ಮುಂಬಯಿ, ಅ. 20: ನನ್ನ ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದೇ ನನ್ನ ಭಾಗ್ಯ. ಇಂದಿನ ಕಾರ್ಯಕ್ರಮವನ್ನು ಯುವಕ ಮಂಡಲದವರು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ನಮ್ಮ ಗ್ರಾಮದಲ್ಲಿ ಬಹಳಷ್ಟು ಜನ ದಾನಿಗಳಿ¨ªಾರೆ. ಎಲ್ಲರೂ ಸೇರಿ ಶಾಲೆಗೆ ವೇದಿಕೆ ನಿರ್ಮಾಣ ಮಾಡಬೇಕಿದೆ. ನಮ್ಮ ಶಾಲೆಯಲ್ಲಿ ಶಿಕ್ಷಣದೊಂದಿಗೆ ಶಿಸ್ತನ್ನೂ ಕಲಿಸಲಾಗುತ್ತಿದೆ. ಇಂದು ವಿತರಿಸಿದ ಪುಸ್ತಕ ಹಾಗೂ ವಿದ್ಯಾರ್ಥಿ ವೇತನವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಎಲ್ಲರೂ ಗ್ರಾಮದ ಒಳಿತಿಗೆ ಶ್ರಮಿಸೋಣ ಎಂದು ನಗರದ ಉದ್ಯಮಿ, ಸಮಾಜ ಸೇವಕ ಸುರೇಶ್ ಕಾಂಚನ್ ತಿಳಿಸಿದರು.
ಇತ್ತೀಚೆಗೆ ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ಮುಂಬಯಿ ಉದ್ಯಮಿ ಸುರೇಶ್ ಕಾಂಚನ್ ಮತ್ತು ಯಶೋದಾ ಕಾಂಚನ್ ದಂಪತಿ ವತಿಯಿಂದ ಯುವಕ ಮಂಡಲದ ಆಶ್ರಯದಲ್ಲಿ ನಡೆದ 14ನೇ ವಾರ್ಷಿಕ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು ಪ್ರತೀ ವರ್ಷ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ. ಕೊರೊ ನಾ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಯಮ ಪಾಲಿಸಿ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಹಮ್ಮಿಕೊಂಡ ಯುವಕ ಮಂಡಲದವರು, ಅಧ್ಯಾಪಕ ವರ್ಗ, ಗೋಪಾಲ ಕೃಷ್ಣ ದೇವ ಸ್ಥಾನದ ಆಡಳಿತ ಮಂಡಳಿ ಎಲ್ಲರೂ ಅಭಿನಂದ ನಾರ್ಹರು. ನಮ್ಮ ಊರಿನಲ್ಲಿ, ಶಾಲೆಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಗ್ರಾಮದ ಯಾವುದೇ ರೀತಿಯ ಸೇವೆಗೆ ಸದಾ ಸಿದ್ಧನಿದ್ದೇನೆ.ಕೋವಿಡ್ ನಿಯಮ ಪಾಲಿಸುತ್ತ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದರು.
ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ದೀಪ ಬೆಳಗಿಸಿ ಮಾತನಾಡಿ, ದೇಶದ ಉನ್ನತಿಗಾಗಿ ಸಮಾಜದ ಮಕ್ಕಳು ಶಿಕ್ಷಿತರಾಗಬೇಕು. ಬೈಂದೂರು ವಿಧಾನ ಸಭಾ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರ. ಕ್ಷೇತ್ರದ ಅಭ್ಯುದಯಕ್ಕೆ ಈ ಪರಿಸರದ ಜನರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸುರೇಶ್ ಕಾಂಚನ್ ಅವರು ಶಿಕ್ಷಣಕ್ಕೆ ತನ್ನ ಸಂಪಾದನೆಯ ಭಾಗವನ್ನು ವಿನಿಯೋಗಿಸುತ್ತಿದ್ದಾರೆ. ಅವರಿಂದ ಈ ಗ್ರಾಮದ ಜನರಿಗೆ, ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರಯೋಜನವಾಗುವಂತಾಗಲಿ ಎಂದರು.
