ತೇರದಾಳ: ವಿದ್ಯಾಭ್ಯಾಸ ಪೂರೈಸಿದವರಿಗೆಲ್ಲ ನೌಕರಿ ಸಿಗುತ್ತದೆಂಬ ಭಾವನೆ ಬಿಟ್ಟು, ಅದನ್ನು ಜ್ಞಾನಾರ್ಜನೆಗಾಗಿ ಬಳಸಿಕೊಳ್ಳಬೇಕು. ಶಿಸ್ತುಬದ್ಧವಾಗಿ ಅಧ್ಯಯನ ಕೈಗೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹೇಳಿದರು.
ಪಟ್ಟಣದ ಜೆ.ವಿ.ಮಂಡಳದ ಎಸ್. ಎಂ. ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿ ಯಿಂದ ನೀಡುವ ಉಚಿತ ಟ್ಯೂಶನ್ ತರಗತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಹತ್ತು ಹಲವು ಯೋಜನೆಗಳಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ಅಂತಹ ಒಂದು ಯೋಜನೆ ಮೂಲಕ ರಾಜ್ಯಾದ್ಯಂತ 32 ಸಾವಿರ ವಿದ್ಯಾರ್ಥಿಗಳು ಶಿಷ್ಯವೇತನ ಪಡೆದುಕೊಂಡಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯಗುರು ಡಿ.ಬಿ. ಪಾಟೀಲ ಮಾತನಾಡಿ, ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಹಲವು ಪ್ರಯತ್ನ ಮಾಡುತ್ತಿವೆ. ಸಂಸ್ಥೆಯವರು ನಮ್ಮ ಶಾಲೆಗೆ ಅವಕಾಶ ನೀಡಿದ್ದು ಸಂತಸ ತಂದಿದ್ದು, ಮಕ್ಕಳು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ತೇರದಾಳ ವಲಯ ಮೇಲ್ವಿಚಾರಕ ಸಂತೋಷ ಮಾಳಿ ಮಾತನಾಡಿದರು. ಸಂಘದ ತೇರದಾಳ ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ ಪಾಟೀಲ, ಸವಿತಾ ಪುಟಾಣಿ ಇದ್ದರು. ಶಿಕ್ಷಕ ಬಿ.ಆರ್. ವನಜೋಳೆ ನಿರೂಪಿಸಿದರು.