Advertisement

ಹಬ್ಬದ ಸಮಯದಲ್ಲಿ ಕೋವಿಡ್‌ ಮುಂಜಾಗ್ರತೆ ಪಾಲಿಸೋಣ

01:20 AM Oct 06, 2021 | Team Udayavani |

ಇನ್ನೇನು ಗುರುವಾರದಿಂದ ದಸರಾ ನವರಾತ್ರಿ ಸಡಗರ ಶುರು. ಜತೆಗೆ, ಪಿತೃಪಕ್ಷವೂ ಈ ಅಮಾವಾಸ್ಯೆಗೆ ಕೊನೆಗೊಳ್ಳಲಿದ್ದು, ಜನರ ಖರೀದಿ ಭರಾಟೆಯೂ ಹೆಚ್ಚಾಗಲಿದೆ. ಹಬ್ಬಗಳ ಋತುವಿನಲ್ಲಿ ಜನರು ಒಂದು ಕಡೆ ಸೇರುವುದನ್ನು ತಡೆಯುವುದು ಕಷ್ಟಕರ. ಇಲ್ಲಿ ಸಾರ್ವಜನಿಕರ ಜವಾಬ್ದಾರಿಯೇ ಮುಖ್ಯವಾಗಿದ್ದು, ಕೋವಿಡ್‌ ಇನ್ನೂ ಹೋಗಿಲ್ಲ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಂಡು ವರ್ತಿಸಬೇಕಾಗಿದೆ.

Advertisement

ದಸರಾ ಹಬ್ಬವನ್ನು ಗಮನದಲ್ಲಿ ಇರಿಸಿಕೊಂಡು ರಾಜ್ಯ ಸರಕಾರ, ಮಂಗಳವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮೈಸೂರಿನಲ್ಲಿ ಮತ್ತು ರಾಜ್ಯದ ಇತರೆಡೆಗಳಲ್ಲಿ ಯಾವ ರೀತಿ ಹಬ್ಬ ಆಚರಿಸಬೇಕು ಎಂಬುದನ್ನು ಸವಿವರವಾಗಿ ತಿಳಿಸಿದೆ. ಅಷ್ಟೇ ಅಲ್ಲ, ಎಲ್ಲ ಕಡೆಗಳಲ್ಲಿ ಸಾಕಷ್ಟು ಸರಳವಾಗಿಯೇ ದಸರಾ ಆಚರಿಸಬೇಕು ಎಂದೂ ಹೇಳಿದೆ.  ಮೈಸೂರು ಹೊರತುಪಡಿಸಿ ಬೇರೆ ಕಡೆ ದಸರಾ ಆಚರಣೆಯ ಸಮಾರಂಭಗಳಲ್ಲಿ ಕೇವಲ 400 ಮಂದಿಯಷ್ಟೇ ಸೇರಬೇಕು ಎಂದೂ ಸೂಚಿಸಿದೆ. ಮೈಸೂರಿನಲ್ಲೂ ದಸರಾ ಉದ್ಘಾಟನೆಗೆ 100 ಮಂದಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 100 ಮಂದಿ, ಜಂಬೂಸವಾರಿಗೆ 500 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಜತೆಗೆ ಪಾಲ್ಗೊಳ್ಳುವ ಎಲ್ಲರೂ ಕಡ್ಡಾಯವಾಗಿ ಕನಿಷ್ಠ ಒಂದಾದರೂ ಲಸಿಕೆ ಪಡೆದಿರಬೇಕು ಹಾಗೂ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿ ತರಬೇಕು ಎಂದೂ ಸೂಚಿಸಲಾಗಿದೆ.