ಮುಖ್ಯ ಅತಿಥಿಯಾಗಿದ್ದ ಬಿಜೆಪಿ ನಾಯಕ, ಯುವಕ ಮಂಡಲದ ಗೌರವ ಅಧ್ಯಕ್ಷ ಸದಾನಂದ ಶೇರಿಗಾರ್ ಮಾತನಾಡಿ, ಕೊರೊನಾ ಮಹಾಮಾರಿಯಿಂದ ಎಲ್ಲರೂ ಸಂಕಷ್ಟಕ್ಕೀಡಾಗಿರುವ ಈ ಕಾಲಘಟ್ಟದಲ್ಲಿ ಹುಟ್ಟೂರಿನ ಬಡಮಕ್ಕಳ ವಿದ್ಯಾರ್ಜನೆಗೆ ಸ್ಪಂದಿಸಿದ ಸುರೇಶ್ ಕಾಂಚನ್ ದಂಪತಿಯ ಕಾರ್ಯ ಅಭಿನಂದನೀಯ ಎಂದರು.
ಪ್ರೌಢಶಾಲಾ ಮೂಖ್ಯೋಪಾಧ್ಯಾಯಿನಿ ಮಾಲತಿ ಶುಭ ಹಾರೈಸಿದರು. ಅಂಗನವಾಡಿಯ ಶಿಕ್ಷಕಿ ನಳಿನಿ ಅವರು ಸುರೇಶ್ ಕಾಂಚನ್ ದಂಪತಿಯನ್ನು ಸಮ್ಮಾನಿಸಿದರು. ಈ ಬಾರಿಯ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂಡ ಕಾರ್ತಿಕ್ ಐತಾಳ ಮತ್ತು ರಚನಾ ಅವರನ್ನು ಸುರೇಶ್ ಕಾಂಚನ್ ಹಾಗೂ ಗಣ್ಯರು ಸಮ್ಮಾನಿಸಿದರು. ಗಣ್ಯರು ವಿದ್ಯಾರ್ಥಿಗಳಿಗೆ ಪುಸ್ತಕ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಾಧವ್, ಯುವಕ ಮಂಡಲದ ಅಧ್ಯಕ್ಷ ಚಂದ್ರ ಕುಂದರ್ ಉಪಸ್ಥಿತರಿದ್ದರು. ಮಧುಸೂದನ್ ಶೇರಿಗಾರ ಮತ್ತು ರಾಜೇಂದ್ರ ಪೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಾಸಕರನ್ನು ಸುರೇಶ್ ಕಾಂಚನ್ ಸಮ್ಮಾನಿಸಿ, ಉಪ್ಪಿನಕುದ್ರುವಿನ ಅಭಿವೃದ್ಧಿಗಾಗಿ ಮನವಿ ಪತ್ರ ನೀಡಿದರು. ಸುರೇಶ್ ಕಾಂಚನ್ ಪುತ್ರಿಯರಾದ ನಿಕಿತಾ, ನಿವೇದಿತಾ ಹಾಗೂ ಊರ ಗಣ್ಯರು, ಹೆತ್ತವರುಉಪಸ್ಥಿತರಿದ್ದರು. ಯುವಕ ಮಂಡಲದ ಸಂಚಾಲಕ ಕೃಷ್ಣಮೂರ್ತಿ, ಅಧ್ಯಕ್ಷ ಚಂದ್ರ ಕುಂದರ್, ಶ್ರೀಧರ್ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ಮಂಜುನಾಥ ಪಿ., ಸರ್ವ ಸದಸ್ಯರು, ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುರೋಹಿತರು, ಅರ್ಚಕರುಸಹಕರಿಸಿದರು. ಸೇರಿದ್ದ ಎಲ್ಲರಿಗೂ ಸುರೇಶ್ ಕಾಂಚನ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಜರ್ ನೀಡಲಾಯಿತು. ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.