಟಿದ್ದರು. ನನಗೆ ಮಂತ್ರಿಗಿರಿನೂ ಬೇಡ, ಹಣನೂ ಬೇಡ. ಯಾವ ಆಸೆಗೆ ಹೋಗಲಿ ಅಂದಿದ್ದವರು, ಈಗ ಯಾವ ರಾಜಕೀಯ ಆಸೆಗೆ ಮುಂಬೈಗೆ ಹೋಗಿದ್ದೀರಾ? ರಾಜಕೀಯ ಶುದ್ಧ ಹಸ್ತರು, ಪ್ರಾಮಾಣಿಕರೆಂದು ಹೇಳಿಕೊಳ್ಳುವ ನೀವು ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿದ್ದು ಆಪರೇಷನ್ ಕಮಲವಲ್ಲವೇ ಎಂದು ಪ್ರಶ್ನಿಸಿದರು.
ನಾನು ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ನಾನು ಪಕ್ಷದಿಂದ ಹೊರಬರಲು ಸಾ.ರಾ.ಮಹೇಶ್ ಕಾರಣ ಅಂದರು. ನಾನು ಆಕಸ್ಮಿಕವಾಗಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಕ್ಕೆ ನನ್ನನ್ನು ಬಿಜೆಪಿಯ ಹಳೆಯ ಗಿರಾಕಿ ಅಂಥ ಹೇಳಿದ್ರು. ನನಗೂ ಸ್ವಾಭಿಮಾನ ಇದ್ದ ಕಾರಣಕ್ಕಾಗಿ ಅವರ ವಿಚಾರಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು.
ಉತ್ತರ ಕೊಡಬೇಕಿಲ್ಲ: ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಬೇಕಿಲ್ಲ. ಕಾಂಗ್ರೆಸ್‌ನಿಂದ ಗೆದ್ದು ಈವರೆಗೆ ಪಕ್ಷಕ್ಕೆ ರಾಜೀನಾಮೆ ಕೊಡದೆ ಇರುವವರಿಂದ ನಾನು ರಾಜಕೀಯ ಪಾಠ ಕಲಿಯಬೇಕಿಲ್ಲ ಎಂದು ಎಚ್.ವಿಶ್ವನಾಥ್ ಪುತ್ರ, ಜಿಪಂ ಸದಸ್ಯ ಅಮಿತ್ ವಿ.ದೇವರಹಟ್ಟಿಗೆ ತಿರುಗೇಟು ನೀಡಿದರು. ಒಬ್ಬ ಅಧಿಕಾರಿ, ಗುತ್ತಿಗೆದಾರನಿಂದ ಹಣ ಪಡೆದಿದ್ದರೆ ಯಾವುದೇ ವೇದಿಕೆಯಲ್ಲಿ ಹೇಳಲಿ ಎಂದು ಸವಾಲು ಹಾಕಿದರು.
ವಿಶ್ವಾಸ ಖಚಿತ: ವಿಧಾನಸಭೆಯಲ್ಲಿ ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತು ಮಾಡುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ.ಯಾವ ರೀತಿ ವಿಶ್ವಾಸ ಪಡೆಯುತ್ತೇವೆ ಎಂಬುದನ್ನು ಸೋಮವಾರದವರೆಗೆ ಕಾದು ನೋಡಿ, ಅದನ್ನೆಲ್ಲ ಬಹಿರಂಗವಾಗಿ ಹೇಳಲಾಗುವುದಿಲ್ಲ ಎಂದು ಕುತೂಹಲ ಮೂಡಿಸಿದರು.
ಮುಂದೆ ಮತ್ತಷ್ಟು ವಿಷಯ ಬಹಿರಂಗಪಡಿಸುವೆ: ನಿಜ ನಾನು ಡೆವಲಪರ್. ನನಗೂ ವ್ಯವಹಾರ ಇದೆ. ನಾನು ಚುನಾವಣೆಯಲ್ಲಿ ಒಮ್ಮೆ ಸೋತು, ಸತತ ಮೂರು ಬಾರಿ ಗೆದ್ದಿದ್ದೇನೆ. ನೀವು ಐದು ಬಾರಿ ಗೆದ್ದು, ನಾಲ್ಕು ಬಾರಿ ಸೋತಿದ್ದೀರಾ? ನನಗೆ ವ್ಯವಹಾರ ಇದೆ. ನಿಮಗೆ ಏನಿದೆ ವ್ಯವಹಾರ? 9 ಚುನಾವಣೆಗೆ ಹಣ ಎಲ್ಲಿಂದ ಬಂತು ಹೇಳಲಿ ನೋಡೋಣ? ರಾಜಕೀಯವಾಗಿ ಪುನರ್ಜನ್ಮ ಕೊಟ್ಟ ಜೆಡಿಎಸ್‌ನ್ನು ಎಂದಿಗೂ ಮರೆಯಲಾರೆ ಎಂದಿದ್ದ ವಿಶ್ವನಾಥ್ ಅವರ ಮತ್ತಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದರು.
ಜಿಟಿಡಿ ಬೇಡವೆಂದರೂ ವಿಶ್ವನಾಥ್ ಪರ ನಿಂತೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇಂಥಾ ಪರಿಸ್ಥಿತಿ ಬರಲು ಪರೋಕ್ಷವಾಗಿ ನಾನೂ ಕಾರಣನಾಗಿದ್ದೇನೆ. ಜಿ.ಟಿ.ದೇವೇಗೌಡ ಸೇರಿ ಅನೇಕರು ಎಚ್.ವಿಶ್ವನಾಥ್ ಪಕ್ಷಕ್ಕೆ ಬೇಡವೆಂದು ಹೇಳಿದ್ದರು. ಹುಣಸೂರು ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅಥವಾ ಹರೀಶ್‌ಗೌಡರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆದರೆ, ನಾನು ವಿಶ್ವನಾಥ್ ಪರವಹಿಸಿದ್ದೆ. ನಾನು ಅಂದೇ ಬೇಡ ಅಂದಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಾ.ರಾ. ಮಹೇಶ್ ಬೇಸರ ವ್ಯಕ್ತಪಡಿಸಿದರು.
ಹುಣಸೂರು ಕ್ಷೇತ್ರದ ಶಾಸಕರಾದ ಮೇಲೆ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ನಾನು ಜಾತೀವಾದಿಯಾಗಿದ್ದರೆ ವಿಶ್ವನಾಥ್‌ಗೆ ಪಕ್ಷದ ಅಧ್ಯಕ್ಷ ಸ್ಥಾನ ಕೊಡುವುದು ಬೇಡ ಅನ್ನಬಹುದಾಗಿತ್ತು. ಆದರೆ, ನಾನು ಅಂತಹ ಕೆಲಸ ಮಾಡಿಲ್ಲವೆಂದು ವಾಗ್ಧಾಳಿ ನಡೆಸಿದರು.