ಸರಕಾರದ ಈ ಮಾರ್ಗಸೂಚಿಗಳನ್ನು ಜನರು ಕಡ್ಡಾಯವಾಗಿ ಅನುಸರಿಸಲೇಬೇಕು. ಕೋವಿಡ್‌ ಎರಡನೇ ಅಲೆಯ ದುರಂತವನ್ನು ನಮ್ಮ ಕಣ್ಣೆದುರಲ್ಲೇ ನೋಡಿದ್ದೇವೆ. ಸದ್ಯ ತಜ್ಞರು ಮೂರನೇ ಅಲೆಯ ಆತಂಕವಿಲ್ಲ ಎಂದು ಹೇಳಿದ್ದಾರಾದರೂ, ಬರುವ ಸಾಧ್ಯತೆಯನ್ನು ಅಲ್ಲಗೆಳೆಯಲು ಆಗುವುದೂ ಇಲ್ಲ. ಎಲ್ಲಿ ಹೆಚ್ಚು ಹೆಚ್ಚಾಗಿ ಜನ ಸೇರುತ್ತಾರೆಯೋ ಅಲ್ಲಿ, ಕೊರೊನಾ ಅತ್ಯಂತ ವೇಗವಾಗಿ ಹಬ್ಬುತ್ತದೆ ಎಂಬುದೂ ಸತ್ಯ. ಇದನ್ನು ನಾವು ಈ ಹಿಂದಿನ ತಪ್ಪುಗಳಿಂದ ನೋಡಿದ್ದೇವೆ ಕೂಡ. ಅತ್ತ ಕೇರಳದಲ್ಲಿ ಹಬ್ಬಗಳಿಗಾಗಿಯೇ ನಿರ್ಬಂಧಗಳನ್ನು ಸಡಿಲ ಮಾಡಿದ ಕಾರಣಕ್ಕಾಗಿ ಕೊರೊನಾ ಭಾರೀ ಪ್ರಮಾಣದಲ್ಲಿಯೇ ಹೆಚ್ಚಾಗಿತ್ತು. ಈಗಷ್ಟೇ ಅಲ್ಲಿ ಒಂದು ಹಂತಕ್ಕೆ ಹತೋಟಿಗೆ ಬರುತ್ತಿದೆ. ನಾವು ಇಲ್ಲಿ ಇಂಥ ಯಾವುದೇ ಅವಕಾಶ ನೀಡಬಾರದು.

ಇದನ್ನೂ ಓದಿ:ಐಪಿಎಲ್‌: ಯೋಜನೆಯಂತೆ ಗೆದ್ದ ಮುಂಬೈ ಇಂಡಿಯನ್ಸ್‌

ಸಾಧ್ಯವಾದರೆ ಮನೆಯಲ್ಲೇ ಹಬ್ಬ ಮಾಡಿ. ಹಬ್ಬಕ್ಕಾಗಿ ಹೂವಿನ ಹಾರ ಸೇರಿದಂತೆ ಇತರ  ವಸ್ತುಗಳನ್ನು ತರುವಾಗಲೂ ಮುಂಜಾಗ್ರತೆ ವಹಿಸಿಕೊಳ್ಳಿ. ಕೊರೊನಾ ಲಕ್ಷಣ ಕಾಣಿಸಿಕೊಂಡರೆ ಗೊತ್ತಿರುವ ವೈದ್ಯರ ಹತ್ತಿರ ಒಮ್ಮೆ ತೋರಿಸಿ. ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಹುಷಾರಾಗಿ ನೋಡಿಕೊಳ್ಳಿ.

Advertisement

ಕೆಲವೇ ದಿನಗಳಲ್ಲಿ ದಸರಾ ರಜೆಯೂ ಆರಂಭವಾಗುವುದರಿಂದ ಪ್ರವಾಸದ ಲೆಕ್ಕಾಚಾರದಲ್ಲಿ ಎಲ್ಲೆಂದರಲ್ಲಿ ಹೋಗಿ ಬರುವುದು ಬೇಡ. ಹೋಗಲೇಬೇಕು ಎಂದಾದಲ್ಲಿ ಕೊರೊನಾ ಮುಂಜಾಗ್ರತೆಗಳನ್ನು ಪಾಲಿಸಿ. ಪ್ರವಾಸಕ್ಕೆ ಹೋದ ಕಡೆಗಳಲ್ಲಿ ಗುಂಪು ಗುಂಪಾಗಿ ಇರದೇ, ಒಂದಷ್ಟು ದೂರದಲ್ಲೇ ಇರುವ ಅಭ್ಯಾಸ ಮಾಡಿಕೊಳ್ಳಿ. ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡಿಕೊಳ್ಳಿ. ಈ ರೀತಿ ಎಚ್ಚರಿಕೆಯಿಂದ ಇದ್ದರಷ್ಟೇ ಕೊರೊನಾ ವಿರುದ್ಧ ಗೆಲ್ಲಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next